ಬಂಟ್ವಾಳ, ಮೇ 06, 2023 (ಕರಾವಳಿ ಟೈಮ್ಸ್) : ಕ್ಷೇತ್ರಾದ್ಯಂತ ಸಂಚರಿಸಿದಾಗ ಮಹಿಳೆಯರ ಸಹಿತ ಕ್ಷೇತ್ರ ಸರ್ವ ವಿಭಾಗದ ಜನರ ಒಲವು ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಈ ಬಾರಿ ಕಾಂಗ್ರೆಸ್ ಮತ್ತೆ ವಿಜೃಂಭಿಸಲಿದೆ ಎಂದು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಬಿ ಸಿ ರೋಡಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಆಡಳಿತದ ತಪ್ಪು ನೀತಿಯಿಂದಾಗಿ ಜನ ಬದುಕುವುದೇ ದುಸ್ತರವಾಗಿರುವ ಇಂದಿನ ದಿನಗಳಲ್ಲಿ ಇದಕ್ಕೆ ಪರ್ಯಾಯ ಕಾಂಗ್ರೆಸ್ ಮಾತ್ರ ಎಂದು ಜನ ಸಂಪೂರ್ಣವಾಗಿ ಮನಗಂಡಿದ್ದು, ಇದುವೇ ಈ ಬಾರಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ ಎಂದರು.
ಬಿಜೆಪಿಯ ಜನ ವಿರೋಧಿ ಆಡಳಿತವೇ ಕಾಂಗ್ರೆಸ್ ಪಕ್ಷದ ಜನ ಪರ ಆಡಳಿತವನ್ನು ಜನತೆಗೆ ಮನವರಿಕೆ ಮಾಡಿಕೊಡಲು ಕಾರಣವಾಗಿದೆ. ಮಹಿಳೆಯರ ಸಹಿತ ಎಲ್ಲ ವರ್ಗದ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿರುವ ಏಕೈಕ ಪಕ್ಷವಾಗಿ ಕಾಂಗ್ರೆಸ್. ಕಾಂಗ್ರೆಸ್ ಯಾವತ್ತೂ ಜನ ವಿರೋಧಿ ನಿಲುವು ಹೊಂದಿಲ್ಲ. ತನ್ನ ಪ್ರತಿಯೊಂದು ಯೋಜನೆಗಳು ಕೂಡಾ ಸಮಾಜದ ತಳಮಟ್ಟದ ಜನರ ಹಿತದೃಷ್ಟಿಯನ್ನಿಟ್ಟುಕೊಂಡಿದೆ. ಆ ಕಾರಣಕ್ಕಾಗಿ ಇಂದಿಗೂ ದೇಶದಲ್ಲಿ ಜನ ಕೊಂಚವಾದರೂ ನೆಮ್ಮದಿಯನ್ನು ಪಡೆದುಕೊಂಡಿದ್ದಾರೆ ಎಂದ ಜಯಂತಿ ಪೂಜಾರಿ ಅದರಲ್ಲೂ ಬಂಟ್ವಾಳದಲ್ಲಿ ಆಗಿರುವ ಸಮಗ್ರ ಅಭಿವೃದ್ದಿ ಕೂಡಾ ರಮಾನಾಥ ರೈ ಅವರೊಬ್ಬರಿಂದಲೇ ಆಗಿರುವಂತದ್ದು ಎಂದು ಹೇಳಲು ಜನರಿಗೆ ಯಾವುದೇ ಸಂಕೋಚ ಬೇಡ. ರೈಗಳ ಅಭಿವೃದ್ದಿ ಪರ ಚಿಂತನೆಗಳನ್ನೇ ಮುಂದಿಟ್ಟುಕೊಂಡು ಇಂದು ಪಕ್ಷದ ಕಾರ್ಯಕರ್ತರು ಧೈರ್ಯದಿಂದ ಮತಯಾಚಿಸುವ ಸನ್ನಿವೇಶ ಇದೆ. ಜನರ ಪ್ರತಿಸ್ಪಂದನೆಯೂ ಇದಕ್ಕೆ ಪೂರಕವಾಗಿದ್ದು ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ಈ ಬಾರಿ ಅಭೂತಪೂರ್ವ ವಿಜಯ ರಮಾನಾಥ ರೈ ಪಾಲಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದ ಈ ಬಾರಿ ಗ್ಯಾರಂಟಿಗಳು ಕೂಡಾ ಬಹುಪಾಲು ಮಹಿಳಾಮಣಿಗಳನ್ನು ಕೇಂದ್ರೀಕರಿಸಿಕೊಂಡಿರುವುದರಿಂದ ಈ ಬಾರಿ ಮಹಿಳಾ ವರ್ಗ ಕಾಂಗ್ರೆಸ್ ಪಕ್ಷವನ್ನೇ ನೆಚ್ಚಿಕೊಂಡು ಪಕ್ಷವನ್ನು ಅಧಿಕಾರಕ್ಕೇರಿಸಲಿದ್ದಾರೆ ಎಂದು ಜಯಂತಿ ಪೂಜಾರಿ ತಿಳಿಸಿದರು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಬಂಟ್ವಾಳ ಪುರಭಾ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಪಕ್ಷದ ಮಹಿಳಾ ಪ್ರಮುಖರಾದ ಫ್ಲೋಸಿ ಡಿ’ಸೋಜ, ವಲರಿ, ಜೋಸ್ಪಿನ್ ಡಿ’ಸೋಜ, ಧನವಂತಿ, ಫೌಝಿಯಾ, ಶೋಭಾ ಶೆಟ್ಟಿ ಮೊದಲಾದವರು ಜೊತೆಗಿದ್ದರು.
0 comments:
Post a Comment