ಬಂಟ್ವಾಳ, ಜೂನ್ 09, 2023 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಎಂಬಲ್ಲಿನ ಅಡಿಕೆ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ ಅಡಿಕೆ ಕೀಳುತ್ತಿದ್ದ ವೇಳೆ ವಿದ್ಯುತ್ ಅವಘಡಕ್ಕೊಳಗಾಗಿ ಬೋಳಿಯಾರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ (29) ಅವರು ಮೃತಪಟ್ಟಿದ್ದಾರೆ.
ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ನಿವಾಸಿ ಮೂಸಬ್ಬ ಅವರ ತೋಟದಲ್ಲಿ ಅಡಿಕೆ ಕೀಳುವ ವೇಳೆ ಈ ಅವಘಡ ಸಂಭವಿಸಿದೆ. ಶಾಫಿ ಅವರು ಕಳೆದ ಕೆಲ ವರ್ಷಗಳಿಂದ ಅಡಿಕೆ ವ್ಯವಹಾರ ನಡೆಸುತ್ತಿದ್ದು, ಪ್ರತಿ ವರ್ಷ ಅಡಿಕೆಯನ್ನು ಮರದಿಂದಲೇ ಕ್ರಯಕ್ಕೆ ಪಡೆದು ಬಳಿಕ ಅಡಿಕೆ ಕೀಳುವ ಮೂಲಕ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ಶಾಫಿ ಅವರು ಅಡಿಕೆ ಕೀಳಲು ಕೀಳಲು ಇತ್ತೀಗಷ್ಟೆ ಹೊಸ ಪೈಬರ್ ಸಲಾಕೆ ಖರೀದಿ ಮಾಡಿದ್ದರು. ಶುಕ್ರವಾರ ಅದೇ ಹೊಸ ಸಲಾಕೆಯಲ್ಲಿ ಮಲಾಯಿಬೆಟ್ಟುವಿನ ತೋಟದಲ್ಲಿ ಅಡಿಕೆ ಕೀಳುವ ವೇಳೆ ಶಾಫಿ ಅವರ ಕೈಯಲ್ಲಿದ್ದ ಸಲಾಕೆ ನಿಯಂತ್ರಣ ಮೀರಿ ರಸ್ತೆಯ ಬದಿಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಾಗಿ ಸಲಾಕೆಯಲ್ಲಿ ಅಡಿಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಪ್ರವಹಿಸಿದ ಪರಿಣಾಮ ಶಾಫಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಜಿಪಮುನ್ನೂರು ಗ್ರಾಮ ಅಧಿಕಾರಿ ಸ್ವಾತಿ, ಸ್ಥಳೀಯ ಮೆಸ್ಕಾಂ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment