ಮಂಗಳೂರು, ಎಪ್ರಿಲ್ 07, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ 5 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲೇ ಘೋಷಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಉಳಿದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ತಡೆ ಹಿಡಿದು ಕಾದು ನೋಡುವ ತಂತ್ರ ಅನುಸರಿಸಿತ್ತು.
ಇದೀಗ ಸುಳ್ಯ, ಉಡುಪಿ ಮೊದಲಾದೆಡೆ ಉಂಟಾಗಿರುವ ಕಾರ್ಯಕರ್ತರ ಭಾರೀ ವಿರೋಧ ಹಾಗೂ ಬಂಡಾಯದ ಹಿನ್ನಲೆಯಲ್ಲಿ ಪಾಠ ಕಲಿತಂತಿರುವ “ಕೈ” ಕಮಾಂಡ್ ಜಿಲ್ಲೆಯ ಬಾಕಿ ಉಳಿದಿರುವ ಮೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪಕ್ಷದ ನಾಯಕರು ತೂಗಿ ಅಳೆದು ನೋಡಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಹಿಂದಿನ ಬಾರಿ ತಮಗೆ ಸೋಲಾಗಿದ್ದರೂ ಕ್ಷೇತ್ರದ ಜನರನ್ನು ಬಿಟ್ಟು ಕೊಡದೆ ನಿರಂತರ ಕ್ಷೇತ್ರ ಸಂಚಾರದಲ್ಲಿ ತೊಡಗಿಸಿಕೊಂಡು ರಾಜಕೀಯದ ಜೊತೆ ಸಮಾಜದ ಸೇವೆಯನ್ನು ಮುಂದುವರಿಸಿರುವ ಅನುಭವಿ ಮಾಜಿ ಶಾಸಕರನ್ನೇ ಮತ್ತೆ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಪಕ್ಷದ ನಿಕಟ ಮೂಲಗಳಿಂದ ತಿಳಿದು ಬಂದಿದೆ. ಮೂವರು ಮಾಜಿ ಶಾಸಕರಿಗೆ ಮಣೆ ಹಾಕಿರುವ ಪಕ್ಷದ ಹೈಕಮಾಂಡ್ ಸೋಮವಾರದ ವೇಳೆಗೆ ಅಧಿಕೃತ ಪಟ್ಟಿ ಬಿಡುಗಡೆ ಮಾಡಿ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಂಗಳೂರು ಉತ್ತರದಿಂದ ಬಿ ಎ ಮೊಯಿದಿನ್ ಬಾವಾ, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಜೆ ಆರ್ ಲೋಬೋ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕಿ ಟಿ ಶಕುಂತಳಾ ಶೆಟ್ಟಿ ಅವರೇ ಈ ಬಾರಿಯೂ ಪಕ್ಷದ ಅಭ್ಯರ್ಥಿಗಳಾಗಲಿದ್ದಾರೆ. ಇದು ಈ ಎಲ್ಲಾ ಕ್ಷೇತ್ರಗಳ ಬಹುಪಾಲು ಮತದಾರರ ಹಾಗೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಕೂಡಾ ಎನ್ನಲಾಗಿದ್ದು, ಅಭಿಪ್ರಾಯ ಸಂಗ್ರಹಿಸಿಯೇ ನಾಯಕರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಮಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಹೊಸ್ತಿಲವರೆಗೂ ಮೊಯಿದಿನ್ ಬಾವಾ ಅವರೇ ಏಕಾಂಗಿ ಸ್ಪರ್ಧಿಯಾಗಿದ್ದರು. ಬಂಟ್ವಾಳದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮಾದರಿಯಲ್ಲೇ ಇಲ್ಲಿ ಮೊಯಿದಿನ್ ಬಾವಾ ಕೂಡಾ ಕ್ಷೇತ್ರದ ಜನರ ಮಧ್ಯೆ ಇದ್ದು ಎಲ್ಲರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಲ್ಲದೆ ಜನರ ಬೇಕು-ಬೇಡಗಳಿಗೆ ಸ್ಪಂದಿಸಿ ತಮ್ಮ ಸಾಮಾಜಿಕ ಕಳಕಳಿಯನ್ನೂ ಎತ್ತಿ ಹಿಡಿದಿದ್ದರು. ಈ ನಿಟ್ಟಿನಲ್ಲಿ ಮೊಯಿದಿನ್ ಬಾವಾ ಅವರ ಹೆಸರು ಮೊದಲ ಪಟ್ಟಿಯಲ್ಲೇ ಪ್ರಕಟಗೊಳ್ಳುತ್ತದೆ ಎಂದೇ ಎಲ್ಲರ ಭಾವನೆಯಾಗಿತ್ತು. ಆದರೆ ಚುನಾವಣಾ ಹೊಸ್ತಿಲಲ್ಲಿ ಉದ್ಯಮಿಯೊಬ್ಬರು ಆಖಾಡಕ್ಕಿಳಿದು ಪಕ್ಷದ ನಾಯಕರ ಜೊತೆ ನಿಕಟ ಸಂಕರ್ಪ ಬೆಳೆಸಿ ಕ್ಷೇತ್ರ ಸಂಪರ್ಕ ಇಲ್ಲದಿದ್ದರೂ ಬ್ಯಾನರ್ ರಾಜಕೀಯ ಜೋರಾಗಿ ಮಾಡಿದ ಪರಿಣಾಮ ಪಕ್ಷದ ಹಿರಿಯ ನಾಯಕರು ಇದನ್ನೇ ನಂಬಿದ ಕಾರಣಕ್ಕಾಗಿ ಇಲ್ಲಿ ಟಿಕೆಟ್ ಪೈಪೋಟಿ ಏರ್ಪಡಲು ಕಾರಣವಾಗಿತ್ತು. ಆದರೆ ಮಾಜಿ ಶಾಸಕರ ಪರವಾಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕ ನಾಯಕರುಗಳು ಹಾಗೂ ಪದಾಧಿಕಾರಿಗಳು ದೆಹಲಿ ಪರೇಡ್ ನಡೆಸಿ ಕ್ಷೇತ್ರದ ಜನರ ಒಲವು ಗಳಿಸಿಕೊಂಡಿರುವ ಮೊಯಿದಿನ್ ಬಾವಾ ಹೊರತಾಗಿ ಇಂದು ನಿನ್ನೆ ಬಂದು ಯಾವುದೇ ಪಕ್ಷದ ಹಿನ್ನಲೆ ಇಲ್ಲದೆ ಬ್ಯಾನರ್ ರಾಜಕೀಯ ಹಾಗೂ ಝಣ ಝಣ ಕಾಂಚಾನದ ಮೂಲಕ ಪ್ರಭಾವ ಬೀರುವ ಪ್ರಯತ್ನ ನಡೆಸುವ ಅನ್ಯರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಲ್ಲದೆ ಬಂಡಾಯದ ಬಿಸಿಯನ್ನೂ ಎದುರಿಸಬೇಕಾಗಬಹುದು ಎಂಬ ಸ್ಪಷ್ಟ ಸಂದೇಶವನ್ನು ಎಐಸಿಸಿ ಅಧ್ಯಕ್ಷ ಖರ್ಗೆ ಸಹಿತ ರಾಜ್ಯ ನಾಯಕರಿಗೆ ಕÀೂಡಾ ಮನವರಿಕೆ ಮಾಡಿದ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರು ಬಂಟ್ವಾಳ ಮಾದರಿಯ ನೀತಿ ಅನುಸರಿಸುವ ಒಲವು ತೋರಿರುವುದು ಸ್ಪಷ್ಟವಾಗಿದ್ದು ಇದು ಮೊಯಿದಿನ್ ಬಾವಾ ಅವರ ಕ್ಷೇತ್ರ ಸಂಚಲನಕ್ಕೆ ಮೇಲುಗೈ ದೊರೆತಂತಾಗಿತ್ತು. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಜನಬೆಂಬಲ ಹಾಗೂ ಪಕ್ಷ ನಿಷ್ಠೆಗೆ ತಲೆಬಾಗಿದ್ದಾರೆ ಎನ್ನಲಾಗಿದ್ದು, ಮೊಯಿದಿನ್ ಬಾವಾ ಅವರಿಗೆ ಈ ಬಾರಿ ಕೂಡಾ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಅಂತಿಮ ನಿರ್ಧಾರಕ್ಕೆ ನಾಯಕರು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ನೀತಿಯನ್ನು ಮಂಗಳೂರು ದಕ್ಷಿಣ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲೂ ಅನುರಿಸಿರುವ ನಾಯಕರು