ಮಹಿಳೆಯರ, ಮಕ್ಕಳ ಸಹಿತ ಸಮಾಜದ ಎಲ್ಲ ವರ್ಗದ ಹಿತ ಕಾಪಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲುವಂತದ್ದು : ಮಾಜಿ ಸಚಿವ ರಮಾನಾಥ ರೈ - Karavali Times ಮಹಿಳೆಯರ, ಮಕ್ಕಳ ಸಹಿತ ಸಮಾಜದ ಎಲ್ಲ ವರ್ಗದ ಹಿತ ಕಾಪಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲುವಂತದ್ದು : ಮಾಜಿ ಸಚಿವ ರಮಾನಾಥ ರೈ - Karavali Times

728x90

2 April 2023

ಮಹಿಳೆಯರ, ಮಕ್ಕಳ ಸಹಿತ ಸಮಾಜದ ಎಲ್ಲ ವರ್ಗದ ಹಿತ ಕಾಪಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲುವಂತದ್ದು : ಮಾಜಿ ಸಚಿವ ರಮಾನಾಥ ರೈ

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್  ವತಿಯಿಂದ ಬಿ.ಸಿ.ರೋಡಿನಲ್ಲಿ ಮಾತೃಶಕ್ತಿ ಸಮಾವೇಶ


ಬಂಟ್ವಾಳ, ಎಪ್ರಿಲ್ 03, 2023 (ಕರಾವಳಿ ಟೈಮ್ಸ್) : ರಾಜೀವ್ ಗಾಂಧಿ ಅವರ ಕಲ್ಪನೆಯಂತೆ ಅನುದಾನ ಕೇಂದ್ರದಿಂದ ನೇರವಾಗಿ ಜಿಲ್ಲೆಗೆ ತಲುಪಿ ಅಭಿವೃದ್ಧಿ ಸಾಧ್ಯವಾಗಿದೆ ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ನೇರ ನಗದು ವರ್ಗಾವಣೆಯ ವ್ಯವಸ್ಥೆಯೂ ಡಾ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಯುಪಿಎ ಸರಕಾರದ ಕೊಡುಗೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸೃಷ್ಟಿಸಿ ಮಕ್ಕಳು, ಮಹಿಳೆಯರ ಆರೋಗ್ಯದ ಬದಲಾವಣೆಗೆ ಇಂದಿರಾ ಗಾಂಧಿ ಕಾರಣರಾಗಿದ್ದು, ಇದೂ ಕೂಡಾ ಈ ದೇಶದ ಜನರಿಗೆ ಕಾಂಗ್ರೆಸ್ ಕೊಡುಗೆಯಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ಹೇಳಿದರು. 

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಭಾನುವಾರ (ಎ 2) ಬಿ ಸಿ ರೋಡು-ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಬೃಹತ್  ಮಾತೃಶಕ್ತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಡಿಯಿಂದ ಮುಡಿವರೆಗೆ ಈ ದೇಶದ ಜನರಿಗೆ ಬೇಕಾದುದೆಲ್ಲವನ್ನೂ ಮಾಡಿ ಜನಪರವಾಗಿ ಗುರುತಿಸಿಕೊಂಡಿದ್ದರೆ, ಬಿಜೆಪಿ ಸರಕಾರಗಳು ಕಾಂಗ್ರೆಸ್ ಜನರಿಗಾಗಿ ಮಾಡಿಟ್ಟದ್ದನ್ನು ಮಾರಾಟ ಮಾಡಿದ್ದಲ್ಲದೆ ಪ್ರತಿಯೊಂದರಲ್ಲೂ ದೋಚುವ ಕಾರ್ಯಕ್ರಮಗಳನ್ನೇ ಅಳವಡಿಸಿಕೊಳ್ಳುವ ಮೂಲಕ ಜನರ ರಕ್ತವನ್ನೇ ಹೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹ ಮೂರ್ತಿ ಮಾತನಾಡಿ, ದೇಶದಲ್ಲಿ ಮಹಿಳೆಯರನ್ನು ಗೌರವಿಸುವ, ಅವರಿಗೆ ರಕ್ಷಣೆ, ಸ್ವಾಭಿಮಾನದ ಬದುಕನ್ನು ಕಲ್ಪಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಮೂಲಕ ಮಾತೃಶಕ್ತಿಯ ಸಾಮರ್ಥ್ಯವನ್ನು ಈ ಬಾರಿ ಪ್ರಸ್ತುತಪಡಿಸಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದರು. 

