ಬಂಟ್ವಾಳ, ಎಪ್ರಿಲ್ 16, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಉಮೇದುವಾರರಾಗಿ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಯು ರಾಜೇಶ್ ನಾಯಕ್ ಅವರು ಶನಿವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಅಪಾರ ಪ್ರಮಾಣದ ಬೆಂಬಲಿಗರ ಜೊತೆ ಕಾಲ್ನಡಿಯಲ್ಲಿ ಸಾಗಿ ಬಂದು ಮಧ್ಯಾಹ್ನ 1.15ಕ್ಕೆ ಬಿ ಸಿ ರೋಡಿನ ಮಿನಿ ವಿಧಾನಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಆಬಿಲ್ ಗದ್ಯಾಲ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸೇರಿರುವ ಸಹಸ್ರ ಸಹಸ್ರ ಬಿಜೆಪಿ ಕಾರ್ಯಕರ್ತರೇ ಕೇಳಿ, ಪೊಳಲಿ ರಾಜರಾಜೇಶ್ವರಿ ದೇವಳದಿಂದ ಬಂದಾಗಲೇ ಅರ್ಥ ಆಗಿ ಬಿಟ್ಟಿದೆ, ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ರಾಜೇಶ್ ನಾಯ್ಕ್ ಅವರ ಗೆಲುವಿನ ಹೆಬ್ಬಾಗಿಲು ತೆರದು ಬಿಟ್ಟಿದೆ ಎಂದರು.
ಮುಂದಿನ ದಿನಗಳಲ್ಲಿ ಮನೆ ಮನೆಗೆ ಬೇಟಿ ನೀಡಿ ಬಿಜೆಪಿಗೆ ಮತಯಾಚಿಸಿ ಎಂದವರು ಇದೇ ವೇಳೆ ಕಾರ್ಯಕರ್ತರಲ್ಲಿ ವಿನಂತಿ ಮಾಡಿದರು. ಸಮರ್ಥ, ಸಮೃದ್ಧ ಭಾರತ, ಸ್ವಾಭಿಮಾನದ ಭಾರತ ನಿರ್ಮಾಣಕ್ಕಾಗಿ, ಪ್ರಧಾನಿ ನರೇಂದ್ರ ಮೋದಿಯವರ ಯಾವ ಶ್ರಮ, ಸಾರ್ಥಕತೆ ಇದೆ ಅವರ ಬದುಕಿನ ಸಮರ್ಪಣೆಯ ಹೋರಾಟಕ್ಕೆ ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸುವುದರ ಮೂಲಕ ನಮ್ಮ ಕೈಯನ್ನು ರಾಷ್ಟಕೋಸ್ಕರ ಜೋಡಿಸೋಣ ಎಂದವರು ಕರೆ ನೀಡಿದರು.
ಬಂಟ್ವಾಳ ಕ್ಷೇತ್ರದ ಜನ ನೆಮ್ಮದಿಯಿಂದ ಬದುಕು ಕಟ್ಟಿಕೊಂಡು ಇರಲು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರಣ ಎಂದ ಕೋಟ ಪೂಜಾರಿ, ಜನ ಜಾತಿ-ಧರ್ಮವನ್ನು ಮೀರಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಗೋಲಿಬಾರ್ ನಡೆದಿಲ್ಲ, 144 ಸೆಕ್ಷನ್ ಜಾರಿ ಆಗಿಲ್ಲ, ಶಾಂತಿಭಂಗ ಆಗಿಲ್ಲ, ರಿಸರ್ವ್ ಪೊಲೀಸ್ ನಿಂತಿಲ್ಲ, ಇಡೀ ಬಂಟ್ವಾಳದ ಜನ ನೆಮ್ಮದಿಯಿಂದ ಇರಬೇಕಾದರೆ ಶಾಸಕ ರಾಜೇಶ್ ನಾಯ್ಕ್ ಅವರು ಕಾರಣ. ಆ ಕಾರಣಕ್ಕಾಗಿ ಮತ್ತೊಮ್ಮೆ ರಾಜೇಶ್ ನಾಯ್ಕ್ ಅವರನ್ನು ಆರಿಸುವುದು ಕ್ಷೇತ್ರದ ಪ್ರತಿಯೊಬ್ಬ ಮತದಾರರ ಕರ್ತವ್ಯ, ಈ ಕ್ಷೇತ್ರ ಮತ್ತೊಮ್ಮೆ ಬಂಗಾರದ ಕ್ಷೇತ್ರವಾಗಿ ಇರಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದರು.
ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗೆಲುವು ನಿಶ್ಚಿತ. ಆದರೆ ಕಾಂಗ್ರೆಸ್ ಅಪಪ್ರಚಾರದಲ್ಲಿ ಮುಳುಗಿದ್ದು, ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದ ಪೂಜಾರಿ, ಕಾಂಗ್ರೇಸ್ ಮನೆ ಮನೆಗೆ ಬಂದು ಕೊಡುತ್ತಿರುವ ಗ್ಯಾರಂಟಿ ಕಾರ್ಡಿಗೆ ವಾರೆಂಟಿ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಸರಕಾರ ರಾಜ್ಯದ ಜನತೆಗೆ ನೂರಾರು ಯೋಜನೆ ನೀಡಿದೆ. ಅರ್ಜಿ ಹಾಕದೆ ಕಿಸಾನ್ ಸಮ್ಮಾನ್ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಶಿಕ್ಷಣ, ಆರೋಗ್ಯ ನೀಡಿದ್ದಲ್ಲದೇ ಬಡವರ ಮನೆಯ ಹೆಣ್ಣು ಮಕ್ಕಳನ್ನು ಭಾಗ್ಯಲಕ್ಮೀ ಮಾಡಿದ್ದು ಬಿಜೆಪಿ ಸರಕಾರ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಶಾಸಕ, ಬಿಜೆಪಿ ಅಭ್ಯರ್ಥಿ ಯು ರಾಜೇಶ್ ನಾಯ್ಕ್ ಮಾತನಾಡಿ, ನಾಮಪತ್ರ ಸಲ್ಲಿಕೆಯ ವೇಳೆ ಪೊಳಲಿಯಿಂದ ನನ್ನ ಜೊತೆ ಹೆಜ್ಜೆ ಹಾಕಿ ಕಾಲ್ನಡಿಗೆಯಲ್ಲಿ ಬಂದು ಶಕ್ತಿ ನೀಡಿದ ಬಿಜೆಪಿ ಕಾರ್ಯಕರ್ತರಿಗೆ ವಂದನೆಗಳು. ಕಳೆದ ಹತ್ತು ವರ್ಷಗಳಲ್ಲಿ ನನ್ನ ಪ್ರತಿ ಹೆಜ್ಜೆಯಲ್ಲಿಯೂ ಪ್ರೀತಿ ವಿಶ್ವಾಸ, ನಂಬಿಕೆ, ಸಹಕಾರ ನೀಡಿ, ಬೆನ್ನು ತಟ್ಟಿ ಪೊತ್ಸಾಹ ನೀಡಿದ ಕ್ಷೇತ್ರದ ಜನತೆಗೆ ನಾನು ಚಿರ ಋಣಿಯಾಗಿದ್ದೇನೆ. ಪಕ್ಷ ಮತ್ತೊಮ್ಮೆ ಅವಕಾಶ ನೀಡಿದ್ದು, ಕ್ಷೇತ್ರದ ಜನತೆಯ ನಂಬಿಕೆ ವಿಶ್ವಾಸದ ಮೇಲೆ ನಾಮಪತ್ರ ಸಲ್ಲಿಸುತ್ತಿದ್ದು, ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಲ್ನಡಿಗೆಯಲ್ಲಿ ಆಗಮಿಸುವ ವೇಳೆ ಕಾರ್ಯಕರ್ತರು ಶಾಸಕ ರಾಜೇಶ್ ನಾಯ್ಕ್ ಅವರನ್ನು ಮೇಲಕ್ಕೆತ್ತಿ ಸಂಭ್ರಮಿಸಿದರು. ಬಿ ಸಿ ರೋಡು ಪ್ಲೈಓವರ್ ಮೇಲಿಂದ ಪುಷ್ಪಾರ್ಚನೆ ಮಾಡಿದರು. ಕಾಲ್ನಡಿಗೆಯುದ್ದಕ್ಕೂ ಮಹಿಳೆಯರು ಆರತಿ ಕುಂಕುಮ ಹಚ್ಚಿ ಹರಸಿದರು.
ಈ ಸಂದರ್ಭ ಎಂಎಲ್ಸಿ ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಮುಂಬೈ ಕಾಪೆರ್Çೀರೇಟರ್ ಸಂತೋಷ್ ಶೆಟ್ಟಿ ದಳಂದಿಲ, ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯ ಒಳಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿ ನಿರ್ದೇಶಕಿ ಸುಲೋಚನ ಜಿ ಕೆ ಭಟ್, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಕಸ್ತೂರಿ ಪಂಜ, ಸುಚರಿತ ಶೆಟ್ಟಿ, ಕೊರಗಪ್ಪ ನಾಯ್ಕ್, ಶರಣ್ ಪಂಪ್ ವೆಲ್, ರಾಮದಾಸ್ ಬಂಟ್ವಾಳ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಉದಯ ರಾವ್, ಸುದರ್ಶನ ಬಜ, ಪ್ರಭಾಕರ ಪ್ರಭು, ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ, ನಳಿನಿ ಶೆಟ್ಟಿ, ಮಾದವ ಮಾವೆ, ಪುಷ್ಪರಾಜ್ ಚೌಟ, ಕಿಶೋರ್ ಪಲ್ಲಿಪಾಡಿ, ಶ್ರೀಧರ್ ಶೆಟ್ಟಿ ಪುಳಿಂಚ, ಕಮಲಾಕ್ಷಿ ಕೆ ಪೂಜಾರಿ, ರವೀಂದ್ರ ಕಂಬಳಿ, ವಿಲಾಸ್ ನಾಯಕ್, ಪ್ರಕಾಶ್ ಅಂಚನ್, ಚನ್ನಪ್ಪ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ, ರಮನಾಥ ರಾಯಿ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ವಜ್ರನಾಥ ಕಲ್ಲಡ್ಕ, ಭುವನೇಶ್ ಪಚ್ಚಿನಡ್ಕ, ಪ್ರದೀಪ್ ಅಜ್ಜಿಬೆಟ್ಡು, ದಿನೇಶ್ ದಂಬೆದಾರ್, ಸತೀಶ್ ಪೂಜಾರಿ ಆಳಕೆ, ಯಶೋಧರ ಕರ್ಬೆಟ್ಟು, ಸಂದೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ಸುಪ್ರೀತ್ ಆಳ್ಚ, ಗಣೇಶ್ ರೈ ಮಾಣಿ, ಸುರೇಶ್ ಕೋಟ್ಯಾನ್, ಭಾರತಿ ಚೌಟ, ಸೀಮಾ ಮಾದವ, ಹರ್ಷಿಣಿ ಪುಷ್ಪಾನಂದ, ಶರ್ಮಿತ್ ಜೈನ್, ವೆಂಕಟೇಶ್ ನಾವುಡ, ಯಶವಂತ ಪೊಳಲಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment