ಸುಳ್ಯ ಎಪ್ರಿಲ್ 05, 2023 (ಕರಾವಳಿ ಟೈಮ್ಸ್) : ಕೋಳಿ ಪದಾರ್ಥಕ್ಕಾಗಿ ನಡೆದ ಮಾತಿನ ಚಕಮಕಿ ಹಾಗೂ ಹೊಡೆದಾಟದಲ್ಲಿ ತಂದೆಯಿಂದಲೇ ಮಗನ ಕೊಲೆಯಾದ ಘಟನೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮ ಮೊಗ್ರ ಮಾತೃ ಮಜಲು ಎಂಬಲ್ಲಿ ನಡೆದಿದೆ.
ಮೃತ ಮಗನನ್ನು ಶಿವರಾಮ (35) ಎಂದು ಹೆಸರಿಸಲಾಗಿದ್ದು, ಆರೋಪಿ ತಂದೆಯನ್ನು ಶೀನಪ್ಪ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತ ಶಿವರಾಮ ಅವರ ಪತ್ನಿ ಕವಿತಾ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದ್ದು, ನಾನು ಸಂಸಾರದೊಂದಿಗೆ ವಾಸವಾಗಿದ್ದು, ನನ್ನ ಗಂಡ ಶಿವರಾಮ ಕೂಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಮದ್ಯ ಸೇವಿಸುವ ಅಬ್ಯಾಸವಿದೆ. ಕೆಲಸದಿಂದ ಬರುವಾಗ ಮದ್ಯ ಸೇವಿಸಿಕೊಂಡು ಬರುತ್ತಿದ್ದು, ದಿನ ನಿತ್ಯ ಮನೆಯಲ್ಲಿ ಊಟ ಮಾಡುವ ಸಮಯ ಪದಾರ್ಥ ಸರಿ ಇಲ್ಲ ಎಂದು ಮಾವ, ಅತ್ತೆ ಹಾಗೂ ಒಮ್ಮೊಮ್ಮೆ ನನ್ನೊಂದಿಗೂ ಜಗಳವಾಡುತ್ತಿದ್ದರು.
ಮಂಗಳವಾರ (ಎಪ್ರಿಲ್ 4) ಮಧ್ಯರಾತ್ರಿ 12.15 ಕ್ಕೆ ಮನೆಗೆ ಬಂದವರು ಊಟ ಮಾಡುವ ವೇಳೆ ಹಿಂದಿನ ದಿನ ಮಾಡಿದ ಕೋಳಿ ಪದಾರ್ಥ ಇಲ್ಲವೇ ಎಂದು ಅತ್ತೆ ತಂಗಮ್ಮರನ್ನು ಕೇಳಿದಾಗ ಕೋಳಿ ಪದಾರ್ಥ ಮುಗಿದಿರುತ್ತದೆ ಎಂದು ಹೇಳಿದಾಗ ಕೋಪಗೊಂಡು “ನನಗೆ ಈಗಲೇ ಕೋಳಿ ಪದಾರ್ಥ ಬೇಕು” ಎಂದು ಹೇಳಿದ್ದು, ಕೋಳಿ ತಂದು ಕೊಟ್ಟರೆ ಪದಾರ್ಥ ಮಾಡಿ ಕೊಡುವುದಾಗಿ ಅತ್ತೆಯವರು ತಿಳಿಸಿದ್ದಾರೆ. ಈ ಸಂದರ್ಭ ಗಂಡ ಶಿವರಾಮ ಸ್ವಲ್ಪ ದೂರ ಹೋಗಿ ವಾಪಸ್ಸು ಬಂದು ಮನೆಯಲ್ಲಿದ್ದ ಕೋಳಿಯನ್ನು ಹಿಡಿಯಲು ಹೋದಾಗ ಕೋಳಿ ಓಡಿ ಹೋಗಿದ್ದು, ಅದನ್ನು ಹಿಡಿಯುವರೇ ಗಂಡ ಶಿವರಾಮ ಅದನ್ನು ಓಡಿಸುತ್ತಿದ್ದರು. ನನ್ನ ಗಂಡ ಶಿವರಾಮ ಕೋಳಿ ಓಡಿಸುತ್ತಿರುವುದನ್ನು ಕಂಡು ಮಾವನವರು ಯಾಕೆ ಕೋಳಿ ಓಡಿಸುವುದು ಎಂದು ಕೇಳಿದ್ದು, ಈ ವೇಳೆ ಅವರೊಳಗೆ ಊರುಡಾಟವಾಗಿ ಮಾವನವರು ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಗಂಡನವರ ತಲೆಗೆ ಹೊಡೆದಿರುತ್ತಾರೆ. ಆಗ ಗಂಡ ಶಿವರಾಮ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನೆರೆ ಮನೆ ನಿವಾಸಿಗಳಾದ ಶಶಿಧರ ಹಾಗೂ ಜಗದೀಶ ಅವರು ಗಂಡ ಶಿವರಾಮ ಅವರನ್ನು ಆರೈಕೆ ಮಾಡಿ 108 ಅಂಬುಲೇನ್ಸ್ ಮೂಲಕ ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಕವಿತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23-2023 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

















0 comments:
Post a Comment