ಬೆಂಗಳೂರು, ಎಪ್ರಿಲ್ 21, 2023 (ಕರಾವಳಿ ಟೈಮ್ಸ್) : ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, 74.67 ಶೇಕಡಾ ಫಲಿತಾಂಶ ದಾಖಲಾಗಿದೆ. ಈ ಬಾರಿ ಕೂಡಾ ಶೇ 95.34 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ ಹಾಗೂ 95.24% ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉತ್ತರ ಕನ್ನಡ (90%), ವಿಜಯಪುರ (85%) ಹಾಗೂ ಚಿಕ್ಕಮಗಳೂರು (83%) ಜಿಲ್ಲೆ ನಂತರದ ಸ್ಥಾನ ಪಡೆದಿದ್ದು, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಈ ಬಾರಿ ಕೂಡಾ ಬಾಲಕಿಯರದ್ದೇ ಮೇಲುಗೈ.
ಕಳೆದ ಮಾರ್ಚ್‍ನಲ್ಲಿ ನಡೆದ 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶುಕ್ರವಾರ ಘೋಷಿಸಿದೆ. ಮಲ್ಲೇಶ್ವರದಲ್ಲಿರುವ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ವಿದ್ಯಾರ್ಥಿಗಳು https://karresults.nic.in/ ವೆಬ್‍ಸೈಟ್‍ನಲ್ಲಿ ತಮ್ಮ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಕೂಡ ಫಲಿತಾಂಶ ಕಳುಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಈ ಬಾರಿ 42 ಸರಕಾರಿ ಕಾಲೇಜುಗಳು ಮತ್ತು 10 ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿದೆ. ಒಟ್ಟು 78 ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಬಾರಿ ನಿರೀಕ್ಷೆಗಿಂತ ಎರಡು ವಾರದ ಮೊದಲೇ ಫಲಿತಾಂಶ ಪ್ರಕಟಿಸಲಾಗಿದೆ.
ಮಾ. 9 ರಿಂದ 29 ರವರೆಗೆ ಪರೀಕ್ಷೆ ನಡೆಸಲಾಗಿತ್ತು. ಎಪ್ರಿಲ್ 4 ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿತ್ತು. ಕೇವಲ 15 ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ. ಮಂಡಳಿಯು ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿತ್ತು. ಆದರೆ, ಅಂದುಕೊಂಡಿದ್ದ ಅವಧಿಗೂ ಮೊದಲೇ ಮೌಲ್ಯಮಾಪನ ಕಾರ್ಯ ಪೂರ್ಣವಾಗಿರುವುದರಿಂದ ಫಲಿತಾಂಶ ಪ್ರಕಟಿಸಲಾಗಿದೆ.
ಈ ಬಾರಿ ರಾಜ್ಯದ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 3,63,698 ಬಾಲಕರು ಮತ್ತು 3,62.497 ಬಾಲಕಿಯರು. ಇದರಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರು (ಫ್ರೆಶರ್ಸ್), 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಕಲಾ ವಿಭಾಗದಿಂದ 2,34,815, ವಾಣಿಜ್ಯ ವಿಭಾಗದಿಂದ 2,47,260 ಮತ್ತು ವಿಜ್ಞಾನ ವಿಭಾಗದಿಂದ 2,44,120 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
ಕಲಾ ವಿಭಾಗದಲ್ಲಿ ಶೇ.61.22, ವಾಣಿಜ್ಯ ವಿಭಾಗದಲ್ಲಿ ಶೇ.75.89, ವಿಜ್ಞಾನ ವಿಭಾಗದಲ್ಲಿ ಶೇ.85.71 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ತಬಸುಮ್ ಶೇಕ್, ಜಯನಗರ ಬೆಂಗಳೂರು, ವಾಣಿಜ್ಯ ವಿಭಾಗ ಅನನ್ಯಾ, ಆಳ್ವಾಸ್ ಮೂಡಬಿದಿರೆ ಹಾಗೂ ವಾಣಿಜ್ಯ ವಿಭಾಗ ಕೌಶಿಕ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
0 comments:
Post a Comment