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ , ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳ ಜೊತೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ಮಹಿಳೆಯರು ಕೂಡಾ ದೇಶದ ಆಡಳಿತ ಚುಕ್ಕಾಣಿ ಹಿಡಿದು ಮುನ್ನಡೆಸಬಲ್ಲರು ಎಂಬುದನ್ನು ನಿರೂಪಿಸಿದ್ದರೆ ಅದು ಉಕ್ಕಿನ ಮಹಿಳೆ, ಧೀಮಂತ ನಾಯಕಿ ಶ್ರೀಮತಿ ಇಂದಿರಾಜಿಯವರಾಗಿದ್ದಾರೆ ಎಂದರು.

ದೇಶ ಹಾಗೂ ರಾಜ್ಯದ ಆಡಳಿತಾರೂಢ ಬಿಜೆಪಿಯ ಡಬ್ಬಲ್ ಇಂಜಿನ್ ಸರಕಾರ ಕೇವಲ ಸುಳ್ಳುಗಳ ಗೋಪುರ ಕಟ್ಟಿ ರಾಜಕೀಯ ಮಾಡಿದ್ದು ಬಿಟ್ಟರೆ ಬೇರೇನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗಾಗಲೇ ಕಾಂಗ್ರೆಸ್ ಗ್ಯಾರಂಟಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಕಾರ್ಯಗತಗೊಳಿಸಲು ಬದ್ದವಾಗಿದೆ ಎಂದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಸ್ತುವಾರಿ ಶಿಭಾ ರಾಮಚಂದ್ರನ್ ಮಾತನಾಡಿ, ಭವ್ಯ ಭಾರತದ ಸಂವಿಧಾನದ ತತ್ವಗಳ ಜೊತೆಗೆ ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಉಳಿವಿಗಾಗಿ ಕಟಿಬದ್ಧವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸರಳ, ಸಜ್ಜನಿಕೆಯ ಬಿ ರಮಾನಾಥ ರೈ ಅವರನ್ನು ಬಹುಮತದಿಂದ ಆರಿಸಿ ಎಂದು ಇದೇ ವೇಳೆ ಮತದಾರರಿಗೆ ಕರೆ ನೀಡಿದರು. 

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಕಾಂಗ್ರೆಸ್ ಉಸ್ತುವಾರಿ  ಅಪ್ಪಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್  ವೇದಿಕೆಯಲ್ಲಿದ್ದರು.

ಮಹಿಳಾ ಕಾಂಗ್ರೆಸ್ ಪ್ರಮುಖರಾದ ಮಲ್ಲಿಕಾ ಪಕ್ಕಳ, ಐಡಾ ಸುರೇಶ್, ಮಲ್ಲಿಕಾ ವಿ ಶೆಟ್ಟಿ, ಜೋಸ್ಪಿನ್ ಡಿ’ಸೋಜ, ನಸೀಮಾ ಬೇಗಂ, ಶಶಿಕಲಾ, ಫೌಝಿಯಾ, ಧನಲಕ್ಷ್ಮೀ ಸಿ ಬಂಗೇರ, ಶೋಭಾ ರೈ, ಜೆಸಿಂತಾ, ಆಯಿಶಾ ಕಲ್ಲಡ್ಕ, ಪೆÇ್ಲೀಸಿ ಡಿ’ಸೋಜಾ, ಮಂಜುಳಾ ಕುಶಲ ಎಂ ಪೆರಾಜೆ, ಕಾಂಚಲಾಕ್ಷಿ ಮೊದಲಾದವರು ಭಾಗವಹಿಸಿದ್ದರು 

ಇದೇ ವೇಳೆ ಸೈಬರ್ ಸೆಕ್ಯೂರಿಟಿ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿನಿ ಪದವಿಶ್ರೀ ಅವರನ್ನು ಸನ್ಮಾನಿಸಲಾಯಿತು. 

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ ಸ್ವಾಗತಿಸಿ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುಂಚೆ ಬಿ ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಸಾಗಿ ಬಂತು.

  • Blogger Comments
  • Facebook Comments

0 comments:

Post a Comment

Item Reviewed: ಮಹಿಳೆಯರ, ಮಕ್ಕಳ ಸಹಿತ ಸಮಾಜದ ಎಲ್ಲ ವರ್ಗದ ಹಿತ ಕಾಪಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲುವಂತದ್ದು : ಮಾಜಿ ಸಚಿವ ರಮಾನಾಥ ರೈ Rating: 5 Reviewed By: karavali Times
Scroll to Top