ಡಿ.ಎಸ್.ಐ.ಬಿ. ಪಾಣೆಮಂಗಳೂರು
ಕಳೆದ ವರ್ಷ ನೆಟ್ಟ ಗಿಡ ಈವಾಗ ಎಲ್ಲಿದೆ ಎಂದು ಮೊದಲು ಪ್ರಶ್ನೆ ಮಾಡಬೇಕಾಗಿದೆ ನಾವುಗಳು. ಏಕೆಂದರೆ ಪ್ರತಿ ವರ್ಷಕ್ಕೊಮ್ಮೆ ಪರಿಸರ ದಿನದಂದು ಕೇವಲ ಒಂದು ಫೋಟೋ ಮುಂದೆ ಫೋಸ್ ನೀಡಿ ಒಂದೊಂದು ಗಿಡಗಳನ್ನು ನೆಟ್ಟು ಬರುತ್ತಾರೆ. ಆ ಗಿಡಕ್ಕೆ ಯಾವುದೇ ಭದ್ರತೆ ಇರುವುದಿಲ್ಲ ಜೊತೆಗೆ ಒಂದು ಹನಿ ನೀರು ಕೂಡ ಹಾಕುವವರು ಇರುವುದಿಲ್ಲ. ಕೆಲವೇ ನಿಮಿಷ, ದಿನಗಳಲ್ಲಿ ಅದನ್ನು ಪ್ರಾಣಿಗಳು ತಿಂದು ಅಥವಾ ಅದಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಆ ಗಿಡ ಬೆಳೆಯದೆ ಒಣಗಿ ಸತ್ತು ಹೋಗುತ್ತದೆ. ಇನ್ನೂ ಎಲ್ಲಿಯಾದರೂ ಬೆಳೆದು ಮರವಾಗುವಾಗ ಹೆದ್ದಾರಿಯ ರಸ್ತೆ ಕಾಮಗಾರಿಗೆಂದು ಕಡಿದು ಹಾಕುತ್ತಾರೆ. ಒಟ್ಟಾರೆ ಹೇಳುವುದಾದರೆ ಪರಿಸರ ದಿನದಂದು ಒಂದು ದಿನ ಮಾತ್ರ ಗಿಡವನ್ನು ಬೆಳೆಸಿ ಕ್ಷಣಾರ್ಧದಲ್ಲಿ ತಿರುಗಿ ನೋಡದೆ ಹೋಗುವವರಿಗೆ ಪರಸರದ ಜೊತೆ ಪ್ರೀತಿ ಬರಲು ಹೇಗೆ ಸಾಧ್ಯ ಎಂಬುದು ನನ್ನ ಮೊದಲ ಪ್ರಶ್ನೆಯಾಗಿದೆ.
ಪರಿಸರ ಸ್ನೇಹಿಯೆಂದು ಗಿಡವೊಂದು ನೆಡುವ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪ್ರತಿಯೊಂದು ನಿಮಿಷ ಆ ಫೋಟೋಗೆ ಎಷ್ಟು ಲೈಕ್, ಕಾಮೆಂಟ್ ಗಳು ಬಂದಿವೆಂದು ನೋಡುವ ಹಾಗೆ ನೆಟ್ಟ ಗಿಡವನ್ನು ಕೂಡ ನೋಡುತ್ತಲೇ ಇರಬೇಕು. ಇನ್ನೂ ಗಿಡಗಳನ್ನು ರಸ್ತೆ ಬದಿ ಅಥವಾ ಗಿಡ ಕಳೆದುಕೊಳ್ಳುವ ಸಾಧ್ಯತೆ ಇರುವಂತಹ ಸ್ಥಳಗಳಲ್ಲಿ ನೆಡಬೇಡಿ ಮುಂದೆ ಮರವಾಗಿ ಬೆಳೆದಾಗ ಕಡಿಯಬೇಕಾಗಿ ಬರುವುದು ಅತೀ ಹೆಚ್ಚು. ಅದಕ್ಕಾಗಿ ಸೂಕ್ತ ಸ್ಥಳಗಳಲ್ಲಿ ಬೆಳೆಸಿರಿ. ಯಾವ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲವೋ ಆ ವಸ್ತುವನ್ನು ಬಳಸಲೇಬೇಡಿ. ಪ್ರಕೃತಿಯನ್ನು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟಿದ್ದಾರೆ, ನಾವೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿಸಬೇಕಾಗಿದೆ. ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರಾರು ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ಇಷ್ಟು ದಿನ ಮಾನವ ಪರಿಸರದ ವಿರುದ್ಧವೇ ವರ್ತಿಸಿದ್ದಾನೆ, ಆದರೆ ಇನ್ನು ಮುಂದೆ ಪರಿಸರಕ್ಕಾಗಿ ತನ್ನ ವರ್ತನೆಯ ವಿರುದ್ಧವೇ ವರ್ತಿಸಬೇಕಿದೆ. ಪರಿಸರದಲ್ಲಿ ಸಾಕಷ್ಟು ವಾಯು ಮಾಲಿನ್ಯವಿದೆ, ಅದಕ್ಕೆ ನಮ್ಮ ಶ್ವಾಸಕೋಶದ ಹೊರತು ಬೇರೆ ಎಲ್ಲೂ ಇರಲು ಜಾಗವಿಲ್ಲ. ನಾವು ಆಯ್ಕೆ ಮಾಡುವ ಪ್ರತಿಯೊಂದು ವಸ್ತುವಿನ ಮೂಲಕ ಈ ಪರಿಸರವನ್ನು ನಾವು ರಕ್ಷಿಸಬಹುದು. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗವಷ್ಟೇ.
ಕೆಲವು ವರ್ಷಗಳ ಹಿಂದೆ ನಾವು ನೋಡಿರಬಹುದು. ಮೇ ತಿಂಗಳಲ್ಲಿ ಮಳೆರಾಯನ ಆಗಮನವಾಗುತ್ತಿತ್ತು. ಪರಿಸರಗಳು ಹಚ್ಚ ಹಸಿರಿನಲ್ಲಿ ಕಂಗೊಳಿಸುತ್ತಿತ್ತು. ಈವಾಗ ಮೇ-ಜೂನ್ ತಿಂಗಳಾದರು ಮಳೆರಾಯ ಕಾಣುತ್ತಿಲ್ಲ. ಊರಿಡಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದೆಷ್ಟೋ ತೋಟಗಳನ್ನು ರಸ್ತೆಗಾಗಿ ಬಳಸುತ್ತಿದ್ದಾರೆ. ರಸ್ತೆ ಬದಿಯಲ್ಲಿದ್ದ ಅದೆಷ್ಟೋ ಮರ ಗಿಡಗಳನ್ನು ರಸ್ತೆ ಅಗಲ ಮಾಡಲು ನಾಶಪಡಿಸುತ್ತಿದ್ದಾರೆ. ಒಂದು ಕಡೆ ರಸ್ತೆ ನಿರ್ಮಾಣಕ್ಕಾದರೆ ಇನ್ನೊಂದು ಕಡೆ ಕಟ್ಟಡ ನಿರ್ಮಾಣಕ್ಕಾಗಿ ಪರಿಸರವನ್ನು ನಾಶ ಪಡಿಸುತ್ತಿರುವುದು ಕಾಣಬಹುದು. ಈ ರೀತಿಯಲ್ಲಿ ಪರಿಸರ ನಾಶ ಪಡಿಸುವುದರಿಂದ ಇಂದು ಭೂಮಿಗಳು ಒಣಗಿ ಹೋಗಿದೆ. ಮಳೆ ಇಲ್ಲದೆ ಮಾನವ ಒಂದು ಹನಿ ನೀರಿಗಾಗಿ ಪರದಾಡುತ್ತಿದ್ದಾನೆ. ನಾವು ಎಷ್ಟು ಜಾಗೃತರಾಗುತ್ತೇವೆ ಅಷ್ಟೇ ನಮಗೂ ಒಳ್ಳೆಯದು. ಮರ ಗಿಡಗಳನ್ನು ಪ್ರೀತಿಯಿಂದ ನಮ್ಮ ಮಕ್ಕಳಂತೆ ಅವುಗಳನ್ನು ಕೂಡ ಬೆಳೆಸಿದರೆ ಇಂದಿಗೆ ಅಲ್ಲದಿದ್ದರೂ ನಾಳೆ ನಮ್ಮ ಮಕ್ಕಳಿಗೆ ನೆರಳಾಗಿರುತ್ತವೆ. ಜೊತೆಗೆ ಆರೋಗ್ಯವನ್ನು ಕಾಪಾಡಲು ನಮಗೆ ಸಹಾಯ ಮಾಡುತ್ತವೆ.
