ಅಭ್ಯರ್ಥಿ ಪಟ್ಟಿಯಲ್ಲಿ ಡಾ ಇಫ್ತಿಕಾರ್ ಅವರಿಗೆ ಮೊದಲ ಆದ್ಯತೆ, ಇನ್ನೂ ಹಲವ ಹೆಸರು ಪ್ರಸ್ತಾವನೆ
ಮಂಗಳೂರು, ಮೇ 25, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿಂದುತ್ವ ಸಹಿತ ಇತರ ಕಾರಣಗಳಿಗೆ ಪ್ರಮುಖ ಜಾತಿ ಪ್ರವರ್ಗಗಳು ಕೈಕೊಟ್ಟಿದ್ದು, ಮುಸ್ಲಿಂ ಸಮುದಾಯದ ಮಂದಿ ಶೇ 90 ರಷ್ಟು ಸಹಿತ ಅಹಿಂದ ವರ್ಗ ಮಾತ್ರ ಕೈ ಹಿಡಿದಿದೆ. ಈ ಕಾರಣಕ್ಕೆ ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಪ್ರಚಂಡ ಗೆಲುವು ದಾಖಲಿಸಿ, ಪೂರ್ಣ ಬಹುಮತದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಸಿದ್ದರಾಮಯ್ಯ ಅವರು 2ನೇ ಬಾರಿಗೆ ರಾಜ್ಯದ ಗದ್ದುಗೆಯನ್ನು ಅಲಂಕರಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಶಃ ಪೂರ್ಣ ಪ್ರಮಾಣದಲ್ಲಿ ಎನ್ನಬಹುದಾದ ಪ್ರಮಾಣದಲ್ಲಿ “ಕೈ” ಹಿಡಿದ ಮುಸ್ಲಿಂ ಸಮುದಾಯಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ನೀಡಬೇಕು ಎಂಬ ಬಲವಾದ ಬೇಡಿಕೆ ಕೇಳಿ ಬರುತ್ತಿದೆಯಲ್ಲದೆ ಅದಕ್ಕಾಗಿ ಪಕ್ಷದ ನಾಯಕರ ಮನವೊಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ಮುಸ್ಲಿಂ ಮುಖಂಡರು ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತ ಸಮುದಾಯದ ಜನ ಹಾಗೂ ಒಂದಷ್ಟು ಪ್ರಮಾಣದಲ್ಲಿ ಹಿಂದುಳಿದ ವರ್ಗಗಳ ಜನ ಮಾತ್ರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಕೈ ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಪ್ರಬಲ ಎನ್ನಲಾಗುತ್ತಿರುವ ಜಾತಿ-ಜನಾಂಗಗಳು ಈ ಬಾರಿಯೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟ ಕಾರಣಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪುಟಿದೆದ್ದರೂ ಜಿಲ್ಲೆಯಲ್ಲಿ ಹೀನಾಯ ಸ್ಥಿತಿ ಎದುರಿಸುವಂತಾಗಿತ್ತು. ಅದರಲ್ಲೂ ಜಿಲ್ಲೆಯ ಪ್ರಭಾವಿ ರಾಜಕಾರಣಿ, ಶುಭ್ರ-ಸ್ಫಟಿಕದಂತಹ ವ್ಯಕ್ತಿತ್ವ ಹೊಂದಿ ಇತರ ಯಾವುದೇ ಅನಾವಶ್ಯಕ ವಿಷಯಗಳಿಗೆ ತಲೆ ಕೊಡದೆ ಕೇವಲ ಅಭಿವೃದ್ದಿ ಪರ ಮಾತ್ರ ರಾಜಕಾರಣ ಮಾಡಿದ ಹಿರಿಯ ಮುತ್ಸದ್ದಿ, 8 ಬಾರಿ ಸ್ಪರ್ಧಿಸಿ, ಆರು ಬಾರಿ ವಿಧಾನಸಭೆ ಪ್ರವೇಶಿಸಿದ ಅನುಭವಿ, 9ನೇ ಬಾರಿಗೆ ತನ್ನ ಕೊನೆಯ ಚುನಾವಣೆಯಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರೂ ಕೂಡಾ ಅಲ್ಪ ಅಂತರದಲ್ಲಿ ಸೋಲನುಭವಿಸಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅನಾಥ ಸ್ಥಿತಿಯನ್ನು ಅನುಭವಿಸುವಂತೆ ಮಾಡಿದ್ದು ಎಲ್ಲವೂ ಇದೀಗ ಇತಿಹಾಸ.
