ಬೆಂಗಳೂರು, ಮೇ 13, 2023 (ಕರಾವಳಿ ಟೈಮ್ಸ್) : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿದ್ದ ಹಾಗೂ ದೇಶದಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯನ್ನು ಧೂಳೀಪಟ ಮಾಡಿರುವ ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದ್ದು, ಏಕಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಈಗಾಗಲೇ ಸುಮಾರು 136 ರಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡು ಬೀಗಿರುವ ಕಾಂಗ್ರೆಸ್ ಸರಕಾರ ರಚನೆಗೆ ಸಿದ್ದತೆ ನಡೆಸಿಕೊಂಡಿದೆ.
ರಾಜ್ಯಾದ್ಯಂತ ಕಾಂಗ್ರೆಸ್ ಹವಾ ಧೂಳೆಬ್ಬಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಬಿಜೆಪಿ ರಣಕೇಕೆ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡರೆ, 2 ಕ್ಷೇತ್ರ ಮಾತ್ರ ಕೈ ಪಾಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರದಲ್ಲಿ 5ನಬೇ ಬಾರಿಗೆ ಸತತ ಗೆಲುವನ್ನು ಸಾಧಿಸಿರುವ ಯು ಟಿ ಖಾದರ್ ಅರ್ಹ ಜಯದೊಂದಿಗೆ ಇಲ್ಲಿ ಕಾಂಗ್ರೆಸ್ ಮಾನವನ್ನು ಕಾಪಾಡಿದರೆ, ಪುತ್ತೂರಿನಲ್ಲಿ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವಿನ ಕಾದಾಟದಲ್ಲಿ ಕಾಂಗೆಸ್ಸಿನ ಅಶೋಕ್ ಕುಮಾರ್ ಪ್ರಯಾಸದ ಜಯ ಸಾಧಿಸಿ ಕಾಂಗ್ರೆಸ್ಸಿಗೆ ಕರಾವಳಿಯಲ್ಲಿ ಇನ್ನೊಂದು ಸ್ಥಾನವನ್ನು ದಕ್ಕಿಸಿಕೊಟ್ಟಿದ್ದಾರೆ. ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪುತ್ತೂರಿನಲ್ಲಿ ಗೆದ್ದೇ ತೀರಬೇಕು ಎಂಬ ನಿಟ್ಟಿನಲ್ಲಿ ಸಾವಿನಲ್ಲೂ ರಾಜಕೀಯ ನಡೆಸಿದ್ದ ಬಿಜೆಪಿ ಮತೀಯ ಕಾರಣಕ್ಕೆ ಕೆಲವು ಕೊಲೆಗಳು ನಡೆದಿದ್ದರೂ ಕೇವಲ ಪ್ರವೀಣ್ ನೆಟ್ಟಾರು ಕೊಲೆಯನ್ನು ಮಾತ್ರ ರಾಜಕೀಯ ಕಾರಣಕ್ಕೆ ಬಳಸಿಕೊಂಡು ಪತ್ನಿಗೆ ಸರಕಾರಿ ಉದ್ಯೋಗ ಸಹಿತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಕ್ಷೇತ್ರವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬುದೇ ಇದೀಗ ಬಹುಚರ್ಚಿತ ವಿಷಯವಾಗಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ, 40 ಪರ್ಸೆಂಟ್ ಸರಕಾರ ಎಂದೆಲ್ಲಾ ಕುಖ್ಯಾತಿಗೆ ಒಳಗಾಗಿದ್ದ ಬಿಜೆಪಿ ಸರಕಾರ ಸಂಪೂರ್ಣವಾಗಿ ಕಾಂಗ್ರೆಸ್ ಹವಾಕ್ಕೆ ಹಾರಿಹೋಗಿದ್ದು, ಕೈ ಪಕ್ಷ ಕಿಲ ಕಿಲ ಎಂದಿದೆ. ಆಡಳಿತರೂಢ ಬಿಜೆಪಿ ಕೇವಲ 65 ಕ್ಷೇತ್ರಗಳನ್ನು ಮಾತ್ರ ಪಡೆದುಕೊಂಡರೆ, ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ 135+ ಕ್ಷೇತ್ರಗಳನ್ನು ಪಡೆದುಕೊಂಡು ಭರ್ಜರಿ ಬಹುಮತ ಸಾಬೀತುಪಡಿಸಿಕೊಂಡಿದೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ 19 ಸ್ಥಾನಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯ ಸರಕಾರದ ಆಡಳಿತದ ಹೊರತಾಗಿಯೂ ಕೆಲವೊಂದು ಸೂಕ್ಷ್ಮ ವಿಚಾರಗಳಿಂದ ಗೊಂದಲಕ್ಕೀಡಾಗಿದ್ದ ಮತದಾರ ಅತಂತ್ರ ವಿಧಾನಸಭೆಯನ್ನು ಸೃಷ್ಟಿಸಿ ಹಾಕಿದ್ದ. ಇದರಿಂದ ರಾಜ್ಯದಲ್ಲಿ ರಾಜಕೀಯ ಆಪರೇಶನ್ ಗಳಂತಹ ಕೀಳುಮಟ್ಟದ ರಾಜಕೀಯ ಬೆಳವಣಿಗೆಗಳು ನಡೆದು ರಾಜಕಾರಣಿಗಳ ಮೇಲಾಟಕ್ಕೆ ರಾಜ್ಯದ ಜನ ಬಳಲಿ ಬೆಂಡಾಗಿದ್ದು. ಈ ಬಾರಿ ಇದಕ್ಕೆಲ್ಲ ತಿಲಾಂಜಲಿ ಹಾಡಿದ ಮತದಾರ ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ ಸ್ಥಿರ ಸರಕಾರಕ್ಕೆ ಅನುಮತಿ ನೀಡಿದ್ದಾರೆ.
ಇದೀಗ ಭರ್ಜರಿ ಜಯದಿಂದ ಫುಲ್ ಖುಷ್ ಆಗಿರುವ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಗಾಗಿ ಸಭೆ ಕರೆದಿದ್ದು, ನಾಳೆ ಈ ಬಗ್ಗೆ ಸ್ಪಷ್ಟ ಸೂಚನೆ ಹೊರಬೀಳು ಸಾಧ್ಯತೆ ಇದೆ.
0 comments:
Post a Comment