ಬಂಟ್ವಾಳ, ಎಪ್ರಿಲ್ 27, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಸಮಗ್ರ ಅಭಿವೃದ್ಧಿಯಾಗಿದೆ. ತಾಲೂಕು ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕಟ್ಟಡಗಳು, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಆಸ್ಪತ್ರೆಗಳು, ಶಿಕ್ಷಣ ವ್ಯವಸ್ಥೆಗೆ ಪೂರಕವಾದ ಸರಕಾರಿ ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳು ನನ್ನ ಅವಧಿಯಲ್ಲೇ ನಿರ್ಮಾಣಗೊಂಡಿವೆ. ಕ್ಷೇತ್ರದಾದ್ಯಂತ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗಿದೆ. ನೀರಾವರಿ ವ್ಯವಸ್ಥೆಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇದೆಲ್ಲವೂ ನನ್ನ ಅವಧಿಯದ್ದೇ ಜನಪರ ಯೋಜನೆಗಳು ಹಾಗೂ ಸಾಧನೆಗಳು. ಇದನ್ನು ಯಾವುದೇ ಅಪಪ್ರಚಾರ, ಸುಳ್ಳುಗಳಿಂದ ಹೈಜಾಕ್ ಮಾಡಲು ಸಾಧ್ಯವಿಲ್ಲ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಗೋಳ್ತಮಜಲು ವಲಯ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಸಾಕಷ್ಟು ವಿದ್ಯಾವಂತರು, ಬುದ್ಧಿವಂತರಿದ್ದಾರೆ. ಬಿಜೆಪಿಗರು ಸುಳ್ಳು ಹಾಗೂ ಅಪಪ್ರಚಾರಗಳಿಂದ ಪ್ರತಿ ಬಾರಿ ಜನರನ್ನು ಯಾಮಾರಿಸಲು ಅಥವಾ ತಪ್ಪು ದಾರಿಗೆಳೆಯಲು ಸಾಧ್ಯವಿಲ್ಲ. ಈ ಬಾರಿ ಖಚಿತವಾಗಿ ಅಭಿವೃದ್ಧಿ ಪರ ನಾಯಕತ್ವದ ಜೊತೆ ಜನತೆ ನಿಲ್ಲುತ್ತಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಸುಳ್ಳು, ವದಂತಿಗಳೇ ಬಿಜೆಪಿ ಬಂಡವಾಳ. ಆ ಮೂಲಕವೇ ಅಧಿಕಾರದಲ್ಲಿ ಮುಂದುವರಿಯಬಹುದು ಎಂದವರು ಹಗಲು ಕನಸು ಕಾಣುತ್ತಿದ್ದರೆ ಅದು ಅವರ ಮೂರ್ಖತನದ ಪರಮಾವಧಿಯಾಗಿದೆ. ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವ ಬಗ್ಗೆ ಈಗಾಗಲೇ ನಿರ್ಧರಿಸಿದ್ದಾರೆ. ನನ್ನ ಅಧಿಕಾರಾವಧಿ ಮತ್ತು ಕಳೆದ ಐದು ವರ್ಷದ ಬಿಜೆಪಿ ಶಾಸಕರ ಅಧಿಕಾರಾವಧಿಯನ್ನು ಜನ ತುಲನೆ ಮಾಡಿ ನೋಡುತ್ತಿದ್ದಾರೆ. ನನ್ನ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿದರೆ, ಕಳೆದ ಐದು ವರ್ಷದಲ್ಲಿ ಬಿಜೆಪಿಗರು ಮಾಡಿರುವ ಸಾಧನೆ ಶೂನ್ಯವೆಂಬುದನ್ನು ಜನತೆಯೇ ಮನಗಂಡಿದ್ದಾರೆ ಎಂಬುದಕ್ಕೆ ಜನರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳೇ ಸಾಕ್ಷಿಯಾಗುತ್ತಿದೆ. ಹೀಗಾಗಿ ಮತ್ತೆ ಕಾಂಗ್ರೆಸ್ ಗೆಲ್ಲಿಸುವುದೊಂದೇ ಇದಕ್ಕಿರುವ ಸೂಕ್ತ ಪರಿಹಾರ ಎಂಬುದಾಗಿ ಜನತೆ ನಿರ್ಧರಿಸಿದ್ದಾರೆ ಎಂದು ರೈ ತಿಳಿಸಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಹುಸೇನ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಹಂಡೇಲು ಮೋನು, ಹಿರಿಯ ಕಾಂಗ್ರೆಸಿಗ ಇಬ್ರಾಹೀಂ, ಗೋಳ್ತಮಜಲು ಯುವ ಕಾಂಗ್ರೆಸ್ ಅಧ್ಯಕ್ಷ ಜಾಫರ್, ವಲಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಂತಿಯಾಝ್ ಕಲ್ಲಡ್ಕ, ವಲಯ ಯುವ ಕಾಂಗ್ರೆಸ್ ನ ಇಬ್ರಾಹಿಂ ಕೆ ಸಿ, ನಝೀರ್ ಕಲ್ಲಡ್ಕ, ಅಶ್ರಫ್ ಮದಕ, ಸಿದ್ದಿಕ್ ಜಿ ಎಸ್, ಸೂರಜ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment