ಮಂಗಳೂರು, ಎಪ್ರಿಲ್ 16, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಜಂಜಾಟ ಇನ್ನೂ ಮುಂದುವರಿದಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಹಠಮಾರಿ ಧೋರಣೆಯೇ ಕಾರಣ ಎಂದು ಕ್ಷೇತ್ರದ ನೈಜ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಉಳಿದೆಲ್ಲಾ ಕ್ಷೇತ್ರಗಳಿಗೂ ಉಮೇದುವಾರರ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಬಾಕಿ ಇದ್ದ ಮಂಗಳೂರು ದಕ್ಷಿಣಕ್ಕೆ ನಿರೀಕ್ಷೆಯಂತೆ ಹಾಗೂ ಕ್ಷೇತ್ರದ ಕಾರ್ಯಕರ್ತರ ಒಕ್ಕೊರಳಿನ ತೀರ್ಮಾನಕ್ಕೆ ಬದ್ದತೆ ಪ್ರದರ್ಶಿಸಿದ ಹೈಕಮಾಂಡ್ ಮಾಜಿ ಶಾಸಕ ಜೆ ಆರ್ ಲೋಬೋ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕ್ಷೇತ್ರದ ಎಲ್ಲ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಒಮ್ಮತದ ತೀರ್ಮಾನಕ್ಕೆ ಬರಲು ಹೈಕಮಾಂಡ್ ಯಶಸ್ವಿಯಾಗಿ ಇತ್ತೀಚೆಗಷ್ಟೆ ಪಕ್ಷ ಸೇರ್ಪಡೆಗೊಂಡಿರುವ ಉದ್ಯಮಿ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಅಶೋಕ್ ರೈ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಆದರೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರ ಒಕ್ಕೊರಳ ಆಯ್ಕೆ ಮಾಜಿ ಶಾಸಕ ಮೊಯಿದಿನ್ ಬಾವಾ ಆಗಿದ್ದರೂ, ಕಳೆದ ಐದು ವರ್ಷಗಳ ಅವಧಿಯಲ್ಲೂ ಕ್ಷೇತ್ರದ ಜನರ ನಾಡಿಮಿಡಿತ ಅರಿತುಕೊಂಡು ಕ್ಷೇತ್ರಾದ್ಯಂತ ಸಂಚರಿಸಿ ಜನರ ಬೇಕು-ಬೇಡಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಬಾವಾ ಅವರಿಗೆ ಟಿಕೆಟ್ ಫೈನಲ್ ಮಾಡಲು ಪಕ್ಷದ ಹೈಕಮಾಂಡ್ ಇನ್ನೂ ಮೀನಮೇಷ ಎಣಿಸುತ್ತಿರುವುದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಹಠಮಾಡಿ ಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕ್ಷೇತ್ರದ ಕಾರ್ಯಕರ್ತರು ಹಾಗೂ ನಾಯಕರುಗಳು ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.
ಟಿಕೆಟ್ ಘೋಷಣೆಯಲ್ಲಿ ಕೊಂಚ ಯಾಮಾರಿದರೂ ಸುಳ್ಯ ಕ್ಷೇತ್ರದ ಪರಿಸ್ಥಿತಿ ಇಲ್ಲೂ ನಿರ್ಮಾಣವಾದರೆ ಚುನಾವಣಾ ಹೊಸ್ತಿಲಲ್ಲಿ ಕಾರ್ಯಕರ್ತರನ್ನು ನಿಭಾಯಿಸುವುದೇ ಕಷ್ಟ ಸಾಧ್ಯವಾದೀತು ಎಂಬುದು ಪಕ್ಷದ ಎಲ್ಲಾ ನಾಯಕರು ಈಗಾಗಲೇ ಅರ್ಥ ಮಾಡಿಕೊಂಡು ಬಹುತೇಕ ಮೊಯಿದಿನ್ ಬಾವಾ ಅವರ ಉಮೇದುವಾರಿಕೆಗೇ ಸೈ ಎನ್ನುತ್ತಿದ್ದರೂ ಡಿಕೆಶಿ ಮಾತ್ರ ಯಾವುದೋ ಕಾರಣಕ್ಕೆ ಅಡ್ಡಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲದ ಹಿನ್ನಲೆಯಲ್ಲಿ ಸ್ವತಃ ಮಧ್ಯಪ್ರವೇಶಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ, ರಾಜ್ಯ ನಾಯಕ, ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ಮಾಜಿ ಶಾಸಕ ಮೊಯಿದಿನ್ ಬಾವಾ ವಿರುದ್ದವಾಗಿ ಚಾಲ್ತಿಯಲ್ಲಿಲ್ಲದ ಹೆಸರುಗಳನ್ನು ಮುಂಚೂಣಿಗೆ ತರದಂತೆ ಸ್ಪಷ್ಟ ತಾಕೀತು ಮಾಡಿದ್ದಾರೆ ಎನ್ನಲಾಗಿದ್ದರೂ ಇನ್ನೂ ಪಕ್ಷಕ್ಕೆ ಮಾರಕವಾಗುವ ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಠಮಾರಿ ಧೋರಣೆ ತಾಳುತ್ತಿದ್ದಾರೆ ಎಂದು ಕ್ಷೇತ್ರದ ಕೈ ಕಾರ್ಯಕರ್ತರು ಗರಂ ಆಗಿದ್ದಾರೆ.
