ಶಶಿಕಲಾ (ಅನಂತಾಡಿ) |
ಸುಜಾತಾ (ನೆಟ್ಲಮುಡ್ನೂರು) |
ಬಂಟ್ವಾಳ, ಫೆಬ್ರವರಿ 28, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಅನಂತಾಡಿ ಗ್ರಾಮ ಪಚಾಯತಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ ಜಯಗಳಿಸುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಬೇಧಿಸಿ ಇದೇ ಮೊದಲ ಬಾರಿಗೆ ಖಾತೆ ತೆರೆದು ಇತಿಹಾಸ ಸೃಷ್ಟಿಸಿದೆ.
ಇದೇ ವೇಳೆ ನೆಟ್ಲಮುಡ್ನೂರು ಪಂಚಾಯತಿಯ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತೆ ಸುಜಾತಾ ಜಯಗಳಿಸುವ ಮೂಲಕ ಬಿಜೆಪಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ವಿವಿಧ ಕಾರಣಗಳಿಂದ ತೆರವಾದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತಿನ ತಲಾ ಒಂದು ಸ್ಥಾನಗಳಿಗೆ ಶನಿವಾರ (ಫೆ 25) ನಡೆದ ಉಪ ಚುನಾವಣೆಯ ಮತ ಎಣಿಕೆ ಬಂಟ್ವಾಳ ಆಡಳಿತ ಸೌಧದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಅನಂತಾಡಿ ಗ್ರಾಮ ಪಂಚಾಯತಿಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 667 ಮತದಾರರ ಪೈಕಿ 500 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಕಾಂಗ್ರೆಸ್ ಬೆಂಬಲಿತೆ ಶಶಿಕಲಾ 254 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತೆ ಗೀತಾ ಚಂದ್ರಶೇಖರ್ 242 ಮತಗಳನ್ನು ಪಡೆದಿದ್ದಾರೆ. 4 ಮತಗಳು ತಿರಸ್ಕೃತಗೊಂಡಿದೆ. ನಿರಂತರವಾಗಿ ಬಿಜೆಪಿ ಬೆಂಬಲಿತರು ಗೆದ್ದುಕೊಳ್ಳುತ್ತಿದ್ದ ಈ ಸ್ಥಾನವನ್ನು ಈ ಬಾರಿ 12 ಮತಗಳ ಅಂತರದಲ್ಲಿ ಕಾಂಗ್ರೆಸ್ ಬೆಂಲಿತೆ ಗೆದ್ದುಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ನೆಟ್ಲಮುಡ್ನೂರು ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 816 ಮತದಾರರ ಪೈಕಿ 596 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಬಿಜೆಪಿ ಬೆಂಬಲಿತೆ ಸುಜಾತ ಜಗದೀಶ ಪೂಜಾರಿ 353 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತೆ ಹರಿಣಾಕ್ಷಿ 239 ಮತಗಳನ್ನು ಪಡೆದಿದ್ದಾರೆ. 4 ಮತಗಳು ತಿರಸ್ಕೃತಗೊಂಡಿದೆ. ಬಿಜೆಪಿ ಬೆಂಬಲಿತರ ವಶದಲ್ಲೇ ಇದ್ದ ಸ್ಥಾನವನ್ನು ಮತ್ತೆ 114 ಮತಗಳ ಅಂತರದಲ್ಲಿ ಗೆದ್ದುಕೊಳ್ಳುವ ಮೂಲಕ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
0 comments:
Post a Comment