ಇಂದು ಕೃಷಿ, ತೋಟಗಾರಿಕೆ ಮಾಡೋಣ ಅಂದರು ಸರಿಯಾದ ಜಾಗ ಕೂಡ ಸಿಗುತ್ತಿಲ್ಲ ಕಟ್ಟಡಗಳೆ ತಲೆ ಎತ್ತಿ ನಿಂತಿವೆ. ಕಟ್ಟಡಗಳ ಕಲುಷಿತವಾದ ನೀರುಗಳಿಂದಲೂ ಪರಿಸರ, ಕೃಷಿ ಭೂಮಿ ಕೆಡುತ್ತಿವೆ. ರೈತ ಕೃಷಿ ಭೂಮಿ ನಾಶದಿಂದಾಗಿ ಆತ್ಮಹತ್ಯೆಗೂ ದಾರಿಯಾಗುತ್ತಿವೆ.
ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳು ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತಿಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.
ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಕೈಗಾರಿಕೀಕರಣ, ನಗರೀಕರಣ ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ ಜತೆಗೆ ಪರಿಸರ ಮಾಲಿನ್ಯದ ಪ್ರಮಾಣ, ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರ ಬಗ್ಗೆ ಜನರಿಗೆ ಅರಿವಿದ್ದರೂ ಕೈಗೊಳ್ಳುವ ಜಾಗೃತಿ ಕ್ರಮಗಳು ಕಡಿಮೆ.
ಎರಡು ಮಾತು ಹೇಳಿ ನಾಲ್ಕು ಮಂದಿಯ ಚಪ್ಪಾಲೆಗೆ ದೊಡ್ಡವನಾದರೆ ಸಾಲದು. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರಬೇಕು. ಅವಾಗ ಮಾತ್ರ ಪರಿಸರ ದಿನಾಚರಣೆಗೊಂದು ಅರ್ಥ ಸಿಗುವುದು. ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ.
ಗಿಡ ನೆಟ್ಟು ಧರೆಯ ಗಟ್ಟಿತನವನ್ನು ಸಾರೋಣ.... ಜನರ ಪ್ರಾಣಕ್ಕಾಗಿ ಪ್ರಾಣ ವಾಯು ಬೇಕು, ಪ್ರಾಣ ವಾಯುವಿಗಾಗಿ ಪ್ರತಿಯೊಬ್ಬರು ಒಂದು ಗಿಡ ನೆಡಬೇಕು. ಈ ಭೂಮಿಗಿಂತ ಅತ್ಯುತ್ತಮವಾದ ಸ್ಥಳ ಬೇರೊಂದಿಲ್ಲ ಆದ್ದರಿಂದ ಶ್ರಮವಾದರೂ ಸರಿಯೇ ನಮ್ಮ ಭೂಮಿಯನ್ನು ರಕ್ಷಿಸೋಣ...
ಸರ್ವರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು.
0 comments:
Post a Comment