ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಎಪ್ರಿಲ್ 11ರವರೆಗೂ ಅವಕಾಶ, ಬಂಟ್ವಾಳದಲ್ಲಿ 2,22,901 ಮತದಾರರು, 249 ಮತಗಟ್ಟೆಗಳು : ಚುನಾವಣಾಧಿಕಾರಿ ಆಬಿದ್ ಗದ್ಯಾಲ್ ಮಾಹಿತಿ - Karavali Times ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಎಪ್ರಿಲ್ 11ರವರೆಗೂ ಅವಕಾಶ, ಬಂಟ್ವಾಳದಲ್ಲಿ 2,22,901 ಮತದಾರರು, 249 ಮತಗಟ್ಟೆಗಳು : ಚುನಾವಣಾಧಿಕಾರಿ ಆಬಿದ್ ಗದ್ಯಾಲ್ ಮಾಹಿತಿ - Karavali Times

728x90

30 March 2023

ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಎಪ್ರಿಲ್ 11ರವರೆಗೂ ಅವಕಾಶ, ಬಂಟ್ವಾಳದಲ್ಲಿ 2,22,901 ಮತದಾರರು, 249 ಮತಗಟ್ಟೆಗಳು : ಚುನಾವಣಾಧಿಕಾರಿ ಆಬಿದ್ ಗದ್ಯಾಲ್ ಮಾಹಿತಿ

ಬಂಟ್ವಾಳ, ಮಾರ್ಚ್ 30, 2023 (ಕರಾವಳಿ ಟೈಮ್ಸ್) : ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಾಕಿ ಇರುವ ಅರ್ಹ ಮತದಾರರಿಗೆ ಸೇರ್ಪಡೆಗೊಳಿಸಲು ಇನ್ನೂ ಅವಕಾಶ ಇದ್ದು, ಎಪ್ರಿಲ್ 11ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆಬಿದ್ ಗದ್ಯಾಲ್ ತಿಳಿಸಿದರು. 

ಗುರುವಾರ ಅಪರಾಹ್ನ ಬಿ ಸಿ ರೋಡಿನ ಮಿನಿ ವಿಧಾನಸೌಧ ಕಟ್ಟಡದ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣಾ ಆಯೋಗದ ನೀತಿ ಸಂಹಿತೆ ಪಾಲಿಸಲು ರಾಜಕೀಯ ಪಕ್ಷಗಳು, ನಾಯಕರು ಹಾಗೂ ಅಭ್ಯರ್ಥಿಗಳು ಬದ್ದರಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 1,09,715 ಮಂದಿ ಪುರುಷ ಮತದಾರರು ಹಾಗೂ 1,13,186 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,22,901 ಮಂದಿ ಮತದಾರರು ಇದುವರೆಗೆ ಮತ ಚಲಾಯಿಸಲು ಅರ್ಹರಾಗಿದ್ದು, ಕ್ಷೇತ್ರಾದ್ಯಂತ 249 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 213 ಸಾಮಾನ್ಯ ಮತಗಟ್ಟೆಗಳು ಹಾಗೂ 36 ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಚುನಾವಣಾ ಆಯೋಗ ಮತದಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ ಎಂದ ಚುನಾವಣಾಧಿಕಾರಿ ಗದ್ಯಾಲ್ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ನಿಗಾ ವಹಿಸಲಾಗಿದೆ ಎಂದರು.

ಚುನಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ 25 ಮಂದಿ ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಲಾ 3 ಫ್ಲೈಯಿಂಗ್ ಸ್ಕ್ಯಾಡ್, ವೀಡಿಯೋ ವೀವಿಂಗ್ ಹಾಗೂ ವೀಡಿಯೋ ಮಾನಿಟರಿಂಗ್ ತಂಡಗಳು ಕೂಡಾ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ ಎಂದ ಚುನಾವಣಾಧಿಕಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಪ್ರತಿಯೊಂದು ಕಾರ್ಯಕ್ರಮಗಳಿಗೂ ಚುನಾವಣಾ ಶಾಖೆಯ ಆರ್ ಒ ಕಚೇರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಇದಕ್ಕೆ ಸುವಿದಾ ಪೋರ್ಟಲ್ ಮೂಲಕ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ ಎಂದರು. 

ಈ ಬಾರಿ ವಿಶೇಷವೆಂದರೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶೇ 40ಕ್ಕಿಂತ ಹೆಚ್ಚಿನ ಪ್ರಮಾಣ ವೈಕಲ್ಯ ಹೊಂದಿರುವ ಭಿನ್ನಚೇತನರಿಗೆ ಅವರು ಬಯಸಿದರೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 112 ಡಿ ಮಾದರಿಯ ಅರ್ಜಿಯಲ್ಲಿ ಒಪ್ಪಿಗೆ ನೀಡಿದರೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಅವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಕಚೇರಿಯ ಚುನಾವಣಾ ಕಂಟ್ರೋಲ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ಯಾವುದೇ ಭಯ, ಅಳುಕಿಲ್ಲದೆ ಸಲ್ಲಿಸಬಹುದು ಎಂದರು. ಬಂಟ್ವಾಳ ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ ಈ ಸಂದರ್ಭ ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಎಪ್ರಿಲ್ 11ರವರೆಗೂ ಅವಕಾಶ, ಬಂಟ್ವಾಳದಲ್ಲಿ 2,22,901 ಮತದಾರರು, 249 ಮತಗಟ್ಟೆಗಳು : ಚುನಾವಣಾಧಿಕಾರಿ ಆಬಿದ್ ಗದ್ಯಾಲ್ ಮಾಹಿತಿ Rating: 5 Reviewed By: karavali Times
Scroll to Top