ಕಳೆದ ಚುನಾವಣೆಯ ಸೋಲಿನ ಬಳಿಕ ಮೊಯಿದಿನ್ ಬಾವಾ ಅವರು ಕ್ಷೇತ್ರದ ಜನರ ನಡುವೆ ನಿರಂತರ ಒಡನಾಟ ಇಟ್ಟುಕೊಂಡಿದ್ದಲ್ಲದೆ ಶಾಸಕ ಅಲ್ಲದಿದ್ದರೂ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ಅವರ ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಅಭಿವೃದ್ದಿ ಕಾಮಗಾರಿಗಳನ್ನೂ ನಡೆಸಿದ್ದಲ್ಲದೆ, ಕೊರೋನಾ ಲಾಕ್ ಡೌನ್ ಸಂದರ್ಭ ತನ್ನ ಸ್ವಂತ ದುಡ್ಡಿನಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆರೋಗ್ಯ ಸಂಬಂಧಿ ಸೇವೆ ಸಹಿತ ಇತರ ಮಾನವೀಯ ಸೇವೆಗಳನ್ನು ಜಾತಿ-ಧರ್ಮ, ಪಕ್ಷ ಬೇಧ ನೋಡದೆ ನಡೆಸಿದ್ದಾರೆ. ಸ್ವತಃ ಮುಂದಾಳುತ್ವ ವಹಿಸಿ ಶವ ಸಂಸ್ಕಾರದಂತಹ ಕಾರ್ಯಗಳನ್ನೂ ನಡೆಸಿರುವ ಮೊಯಿದಿನ್ ಬಾವಾ ಅವರಿಗೆ ಈ ಎಲ್ಲಾ ಸೇವಾ ಕಾರ್ಯಗಳೂ ಬೆನ್ನ ಹಿಂದೆ ಇದ್ದರೂ ಕೆಪಿಸಿಸಿ ಅಧ್ಯಕ್ಷರು ಮಾತ್ರ ಬ್ಯಾನರ್ ನಾಯಕರ ಝಣ ಝಣ ಕಾಂಚಾಣಕ್ಕೆ ಕಟ್ಟುಬಿದ್ದು ಚುನಾವಣಾ ಫಂಡಿನ ಹಿಂದೆ ಬಿದ್ದು ಈ ರೀತಿಯಾಗಿ ವರ್ತಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರೆ, ಇದೂ ಅಲ್ಲದೆ ಇದರ ಹಿಂದೆ ಮುಸ್ಲಿಂ ನಾಯಕರ ಮಧ್ಯೆ ಹಗ್ಗ-ಜಗ್ಗಾಟ ಸೃಷ್ಟಿಸಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ರಹದಾರಿ ಸೃಷ್ಟಿಸುವಂತೆ ಮಾಡಿ ಮುಂದಿನ ಬಾರಿ ಮುಸ್ಲಿಮರಿಗೆ ಇದ್ದ ಅವಕಾಶವನ್ನು ತಡೆಯುವ ಮೃದು ಹಿಂದುತ್ವದ ಚಿಂತನೆಯೂ ಒಳಗೊಂಡಿದೆ ಎಂಬ ಸಂಶಯ ಮೂಡುತ್ತಿದೆ ಎಂದು ಇನ್ನು ಕೆಲ ಕಾರ್ಯಕರ್ತರು ಆರೋಪಿಸುತ್ತಾರೆ.
ಯಾವುದೇ ಕಾರಣಕ್ಕೂ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಘೋಷಣೆ ತಡೆ ಹಿಡಿಯಲು ಅಥವಾ ವಿಳಂಬ ಮಾಡಲು ಪಕ್ಷದ ನಾಯಕರ ಮುಂದೆ ಯಾವುದೇ ಕಾರಣಗಳೇ ಇಲ್ಲದಾಗಿದ್ದು, ಇದರ ಹಿಂದೆ ದೊಡ್ಡ ಷಡ್ಯಂತರವೇ ಅಡಗಿದೆ ಎನ್ನುವ ಕೈ ಕಾರ್ಯಕರ್ತರು ಏನೇ ಆದರೂ ಕ್ಷೇತ್ರದ ನಾಡಿಮಿಡಿತ ಅರಿತ ನಾಯಕ ಮೊಯಿದಿನ್ ಬಾವಾ ಅವರಿಗೆ ಟಿಕೆಟ್ ನೀಡದೆ ವಂಚಿಸಿದಲ್ಲಿ ಮುಂಚೂಣಿ ಘಟಕದ ಎಲ್ಲಾ ನಾಯಕರು-ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಮೊಯಿದಿನ್ ಬಾವಾ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿ ತೋರಿಸುವ ಬದ್ದತೆ ಕಾರ್ಯಕರ್ತರಲ್ಲಿದೆ ಎಂದು ಪಕ್ಷದ ಹೈಕಮಾಂಡಿಗೆ ಸವಾಲೆಸೆದಿದ್ದಾರೆ.
0 comments:
Post a Comment