ಮಂಗಳೂರು, ನವೆಂಬರ್ 05, 2022 (ಕರಾವಳಿ ಟೈಮ್ಸ್) : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ದಕ್ಷಿಣ ಕನ್ನಡ ಜಿಲ್ಲೆ, ಹುಬ್ಬಳ್ಳಿ ಹಾಗೂ ಮೈಸೂರು ಜಿಲ್ಲೆಗಳ ಒಟ್ಟು 5 ಕಡೆಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದು, ಮೂರು ಮಂದಿ ನಿಷೇಧಿತ ಪಿ.ಎಫ್.ಐ. ಸಂಘಟನೆಯ ಪ್ರಮುಖರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎನ್.ಐ.ಎ. ಕೇಸ್ ಸಂಖ್ಯೆ ಆರ್.ಸಿ.-36/2022/ಎನ್.ಐ.ಎ./ಡಿ.ಎಲ್.ಐ. ಗೆ ಸಂಬಂಧಿಸಿದಂತೆ ಎನ್.ಐ.ಎ. ಅಧಿಕಾರಿಗಳು ಶನಿವಾರ ಬೆಳಗ್ಗೆ ವಿವಿಧೆಡೆ ದಾಳಿ ನಡೆಸಿದ್ದು, ಈ ಸಂದರ್ಭ ಪಿ.ಎಫ್.ಐ. ಮುಖಂಡರು ಎನ್ನಲಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಕುನ್ಹಗುಡ್ಡೆ ನಿವಾಸಿ ಆದಂ ಕುಂಞÂ ಅವರ ಪುತ್ರ ಕೆ ಮಹಮ್ಮದ್ ಇಕ್ಬಾಲ್, ಬೆಳ್ಳಾರೆ ಶಾಫಿ ಅಪಾರ್ಟ್‍ಮೆಂಟ್ ನಿವಾಸಿ ಆದಂ ಕುಂಞÂ ಅವರ ಪುತ್ರ ಕೆ ಇಸ್ಮಾಯಿಲ್ ಶಾಫಿ ಹಾಗೂ ಸುಳ್ಯ ತಾಲೂಕು, ನಾವೂರು ಕಸಬಾ ಗ್ರಾಮದ ಗಾಂಧಿನಗರ ನಿವಾಸಿ ಎಂ ಎ ಮೊಹಮ್ಮದ್ ಅವರ ಪುತ್ರ ಇಬ್ರಾಹಿಂ ಷಾ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರ ಮನೆ ಶೋಧದ ವೇಳೆ ಕೆಲವೊಂದು ಡಿಜಿಟಲ್ ಸಾಧನಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೆಳ್ಳಾರೆ ನಿವಾಸಿ ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಅವರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಕಾರ್ಯಕರ್ತರು ಎನ್ನಲಾದ ಮಂದಿಗಳು ಜುಲೈ 26 ರಂದು ಮಾರಾಯುಧಗಳಿಂದ ಕಡಿದು ಕೊಲೆ ಮಾಡಿದ್ದರು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2022 ರಂತೆ ಪ್ರಕರಣ ದಾಖಲಾಗಿತ್ತು. ಬಳಿಕ ಈ ಬಗ್ಗೆ ಆಗಸ್ಟ್ 4 ರಂದು ಎನ್.ಐ.ಎ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 10 ಮಂದಿಗಳನ್ನು ಬಂಧಿಸಲಾಗಿದೆ ಹಾಗೂ ತಲೆಮರೆಸಿಕೊಂಡಿರುವ ನಾಲ್ವರ ಪತ್ತೆಗೆ ಎನ್‍ಐಎ ಬಹುಮಾನ ಘೋಷಿಸಿದ್ದು, ಅವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment