ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನರ ಒಲವು ಮೊಯಿದಿನ್ ಬಾವಾ ಪರ : ಹೈಕಮಾಂಡಿಗೂ ಸಂದೇಶ ರವಾನೆ, ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮೊಯಿದಿನ್ ಬಾವಾ - Karavali Times ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನರ ಒಲವು ಮೊಯಿದಿನ್ ಬಾವಾ ಪರ : ಹೈಕಮಾಂಡಿಗೂ ಸಂದೇಶ ರವಾನೆ, ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮೊಯಿದಿನ್ ಬಾವಾ - Karavali Times

728x90

7 March 2023

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನರ ಒಲವು ಮೊಯಿದಿನ್ ಬಾವಾ ಪರ : ಹೈಕಮಾಂಡಿಗೂ ಸಂದೇಶ ರವಾನೆ, ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮೊಯಿದಿನ್ ಬಾವಾ

ಮಂಗಳೂರು, ಮಾರ್ಚ್ 07, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟಿಗಾಗಿ ಅಲ್ಪಸಂಖ್ಯಾತ ನಡುವೆ ಸ್ಪರ್ಧೆ ಏರ್ಪಟ್ಟಿರುವ ಮಧ್ಯೆ ಇದೀಗ ಕ್ಷೇತ್ರದ ಜನ ಮಾಜಿ ಶಾಸಕ ಮೊಯಿದಿನ್ ಬಾವಾ ಬಗ್ಗೆ ವಿಶೇಷ ಒಲವು ತೋರುತ್ತಿರುವುದರಿಂದ ಇದು ಬಾವಾ ಅವರಿಗೆ ಪ್ಲಸ್ ಪಾಯಿಂಟ್ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. 

ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡ ಪೈಕಿ ಬಾವಾ ಕೂಡಾ ಸೋಲುಂಡಿದ್ದರು. ಆದರೂ ಕೂಡಾ ಮೊಯಿದಿನ್ ಬಾವಾ ಅವರು ಕ್ಷೇತ್ರದ ಜನರ ನಡುವಿನ ಒಡನಾಟವನ್ನು ಒಂದು ದಿನವೂ ಬಿಟ್ಟಿರಲಿಲ್ಲ. ಐದು ವರ್ಷಗಳಲ್ಲೂ ಕ್ಷೇvತ್ರ ವ್ಯಾಪ್ತಿಯ ಎಲ್ಲ ಕಾರ್ಯಕ್ರಮಗಳು, ಜನರ ಬೇಕು-ಬೇಡಗಳಿಗೆ ಸದಾ ಸ್ಪಂದಿಸುವ ಮೂಲಕ ಜನರ ಮಧ್ಯೆಯೇ ತೊಡಗಿಸಿಕೊಂಡಿದ್ದರು. ರಾಜಕೀಯ ಸ್ಥಾನಮಾನಕ್ಕಿಂತ ಹೆಚ್ಚಾಗಿ ಜನರ ಮಧ್ಯೆ ಸೇವಾ ಮನೋಭಾವದೊಂದಿಗೆ ಬೆರೆತುಕೊಂಡ ಹಿನ್ನಲೆಯಲ್ಲಿ ಇದೀಗ ಬಾವಾ ಅವರು ಮತ್ತೊಮ್ಮೆ ಪಕ್ಷದ ನಾಯಕರಿಂದ ಟಿಕೆಟ್ ಗ್ರೀನ್ ಸಿಗ್ನಲ್ ಪಡೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. 

ಚುನಾವಣೆ ಹತ್ತಿರ ಬರುತ್ತಿರುವಾಗಲಂತೂ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂಬ ಹುಮ್ಮಸ್ಸಿನಲ್ಲಿ ತನ್ನ ದಿಸೆಯಲ್ಲಿ ಕಾರ್ಯಚಟುವಟಿಕೆ ಆರಂಭಿಸಿರುವ ಮೊಯಿದಿನ್ ಬಾವಾ ಅವರು ಕ್ಷೇತ್ರದಲ್ಲಿ ಸರ್ವ ಜನಾಂಗದ ಜನರ ಮನಸ್ಸನ್ನು ಗೆದ್ದುಕೊಳ್ಳುವ ಮೂಲಕ ಮತ್ತೆ ಕಾಂಗ್ರೆಸ್ ಪರ ಹವಾ ಸೃಷ್ಟಿಸುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲೂ ಎಲ್ಲೂ ಪಕ್ಷದ ಹಿರಿಯ ನಾಯಕರ ಹಿಂದಿನಿಂದ ಓಡಾಡಲು ಸಮಯ ವ್ಯರ್ಥ ಮಾಡದೆ ಕ್ಷೇತ್ರದ ಜನರ ಮನಸ್ಸಿನ್ನು ಮತ್ತೆ ಕಾಂಗ್ರೆಸ್ ಪರವಾಗಿ ಗೆದ್ದುಕೊಳ್ಳುವ ನಿಟ್ಟಿನಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ರೂಪಿಸಿ ಅದರಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಮತ್ತೆ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದಾರೆ. 

ಇದೀಗ ಕ್ಷೇತ್ರದ ಹೊರಗೆ ಆತ್ಮೀಯರು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಅದಕ್ಕೂ ಹಾಜರಾಗುತ್ತಾರಲ್ಲದೆ ಯಾವುದೇ ಕಾರಣಕ್ಕೂ ಅಲ್ಲಿ ಸಮಯ ವ್ಯರ್ಥ ಮಾಡದೆ ತಕ್ಷಣ ಕ್ಷೇತ್ರದತ್ತ ಪಯಣ ಮುಂದುವರಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವ ತೋರುತ್ತಿರುವುದು ಕಂಡು ಬರುತ್ತಿದೆ. ಕಳೆದ ಬಾರಿ ಅಪಪ್ರಚಾರದಿಂದಲೇ ಸೋಲಾಗಿದೆ ಎಂದು ಬಾವಾ ಹೇಳಿಕೊಳ್ಳುತ್ತಿದ್ದರೂ ಅದನ್ನೇ ನಂಬಿಕೊಂಡು ಕೂರದೆ ಕಳೆದ ಬಾರಿ ಎಲ್ಲಿಯಾದರೂ ತನ್ನ ವರ್ತನೆ, ಕಾರ್ಯ ಚಟುವಟಿಕೆಯಿಂದ ಎಡವಿದ್ದೇನೆಯೇ ಎಂಬ ಪರಾಮರ್ಶೆ ಮಾಡುತ್ತಾ ಅದೆಲ್ಲವನ್ನೂ ಸರಿಪಡಿಸಿ ಈ ಬಾರಿ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಮನದಾಳ ಅರಿತುಕೊಂಡು ಗರಿಷ್ಠ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದಾಗಿ ತಿಳಿಸುತ್ತಾರೆ. 

ಪಕ್ಷದ ನಾಯಕರ ಮನವೊಲಿಸುವ ನಿಟ್ಟಿನಲ್ಲಿ ಬೆಂಗಳೂರು-ದೆಹಲಿ ಎಂದು ಸದಾ ಓಡಾಡದೆ ಪಕ್ಷದ ನಾಯಕರ ನಿರಂತರ ಒಡನಾಟ ಇಟ್ಟುಕೊಂಡು ಕ್ಷೇತ್ರದಲ್ಲಿದ್ದುಕೊಂಡೇ ಪಕ್ಷಕ್ಕಾಗಿ ತ್ಯಾಗಪೂರ್ಣ ಕಾರ್ಯಚಟುವಟಿಕೆಗಳನ್ನು ಕೈಗೊಂಡು ಓಡಾಡುತ್ತಿರುವುದು ಕಂಡು ಬರುತ್ತಿದೆ. 

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರುವ ಪಕ್ಷದ ಹೈ ಕಮಾಂಡ್ ಹಾಗೂ ಹಿರಿಯ ನಾಯಕರು ಕೂಡಾ ಮಂಗಳೂರು ಉತ್ತರಕ್ಕೆ ಬಾವಾ ಅವರೇ ಅಭ್ಯರ್ಥಿಗೆ ಸೈ ಎಂದು ಕಂಡುಕೊಂಡಿದ್ದಾರೆ ಎನ್ನಲಾಗಿದ್ದು, ಇತರ ಟಿಕೆಟ್ ಆಕಾಂಕ್ಷಿಗಳನ್ನೂ ಕಡೆಗಣಿಸದೆ ಪಕ್ಷ ಸಂಘಟನೆಯ ಹೊಣೆಯನ್ನು ವಹಿಸಿಕೊಟ್ಟು ಅವರನ್ನೂ ಕೂಡಾ ಪಕ್ಷಕ್ಕಾಗಿ ಸೂಕ್ತವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟು ಜನಸೇವೆ ಹಾಗೂ ಪಕ್ಷ ಸಂಘಟನೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ಮಂಗಳೂರು ಕ್ಷೇತ್ರಗಳಿಗೆ ಮಾಜಿ ಸಚಿವರಾದ ಬಿ ರಮಾನಾಥ ರೈ ಹಾಗೂ ಯು ಟಿ ಖಾದರ್ ಸ್ಪರ್ಧೆ ಈಗಾಗಲೇ ಖಚಿತಗೊಂಡಿದ್ದು, ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಇನ್ನುಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಕಸರತ್ತು ತಿಂಗಳಾಂತ್ಯದ ಒಳಗೆ ಎಲ್ಲವೂ ಮುಗಿಸಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸುತ್ತಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನರ ಒಲವು ಮೊಯಿದಿನ್ ಬಾವಾ ಪರ : ಹೈಕಮಾಂಡಿಗೂ ಸಂದೇಶ ರವಾನೆ, ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮೊಯಿದಿನ್ ಬಾವಾ Rating: 5 Reviewed By: karavali Times
Scroll to Top