ಇಲ್ಲೂ ಮಾಜಿ ಶಾಸಕರಿಗೆ ಸ್ಪರ್ಧೆಗೆ ಮತ್ತೊಂದು ಅವಕಾಶ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣದಲ್ಲಿ ಆಕಾಂಕ್ಷಿಯಾಗಿರುವ ಐವನ್ ಡಿ’ಸೋಜ ಅವರಿಗೆ ಈಗಾಗಲೇ ಎಂಎಲ್ಸಿ ನೀಡಲಾಗಿದ್ದು, ಮುಂದೆಯೂ ಪಕ್ಷದ ಅಧಿಕಾರಕ್ಕೆ ಬಂದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ಸಮಾಧಾನಪಡಿಸಲಾಗಿದೆ ಎನ್ನಲಾಗಿದೆ. ಪುತ್ತೂರು ಕ್ಷೇತ್ರದಲ್ಲಿ ಹೇಮನಾಥ ಶೆಟ್ಟಿ ಹಾಗೂ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಿದರೆ ಬಂಡಾಯದ ಬಿಸಿ ಉಂಟಾಗುವ ಸಾಧ್ಯತೆ ಬಗ್ಗೆ ಮನಗಂಡ ಹೈಕಮಾಂಡ್ ಮಾಜಿ ಶಾಸಕಿ ಹಾಗೂ ಗೆಲ್ಲುವ ಕುದುರೆ ಎಂದೇ ಪರಿಗಣಿಸಿರುವ ಮಾತ್ರವಲ್ಲದೆ ಜಿಲ್ಲೆಯಲ್ಲಿ ಏಕೈಕ ಮಹಿಳಾ ಶಾಸಕಿಯಾಗಿದ್ದ ಶಕುಂತಳಾ ಟಿ ಶೆಟ್ಟಿ ಅವರನ್ನೇ ನೆಚ್ಚಿಕೊಂಡಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿ ಸರಕಾರದ ವೈಫಲ್ಯತೆ ಹಾಗೂ ಜಿಲ್ಲೆಯ ಜನ ಕಾಂಗ್ರೆಸ್ ಪರ ಒಲವು ತೋರುತ್ತಿರುವ ಹಿನ್ನಲೆಯಲ್ಲಿ ಇರುವ ಅವಕಾಶವನ್ನು ಬಂಡಾಯವನ್ನು ಮೈಮೇಳೆದುಕೊಳ್ಳುವ ಮೂಲಕ ಕಳೆದುಕೊಳ್ಳದಿರಲು ಇದೀಗ ಪಕ್ಷದ ನಾಯಕರು ಒಮ್ಮತಕ್ಕೆ ಬಂದಿರುವ ಹಿನ್ನಲೆಯಲ್ಲಿ ಉಳಿದ ಮೂರು ಕ್ಷೇತ್ರಗಳ ಟಿಕೆಟ್ ಹೈಡ್ರಾಮಾ ನಿರ್ಣಾಯಕ ಹಂತಕ್ಕೆ ಬಂದಿದ್ದು, ಘೋಷಣೆಯಷ್ಟೆ ಬಾಕಿ ಉಳಿದಿದೆ ಎನ್ನಲಾಗಿದ್ದು, ಒಟ್ಟಾರೆ ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷದ 3ನೇ ಪಟ್ಟಿ ಬಿಡುಗಡೆಯಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಳಿದ ಕ್ಷೇತ್ರಗಳ ಎಲ್ಲ ಅಭ್ಯರ್ಥಿಗಳ ಹೆಸರುಗಳು ಕೂಡಾ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಕೊಂಡು ಜಿಲ್ಲೆಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದೆ. ಬಂಟ್ವಾಳ ಹಾಗೂ ಮಂಗಳೂರು ಕ್ಷೇತ್ರಕ್ಕೆ ಹಳೆ ಹುಲಿಗಳು ಹಾಗೂ ಪ್ರಭಾವಿ ರಾಜಕಾರಣಿಗಳನ್ನೇ ನೆಚ್ಚಿಕೊಂಡ ಕಾಂಗ್ರೆಸ್ ನಾಯಕರು ಮೂಡಬಿದ್ರೆ ಕ್ಷೇತ್ರಕ್ಕೆ ಯುವ ನಾಯಕ ಮಿಥುನ್ ರೈ ಅವರ ಹೆಸರು ಸೂಚಿಸಿದರೆ, ಬೆಳ್ತಂಗಡಿ ಹಾಗೂ ಸುಳ್ಯಕ್ಕೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಮೂಲಕ ಐದೂ ಕ್ಷೇತ್ರಗಳಲ್ಲಿ ಚುನಾವಣಾ ಬಿರುಸು ಭರದಿಂದ ಸಾಗಿದೆ.

















0 comments:
Post a Comment