ಬಂಟ್ವಾಳ, ಅಕ್ಟೋಬರ್ 09, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು, ಆಲಡ್ಕ, ಗುಡ್ಡೆಅಂಗಡಿ, ರೆಂಗೇಲು, ನಂದಾವರ, ಗೂಡಿನಬಳಿ, ಬಂಟ್ವಾಳ-ಕೆಳಗಿನಪೇಟೆ ಮೊದಲಾದೆಡೆ ಹಝ್ರತ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನದ ಅಂಗವಾಗಿ ಭಾನುವಾರ (ಅಕ್ಟೋಬರ್ 9) ಸಂಭ್ರಮದ ಮಿಲಾದ್ ಆಚರಣೆ ಹಾಗೂ ಸ್ವಲಾತ್ ರ್ಯಾಲಿಗಳು ನಡೆಯಿತು.
ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು ನೇತೃತ್ವದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯಿಂದ ಹೊರಟ ಸ್ವಲಾತ್ ಮೆರವಣಿಗೆಗೆ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಆಲಡ್ಕ, ಬಂಗ್ಲೆಗುಡ್ಡೆ ಮೂಲಕ ಸಾಗಿ ವಾಪಾಸು ಆಲಡ್ಕ ಮಾರ್ಗವಾಗಿ ಮೆಲ್ಕಾರ್, ಗುಡ್ಡೆಅಂಗಡಿ, ಬೋಗೋಡಿ ಮಾರ್ಗವಾಗಿ ಮತ್ತೆ ಆಲಡ್ಕದಲ್ಲಿ ಸಮಾಪ್ತಿಗೊಂಡಿತು.
ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಮಸೀದಿ ಅಧ್ಯಕ್ಷ ಎಸ್ ಮುಹಮ್ಮದ್ ಅವರ ನೇತೃತ್ವದಲ್ಲಿ ನಡೆದ ಸ್ವಲಾತ್ ಮೆರವಣಿಗೆಗೆ ಮಸೀದಿ ಖತೀಬ್ ಅಸ್ವೀಫ್ ದಾರಿಮಿ ಚಾಲನೆ ನೀಡಿದರು. ಗುಡ್ಡೆಅಂಗಡಿ ಮಸೀದಿಯಿಂದ ಹೊರಟು ಬೋಗೋಡಿ, ಆಲಡ್ಕ, ಬಂಗ್ಲೆಗುಡ್ಡೆ ವರೆಗೆ ಸಾಗಿ ಬಂದು ವಾಪಾಸು ಆಲಡ್ಕ ಮಾರ್ಗವಾಗಿ ಮೆಲ್ಕಾರ್ ಮೂಲಕ ಗುಡ್ಡೆಅಂಗಡಿಯಲ್ಲಿ ಸಮಾಪ್ತಿಗೊಂಡಿತು. ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಸಹಿತ ಗಣ್ಯರು ಭಾಗವಹಿಸಿದ್ದರು.
ನಂದಾವರ ಕೇಂದ್ರ ಜುಮಾ ಮಸೀದಿ ವತಿಯಿಂದ ಆಯೋಜಿಸಲಾದ ಸ್ವಲಾತ್ ಮೆರವಣಿಗೆ ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್ ನೇತೃತ್ವದಲ್ಲಿ ನಂದಾವರ ಮಸೀದಿಯಿಂದ ಹೊರಟು ಮಾರ್ನಬೈಲುವರೆಗೆ ಸಾಗಿ ವಾಪಾಸು ನಂದಾವರದಲ್ಲಿ ಸಮಾಪ್ತಿಗೊಂಡಿತು. ಮಸೀದಿ ಖತೀಬ್ ಕಾಸಿಂ ದಾರಿಮಿ ಸವಣೂರು, ಪ್ರಮುಖರಾದ ಶಾಫಿ ನಂದಾವರ, ಬಶೀರ್ ನಂದಾವರ, ನಾಸಿರ್ ನಂದಾವರ ಮೊದಲಾದವರು ಭಾಗವಹಿಸಿದ್ದರು.
ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ವತಿಯಿಂದ ಆಯೋಜಿಸಿದ ಮಿಲಾದ್ ರ್ಯಾಲಿ ಗೂಡಿನಬಳಿ ಮಸೀದಿಯಿಂದ ಹೊರಟು ಬಿ ಸಿ ರೋಡು ವೃತ್ತದ ಮೂಲಕ ಬಂಟ್ವಾಳ ಕೆಳಗಿನಪೇಟೆ ವರೆಗೆ ಸಾಗಿ ಬಳಿಕ ಬಂಟ್ವಾಳ ಕಂಚಿಕಾರಪೇಟೆ ರಸ್ತೆ ಮೂಲಕ ಆಲಡ್ಕವರೆಗೆ ಬಂದು ವಾಪಾಸು ಗೂಡಿಬಳಿಯಲ್ಲಿ ಸಮಾಪ್ತಿಗೊಂಡಿತು.
ಬಂಟ್ವಾಳ ಕೇಂದ್ರ ಜುಮಾ ಮಸೀದಿ ವತಿಯಿಂದ ಆಯೋಜಿಸಲಾದ ಮಿಲಾದ್ ರ್ಯಾಲಿ ಬಂಟ್ವಾಳ ಮಸೀದಿಯಿಂದ ಹೊರಟು ಕೆಳಗಿನಪೇಟೆ, ಕಂಚಿಕಾರಪೇಟೆ ರಸ್ತೆ ಮೂಲಕ ಗೂಡಿನಬಳಿಗೆ ಬಂದು ವಾಪಾಸು ಬಂಟ್ವಾಳದಲ್ಲಿ ಸಮಾಪ್ತಿಗೊಂಡಿತು.
ಮೆಲ್ಕಾರ್-ರೆಂಗೇಲು ಬದ್ರಿಯಾ ಜುಮಾ ಮಸೀದಿ ವತಿಯಿಂದ ಆಯೋಜಿಸಲಾದ ಸ್ವಲಾತ್ ಮೆರವಣಿಗೆ ಮೆಲ್ಕಾರ್ ಮುಖ್ಯಪೇಟೆಗೆ ಬಂದು ಬಳಿಕ ವಾಪಾಸು ರೆಂಗೇಲಿನಲ್ಲಿ ಸಮಾಪ್ತಿಗೊಂಡಿತು.
ರ್ಯಾಲಿಯುದ್ದಕ್ಕೂ ವಿವಿಧ ಸಂಘಟನೆ ಹಾಗೂ ವ್ಯಕ್ತಿಗಳಿಂದ ಸಿಹಿತಿಂಡಿ, ತಂಪು ಪಾನೀಯ, ಅನ್ನದಾನ ನೀಡಿ ಮೆರವಣಿಗೆಯಲ್ಲಿ ಸಾಗಿ ಬಂದವರನ್ನು ಸ್ವಾಗತಿಸಲಾಯಿತು.
0 comments:
Post a Comment