ಅಲ್ಪ ಅಂತರದಲ್ಲಿ ಸೋತರೂ ರೈ ಅವರಂತಹ ರಾಜಕೀಯ ನಾಯಕರು ಜಿಲ್ಲೆಗೆ, ರಾಜ್ಯಕ್ಕೆ ಅನಿವಾರ್ಯ ಎನ್ನುವ ನಿಟ್ಟಿನಲ್ಲಿ ಅವರನ್ನು ತಕ್ಷಣ ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡುವಂತೆ ಆಗ್ರಹ ಕೇಳಿ ಬರುತ್ತಿರುವ ಮಧ್ಯೆಯೇ ದೇಶದ ಇತಿಹಾಸದಲ್ಲಿ ಎಂದಿಗೂ, ಇದುವರೆಗೂ ಜಾತಿ ಕಾರಣ ಮಾಡಲು ಮನಸ್ಸು ಮಾಡದ, ರಾಜಕೀಯ ಎಂಬುದು ದೇಶದ ಜಾತ್ಯಾತೀತ ನೆಲೆಗಟ್ಟಿನಲ್ಲೇ ಸಾಗಬೇಕು ಎಂಬ ಉದಾತ್ತ ತತ್ವವನ್ನು ಮೈಗೂಡಿಸಿಕೊಂಡು ಚತುರ ರಾಜಕೀಯ ನಡೆಯನ್ನು ಪ್ರದರ್ಶಿಸಿದ ದೇಶದ ಏಕೈಕ ಬಹುದೊಡ್ಡ ಸಮುದಾಯವಾಗಿರುವ, ಅದರಲ್ಲೂ ದೇಶದ ಬಹುಪಾಲು ಕಡೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವ ಮುಸ್ಲಿಂ ಸಮುದಾಯ ಎಲ್ಲೂ ಜಾತಿ ರಾಜಕಾರಣದ ಉದ್ದೇಶದಿಂದ ಯಾವುದೇ ಪಕ್ಷದ ಜೊತೆಯೂ ಚೌಕಾಸಿ ಮಾಡಿದ ಇತಿಹಾಸ ಕಂಡು ಬರುತ್ತಿಲ್ಲ. ಆದರೆ ಜಿಲ್ಲೆಯಲ್ಲಿ ಈ ಬಾರಿ ಬಹುಶಃ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡ ಸಮುದಾಯವಾಗಿ ಕಂಡು ಬರುತ್ತಿರುವ ಮುಸ್ಲಿಂ ಸಮುದಾಯ ಅವಕಾಶವನ್ನು ನೀಡುವಂತೆ ಕಾಂಗ್ರೆಸ್ ನಾಯಕರ ಜೊತೆ ಮುಂದಿಟ್ಟಿದೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಪ್ರತೀ ಬಾರಿಯೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆಯ ಪೈಕಿ ಅರ್ಧದಷ್ಟು ಪಾಲು ಮತದಾರರ ಸಂಖ್ಯೆ ಹೊಂದಿರುವ ಮುಸ್ಲಿಮರು ಕಾಂಗ್ರೆಸ್ ಪಕ್ಷದಿಂದ ಸುಮಾರು 7 ಬಾರಿ ಬಿಲ್ಲವ ವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಸತತ ಸೋಲು ಅನುಭವಿಸಿದರೂ ಯಾವುದೇ ಶರತ್ತು, ಪ್ರತಿಫಲಾಪೇಕ್ಷೆ ಇಲ್ಲದೆ ಬೆಂಬಲಿಸಿದ್ದಾರೆ. ಒಂದು ಬಾರಿ ಬದಲಾವಣೆ ಬಯಸಿದ ವರ್ಷದಲ್ಲಿ ಬಂಟ ಸಮುದಾಯದ ಅಭ್ಯರ್ಥಿಯನ್ನೂ ಪೂರ್ಣ ಪ್ರಮಾಣದಲ್ಲಿ ಮುಸ್ಲಿಮರು ಬೆಂಬಲಿಸಿದ್ದಾರೆ. ಇತರ ಸಮುದಾಯಗಳ ಮತದಾರರು ಸೂಕ್ತ ಪ್ರಮಾಣದಲ್ಲಿ ಕೈ ಹಿಡಿಯದ ಕಾರಣಕ್ಕಾಗಿ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಗಿದೆ. ಈ ಕಾರಣಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಗೆ ಅಭ್ಯರ್ಥಿತನ ಅರ್ಹವಾಗಿಯೇ ನೀಡಿ ಅವಕಾಶ ಒದಗಿಸುವಂತೆ ಮುಸ್ಲಿಂ ಮುಖಂಡರ ನಿಯೋಗ ಕಾಂಗ್ರೆಸ್ ಹೈಕಮಾಂಡ್ ಬಳಿ ಬೇಡಿಕೆ ಮುಂದಿಟ್ಟಿದೆ ಎನ್ನಲಾಗುತ್ತಿದೆ.
ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಸ್ಲಿಂ ಮುಖಂಡರು ಮೊದಲ ಸ್ಥಾನವನ್ನು ಅರ್ಹ ವ್ಯಕ್ತಿ ಎಂಬ ನೆಲೆಯಲ್ಲಿ ಡಾ ಇಫ್ತಿಕಾರ್ ಅಲಿ ಅವರಿಗೆ ನೀಡಿದ್ದು, ವೈದ್ಯ ಪದವಿ ಪಡೆದು ಸುಶಿಕ್ಷಿತ ವ್ಯಕ್ತಿಯಾಗಿರುವ ಇಫ್ತಿಕಾರ್ ಅವರು ವೃತ್ತಿಯಲ್ಲೂ ವೈದ್ಯರಾಗಿದ್ದು, ಜೊತೆಗೆ ಉದ್ಯಮಿಯಾಗಿ, ಸಕ್ರಿಯ ರಾಜಕೀಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು, ಸಮಾಜ ಸೇವೆಯಲ್ಲೂ ಸೈ ಎನಿಸಿಕೊಂಡ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು ಈ ಕಾರಣಕ್ಕೆ ಮೊದಲ ಆಯ್ಕೆ ಡಾ ಇಫ್ತಿಕಾರ್ ಅವರಿಗೆ ನೀಡಿರುವ ಮುಸ್ಲಿಂ ಮುಖಂಡರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಚೆಯರ್ ಮೆನ್ ಡಾ ಹಾಜಿ ಮೋನು ಕಣಚೂರು ಅವರಿಗೆ 2ನೇ ಪ್ರಾಶಸ್ತ್ಯ ನೀಡಿದ್ದಾರೆ. ಕಣಚೂರು ಮೋನೂ ಕೂಡಾ ವಿದ್ಯಾವಂತರಾಗಿದ್ದು, ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡಿದ್ದಾರೆ. ಸ್ವತಃ ಮೆಡಿಕಲ್ ಕಾಲೇಜು ನಡೆಸುತ್ತಿರುವ ಅವರು ಉದ್ಯಮಿಯೂ ಆಗಿದ್ದು, ರಾಜಕೀಯ ಹಾಗೂ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದಾರೆ.
ಉಳಿದಂತೆ ಅಭ್ಯರ್ಥಿತನದ ಪಟ್ಟಿಯಲ್ಲಿ ಯುವ ನಾಯಕರಾಗಿ ರಾಜಕೀಯ ಕೇತ್ರದಲ್ಲಿ ಸಂಚಲನ ಮೂಡಿಸುತ್ತಿರುವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಂಗಳೂರು (ಉಳ್ಳಾಲ) ಕ್ಷೇತ್ರದ ಶಾಸಕರೂ, ಹಾಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಇತ್ತೀಚೆಗಷ್ಟೆ ರಾಜಕೀಯ ರಂಗ ಪ್ರವೇಶಿಸಿರುವ ಇನಾಯತ್ ಅಲಿ ಮುಲ್ಕಿ ಸಹಿತ ಇನ್ನೂ ಕೆಲ ಪ್ರಭಾವಿ ಮುಸ್ಲಿಂ ಮುಖಂಡರ ಹೆಸರುಗಳನ್ನು ಪಟ್ಟಿಯಲ್ಲಿ ಒಳಗೊಂಡಿದೆ.
ಮುಸ್ಲಿಂ ಮುಖಂಡರ ಬೇಡಿಕೆಗೆ ಕಾಂಗ್ರೆಸ್ ಪಡಸಾಲೆಯಲ್ಲಿ ಆರಂಭಿಕ ಹಂತದಲ್ಲಿ ಪೂರಕ ಸ್ಪಂದನೆ ದೊರೆತಿದೆ ಎನ್ನಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೂ ಮುಸ್ಲಿಂ ನಾಯಕರ ಈ ಬೇಡಿಕೆಗೆ ಅಸ್ತು ಎಂದಿದ್ದಾರೆ ಎನ್ನಲಾಗುತ್ತಿದೆ. ಮುಸ್ಲಿಂ ಮುಖಂಡರ ಪ್ರಯತ್ನ ಫಲ ನೀಡಿದ್ದೇ ಆದಲ್ಲಿ ಲೋಕಸಭಾ ಚುನಾವಣೆ ಘೋಷಣೆಗೂ ಮುಂಚಿತವಾಗಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆ ಮಾಡಿ ಪಕ್ಷ ಸಂಘಟನೆ ಹಾಗೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಸುವಂತೆ ಪಕ್ಷದ ನಾಯಕರು ಹಾಗೂ ಮುಖಂಡರು ಸಲಹೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸಂಘಟಿಸಿ ಸಂಸದರನ್ನು ಚುನಾಯಿಸಿ ಪಕ್ಷವನ್ನು ಮೇಲಕ್ಕೆತ್ತುವ ತವಕದಲ್ಲಿರುವ ಕಾಂಗ್ರೆಸ್ ನಾಯಕರು ಮುಸ್ಲಿಂ ನಾಯಕರ ಈ ಬೇಡಿಕೆಗೆ ಮನ್ನಣೆ ನೀಡಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವವನ್ನು ತಗ್ಗಿಸಿ ಕಾಂಗ್ರೆಸ್ ಮತ್ತೆ ಗತ ವೈಭವಕ್ಕೆ ಮರಳುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ ಎಂದು ತಿಳಿದು ಬಂದಿದೆ.
0 comments:
Post a Comment