ಪುತ್ತೂರು, ಫೆಬ್ರವರಿ 15, 2023 (ಕರಾವಳಿ ಟೈಮ್ಸ್) : ತಾಲೂಕಿನ ಆರ್ಯಾಪು ಗ್ರಾಮದ ಬಳಕ್ಕ ಎಂಬಲ್ಲಿ ಮಂಗಳವಾರ ರಾತ್ರಿ ಕಾರೊಂದು 2 ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಕಾರು ಚಾಲಕ ಮೃತಪಟ್ಟು ಇತರ ಮೂರು ಮಂದಿ ಗಾಯಗೊಂಡಿದ್ದಾರೆ.
ಮೃತ ಕಾರು ಚಾಲಕನನ್ನು ಮುರಳಿಕೃಷ್ಣ ನಿಡ್ಪಳ್ಳಿ ಎಂದು ಹೆಸರಿಸಲಾಗಿದೆ. ಗಾಯಾಳುಗಳನ್ನು ಶಶಿಕುಮಾರ್ ಬೆಟ್ಟಂಪಾಡಿ, ದಿಲೀಪ್ ಬೆಟ್ಟಂಪಾಡಿ ಹಾಗೂ ನವನೀತ ದೂಮಡ್ಕ ಎಂದು ಹೆಸರಿಸಲಾಗಿದೆ.
ಪಿ.ಡಬ್ಲು,ಡಿ ಗುತ್ತಿಗೆದಾರ ಶಶಿಕುಮಾರ್ ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾನು ಮತ್ತು ಬೆಟ್ಟಂಪಾಡಿಯ ದಿಲೀಪ್ ಎಂಬವರು ಪುತ್ತೂರಿನ ದರ್ಭೆಯಲ್ಲಿದ್ದಾಗ, ಪರಿಚಯದ ನಿಡ್ಪಳ್ಳಿಯ ಮುರಳಿಕೃಷ್ಣ ಅವರು ಕೆಎ.21.ಪಿ.5049 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದು ನಮ್ಮನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು, ಕಾರಿನಲ್ಲಿ ದೂಮಡ್ಕದ ನವನೀತರವರು ಕೂಡಾ ಇದ್ದು, ಮುರಳಿಕೃಷ್ಣರವರು ಕಾರನ್ನು ಚಲಾಯಿಸಿಕೊಂಡು ರಾತ್ರಿ ಸುಮಾರು 8:30 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಬಳಕ್ಕ ಎಂಬಲ್ಲಿಗೆ ತಲುಪಿದಾಗ ಮುರಳಿಕೃಷ್ಣರವರು ಸದ್ರಿ ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ 2 ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಸದ್ರಿ ಕಾರು ರಸ್ತೆಯ ಎಡ ಬದಿಯ ಆಳಕ್ಕೆ ಬಿದ್ದಿರುತ್ತದೆ.
ಅಪಘಾತದಿಂದಾಗಿ ನನ್ನ ಹಲ್ಲು ಮುರಿದಿದ್ದು, ತುಟಿ, ಬಲ ಕಣ್ಣಿನ ಮೇಲ್ಭಾಗ, ಬಲ ಕೋಲು ಕಾಲಿಗೆ ರಕ್ತ ಗಾಯವಾಗಿರುತ್ತದೆ. ದಿಲೀಪ್ ಅವರ ಮುಖ, ಬಲ ಕೋಲು ಕಾಲಿನಲ್ಲಿ ರಕ್ತ ಗಾಯ ಮತ್ತು ಗುದ್ದಿದ ಗಾಯವಾಗಿರುತ್ತದೆ. ನವನೀತ್ ಅವರಿಗೆ ಕುತ್ತಿಗೆಯ ಬಳಿ ಗುದ್ದಿದ ರೀತಿಯ ನೋವುಂಟಾಗಿರುತ್ತದೆ. ಕಾರು ಚಾಲಕ ಮುರಳಿಕೃಷ್ಣ ಅವರಿಗೆ ತಲೆ ಮತ್ತು ಇತರ ಕಡೆಗಳಲ್ಲಿ ತೀವ್ರ ಗಾಯವಾಗಿರುತ್ತದೆ.
ಅಪಘಾತದ ವೇಳೆ ಜಮಾಯಿಸಿದ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಾಲಕ ಮುರಳಿಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
0 comments:
Post a Comment