ಅನುದಾನ, ಹಣ ಹಂಚಿಕೆಗೆ ತಕ್ಷಣದಿಂದಲೇ ತಡೆ, ಅಕಾಡೆಮಿ, ನಿಗಮ-ಮಂಡಳಿಗಳಲ್ಲಿ ಚಾಲನೆ ನೀಡಲಾಗಿದ್ದ ಕಾಮಗಾರಿಗಳೂ ಸ್ಟಾಪ್
ಬೆಂಗಳೂರು, ಮೇ 22, 2023 (ಕರಾವಳಿ ಟೈಮ್ಸ್) : ಸಿದ್ದರಾಮಯ್ಯ ನೇತೃತ್ವದ ಬಹುಮತದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೊದಲ ಅಧಿವೇಶನದ ಮೊದಲ ದಿನವೇ ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಇತ್ತೀಚೆಗಷ್ಟೆ ಚುನಾವಣಾ ಪೂರ್ವದಲ್ಲಿ ಕಾರ್ಯಕರ್ತರ ಕೆಲಸಕ್ಕೆ ಮಣೆ ಹಾಕಿ ನೇಮಕ ಮಾಡಲಾಗಿದ್ದ ರಾಜ್ಯದ ಎಲ್ಲ ನಿಗಮ-ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳ ನೇಮಕಾತಿಗಳನ್ನು ತಕ್ಷಣ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಅಲ್ಲದೆ ನಿಗಮ-ಮಂಡಳಿಗಳಿಗೆ ನೀಡಲಾದ ಅನುದಾನ ಹಾಗೂ ಹಣ ಹಂಚಿಕೆಯನ್ನು ತಕ್ಷಣದಿಂದಲೇ ತಡೆ ಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಆದೇಶ ಹೊರಡಿಸಿದ್ದಾರೆ.
ಮೇ 10 ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13 ರಂದು ನಡೆದು ಕಾಂಗ್ರೆಸ್ ಪಕ್ಷ 135ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಮೇ 20 ರಂದು ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಮಾಣವಚನ ಸ್ವೀಕಾರ ಮಾಡಿದ ಮೊದಲ ದಿನವೇ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಮೊದಲ ದಿನವೇ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಆದೇಶ ಹೊರಡಿಸಿದ್ದರು. ಇದೀಗ ಮೊದಲ ಅಧಿವೇಶನ ದಿನವಾದ ಸೋಮವಾರ, ಕಳೆದ ಬಿಜೆಪಿ ಸರಕಾರದಲ್ಲಿ ನೇಮಕ ಮಾಡಲಾಗಿದ್ದ ರಾಜ್ಯದ ಎಲ್ಲ ನಿಗಮ-ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಎಲ್ಲ ಪದಾಧಿಕಾರಿಗಳ ಅಧಿಕಾರವನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಹಿಂದಿನ ಸರಕಾರ ನೇಮಿಸಿದ್ದ ಅಕಾಡೆಮಿಗಳು, ನಿಗಮ-ಮಂಡಳಿಗಳ ಅಧ್ಯಕ್ಷ, ಸದಸ್ಯರ, ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿ ರದ್ದು ಮಾಡಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ತಕ್ಷಣದಿಂದಲೇ ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಉಪಯೋಗಿಸುತ್ತಿದ್ದ ಎಲ್ಲ ಸರಕಾರಿ ಸೌಲಭ್ಯಗಳನ್ನು ವಾಪಸ್ ಪಡೆಯಲಾಗುತ್ತಿದೆ.
ಅಲ್ಲದೆ ಹಿಂದಿನ ಬಿಜೆಪಿ ಸರಕಾರ ನೇಮಿಸಿದ್ದ ರಾಜ್ಯದ ಎಲ್ಲ ಇಲಾಖೆ, ಅಕಾಡೆಮಿಗಳು, ನಿಗಮ ಹಾಗೂ ಮಂಡಳಿಗಳಲ್ಲಿ ಚಾಲನೆ ನೀಡಲಾಗಿದ್ದ ಕಾಮಗಾರಿಗಳಿಗೆ ತಡೆ ನೀಡಿ ಆದೇಶಿಸಲಾಗಿದೆ. ನಿಗಮ-ಮಂಡಳಿ, ಪ್ರಾಧಿಕಾರಗಳ ಕಾಮಗಾರಿಗಳಿಗೆ ತಡೆ ನೀಡಿ ಆದೇಶ ಹೊರಡಿಸಲಾಗಿದೆ. ಕಾಮಗಾರಿಗಳಿಗೆ ಸಂಬಂಧಿಸಿದ ಮುಂದಿನ ಹಣ ಬಿಡುಗಡೆ, ಹಣ ಪಾವತಿಗಳನ್ನು ತಕ್ಷಣದಿಂದ ತಡೆ ಹಿಡಿಯುವಂತೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಏಕರೂಪ್ ಖೌರ್ ಅವರು ಹಣ ಬಿಡುಗಡೆಯನ್ನು ತಡೆಹಿಡಿಯುವಂತೆ ಆದೇಶಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರ ನೇಮಿಸಿದ್ದ ವಿವಿಧ ನಿಗಮ-ಮಂಡಳಿಗಗಳ ಪದಾಧಿಕಾರಿಗಳ ಅವಧಿ ಸರಕಾರ ಬದಲಾದ ಹಿನ್ನಲೆಯಲ್ಲಿ 10 ತಿಂಗಳಿಗೇ ಮುಕ್ತಾಯಗೊಳ್ಳುತ್ತಿದೆ. ರಾಜ್ಯದ ಒಟ್ಟು 22 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ 2022ರ ಜುಲೈ 25 ರಂದು ಹಿಂದಿನ ಸರಕಾರ ಆದೇಶ ಹೊರಡಿಸಿದ್ದು, ಚುನಾವಣಾ ಪೂರ್ವದಲ್ಲಿ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪಕ್ಷ ಸಂಘಟನೆಯ ಉದ್ದೇಶದಿಂದ ಪಕ್ಷ ನಿಷ್ಠರಿಗೆ ಅಂದಿನ ಸರಕಾರ ಮಣೆ ಹಾಕಿ ಹುದ್ದೆಗಳನ್ನು ನೀಡಿ ಆದೇಶ ಹೊರಡಿಸಿತ್ತು. ಆದರೆ, ಇದೀಗ ಸರಕಾರ ಬದಲಾಗಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿರುವ ಹಿನ್ನಲೆಯಲ್ಲಿ ಈ ನಾಯಕರಿಗೆ ನಿಗಮ- ಮಂಡಳಿಗಳು ಹಾಗೂ ಪ್ರಾಧಿಕಾರಗಳ ಆಡಳಿತ 10 ತಿಂಗಳಿಗೇ ಮುಕ್ತಾಯಗೊಂಡಿದೆ.
ರಾಜ್ಯ ಸರಕಾರದಿಂದ ನೇಮಕಗೊಂಡಿದ್ದ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೆ ಪಿ ವೆಂಕಟೇಶ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರನಾಥ್ ಕೆ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ, ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಕೆ ವಾಸುದೇವ್, ದ್ರಾಕ್ಷಿ, ವೈನ್ ಬೋರ್ಡ್ ಅಧ್ಯಕ್ಷ ಎನ್ ಎಂ ರವಿ ನಾರಾಯಣ ರೆಡ್ಡಿ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಬಿ ಸಿ ನಾರಾಯಣ ಸ್ವಾಮಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅದ್ಯಕ್ಷ ಗೋವಿಂದ ನಾಯ್ಕ್, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ ಶಿವಕುಮಾರ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರೇವಣ್ಣಪ್ಪ ಕೋಳಗಿ, ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ರವಿಕಾಳಪ್ಪ, ಕುರಿ, ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನೆ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ ವಿ ತೀರ್ಥರಾಮ, ಪೇಂಟ್ಸ್, ವಾರ್ನಿಷ್ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಜವಳಿ ಅಭಿವೃದ್ಧಿ ನಿಗಮ ಅಧ್ಯಕ್ಷ ವಿರೂಪಾಕ್ಷಗೌಡ, ಖಾದಿ, ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ ವಿ ನಾಗರಾಜ್, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ತುಂಗಾಭದ್ರ ಯೋಜನೆ (ಕಾಡಾ) ಅಧ್ಯಕ್ಷ ಕೊಲ್ಲಾ ಶೇಷಗಿರಿ ರಾವ್, ಕಾವೇರಿ ಜಲಾನಯನ ಯೋಜನೆಯ ಅಧ್ಯಕ್ಷ ನಿಜಗುಣರಾಜು, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ ಅವರ ನೇತೃತ್ವದ 22 ನಿಗಮ-ಮಂಡಳಿಗಳ ಪದಾಧಿಕಾರಿಗಳ ಆಡಳಿತ ಸೋಮವಾರಕ್ಕೆ ಅಂತ್ಯಗೊಂಡಿದೆ.
0 comments:
Post a Comment