ಇಲಾಖಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಹೊಡೆದಾಟ, ತಲವಾರು ಕಾಳಗದ ಹಂತಕ್ಕೆ ಬಂದ ರಿಕ್ಷಾ ಚಾಲಕರ ಪಾರ್ಕಿಂಗ್ ವಿವಾದ - Karavali Times ಇಲಾಖಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಹೊಡೆದಾಟ, ತಲವಾರು ಕಾಳಗದ ಹಂತಕ್ಕೆ ಬಂದ ರಿಕ್ಷಾ ಚಾಲಕರ ಪಾರ್ಕಿಂಗ್ ವಿವಾದ - Karavali Times

728x90

14 July 2023

ಇಲಾಖಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಹೊಡೆದಾಟ, ತಲವಾರು ಕಾಳಗದ ಹಂತಕ್ಕೆ ಬಂದ ರಿಕ್ಷಾ ಚಾಲಕರ ಪಾರ್ಕಿಂಗ್ ವಿವಾದ

ಬಂಟ್ವಾಳ, ಜುಲೈ 14, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಕಳೆದ ಕೆಲ ದಿನಗಳಿಂದ ಅಟೋ ರಿಕ್ಷಾ ಚಾಲಕರು ಪರಸ್ಪರ ಭಿನ್ನ ಸಂಘಟನೆಗಳನ್ನು ಕಟ್ಟಿಕೊಂಡು ಪಾರ್ಕಿಂಗ್ ವಿಚಾರದಲ್ಲಿ ಕತ್ತಿ ಮಸೆಯುತ್ತಿದ್ದು, ನಿನ್ನೆಯಷ್ಟೆ ಗ್ರಾಮಾಂತರ ಪರವಾನಿಗೆ ಹೊಂದಿರುವ ರಿಕ್ಷಾ ಚಾಲಕರು ನಮಗೂ ಪೇಟೆ ಪ್ರವೇಶಕ್ಕೆ ಹಾಗೂ ಪಾರ್ಕಿಂಗ್ ಮಾಡಲು ಅವಕಾಶ ನೀಡುವಂತೆ ಕೋರಿ ಬಂಟ್ವಾಳ ಸಂಚಾರಿ ಪೊಲೀಸರು ಹಾಗೂ ಬಂಟ್ವಾಳ ಎಆರ್‍ಟಿಒ ಅವರಿಗೆ ಲಿಖಿತ ಮನವಿ ನೀಡಿದ್ದರು. ಈ ಮಧ್ಯೆ ಶುಕ್ರವಾರ ಸಂಜೆ ಇದೇ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೈಕಂಬ ಜಂಕ್ಷನ್ನಿನಲ್ಲಿ ರಿಕ್ಷಾ ಚಾಲಕರ ಎರಡು ಗುಂಪಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ತಲವಾರು ಬೀಸುವಲ್ಲಿಗೆ ತಲುಪಿದೆ. 

ಕೈಕಂಬ ಜಂಕ್ಷನ್ನಿನಲ್ಲಿ ರಿಕ್ಷಾ ಚಾಲಕನೋರ್ವ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳಿದ ಹಿನ್ನಲೆಯಲ್ಲಿ ಆತನ ತಂದೆ ಅದೇ ರಿಕ್ಷಾವನ್ನು ಕೈಕಂಬ ಪಾರ್ಕಿನಲ್ಲಿ ನಿಲ್ಲಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಗುಂಪಿಗೆ ಸೇರಿದ ರಿಕ್ಷಾ ಚಾಲಕರು ತಗಾದೆ ಎತ್ತಿದ ಪರಿಣಾಮ ಎರಡೂ ಗುಂಪಿನ ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದು ಹೊಡೆದಾಟದ ಹಂತಕ್ಕೂ ತಲುಪಿದ್ದು, ಈ ಸಂದರ್ಭ ವ್ಯಕ್ತಿಯೋರ್ವ ಗುಂಪಿನ ಮಧ್ಯೆ ತಲವಾರು ಝಳಪಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಘರ್ಷಣೆ ತಡೆಯಲು ಬಂದ ಸ್ಥಳೀಯ ಪುರಸಭಾ ಸದಸ್ಯ ಅವರ ಕೈಗೆ ಏಟು ಬಿದ್ದ ಪರಿಣಾಮ ಸಣ್ಣ ಮಟ್ಟದ ಗಾಯಾಳುವಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಘರ್ಷಣೆ ವೇಳೆ ಸ್ಥಳಕ್ಕೆ ಬಂದ ಪುರಸಭಾ ಸದಸ್ಯ  ಅವರು ರಿಕ್ಷಾ ಚಾಲಕರಲ್ಲಿ ಮನವಿ ಮಾಡಿಕೊಂಡಿದ್ದು, ಒಂದೇ ವೃತ್ತಿಯವರಾಗಿದ್ದುಕೊಂಡು ಘರ್ಷಣೆ ಸೃಷ್ಟಿಸಿಕೊಳ್ಳದೆ ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳಿ. ನಿಮಗೆ ಬರಬೇಕಾದ ಬಾಡಿಗೆ ಹಾಗೂ ಆದಾಯಗಳನ್ನು ದೇವರು ಅವರವರಿಗೆ ನೀಡಿಯೇ ನೀಡುತ್ತಾನೆ ಎಂಬ ರೀತಿಯಲ್ಲಿ ಹಿತ ವಚನಗಳನ್ನು ನೀಡಿದರಾದರೂ ಇದನ್ನು ಕೇಳಲು ತಯಾರಿಲ್ಲದ ಕೆಲ ಮಂದಿಗಳು ಮಾತಿನ ಚಕಮಕಿ ನಡೆಸಿದ ಪರಿಣಾಮ ಘರ್ಷಣೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಹೊಡೆದಾಟದ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ವಿವೇಕಾನಂದ ನೇತೃತ್ವದ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಅಟೋ ರಿಕ್ಷಾ ಚಾಲಕರು ಬಿ ಸಿ ರೋಡು ಹಾಗೂ ಕೈಕಂಬ ಪರಿಸರದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಗುಂಪು ಕಟ್ಟಿಕೊಂಡು ಮಾತಿನ ಚಕಮಕಿ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಸಬೇಕಾದ ಬಂಟ್ವಾಳ ಪುರಸಭಾಡಳಿತ, ಅಧಿಕಾರಿ ವರ್ಗ, ಬಂಟ್ವಾಳ ಸಂಚಾರಿ ಪೊಲೀಸರು ಹಾಗೂ ಬಂಟ್ವಾಳ ಸಾರಿಗೆ ಇಲಾಖಾಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ ಇದೀಗ ಹೊಡೆದಾಟದ ಹಂತಕ್ಕೆ ಬಂದು ತಲುಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಇಲಾಖಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಹೊಡೆದಾಟ, ತಲವಾರು ಕಾಳಗದ ಹಂತಕ್ಕೆ ಬಂದ ರಿಕ್ಷಾ ಚಾಲಕರ ಪಾರ್ಕಿಂಗ್ ವಿವಾದ Rating: 5 Reviewed By: karavali Times
Scroll to Top