ಬಂಟ್ವಾಳ, ಆಗಸ್ಟ್ 16, 2023 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅಮೃತ್ ಭಾರತ್ ರೈಲ್ವೆ ಸ್ಟೇಶನ್ ಕಾಮಗಾರಿಗೆ ಕೇಂದ್ರ ಸರಕಾರ 26.18 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸುವ ಸಲುವಾಗಿ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಹಾಗೂ ರೈಲ್ವೆ ಅಧಿಕಾರಿಗಳ ಜೊತೆಗೂಡಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಬುಧವಾರ ಅಪರಾಹ್ನ ಆಗಮಿಸಿದ ಅವರು, ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಈಗಾಗಲೇ ನಾನು ನೀಡಿದ ಬೇಡಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅನುದಾನ ಮಂಜೂರು ಮಾಡಿದೆ. ಈ ಪೈಕಿ ಮಂಗಳೂರಿನ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರೇ ಶಿಲಾನ್ಯಾಸ ನೆರವೇರಿಸಿದ್ದಾರೆ. ಬಂಟ್ವಾಳದ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 26.18 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಬಗ್ಗೆ ಈಗಾಗಲೇ ಮಾಸ್ಟರ್ ಪ್ಲಾನ್ ಕೂಡಾ ಸಿದ್ದಗೊಂಡಿದೆ. ತಕ್ಷಣ ಕಾಮಗಾರಿ ಆರಂಭಿಸಿ ಪೂರ್ಣಪ್ರಮಾಣದಲ್ಲಿ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಆಧುನಿಕ ರೀತಿಯಲ್ಲಿ ಬಂಟ್ವಾಳದ ರೈಲ್ವೆ ನಿಲ್ದಾಣವನ್ನು ಸಜ್ಜುಗೊಳಿಸಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಗೆ ವಂದೆ ಭಾರತ್ ರೈಲ್ವೆ ವಿಸ್ತರಣೆ ಮಾಡಲು ಪ್ರಯತ್ನ ನಡೆಸಲಾಗುವುದು ಎಂದ ಸಂಸದ ನಳಿನ್ ರೈಲ್ವೆ ನಿಲ್ದಾಣದ ಅಭಿವೃದ್ದಿಯ ಜೊತೆಗೆ ಶಾಸಕ ರಾಜೇಶ್ ನಾಯಕ್ ಅವರ ಅನುದಾನದಲ್ಲಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ಬಿ ಸಿ ರೋಡು ಪೇಟೆಯನ್ನು ಕೂಡಾ ಅಭಿವೃದ್ದಿಪಡಿಸಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್ ಇಂಜಿನಿಯರ್ ರಾಮಸುಬ್ಬಯ್ಯ ಅವರು, ಬಂಟ್ವಾಳ ರೈಲು ನಿಲ್ದಾಣಕ್ಕೆ ಸುಸಜ್ಜಿತ ಮೇಲ್ಚಾವಣಿ, ಪೂರ್ಣ ಪ್ರಮಾಣದ ಪ್ಲಾಟ್ ಫಾರಂಗಳು, ಪಾರ್ಕಿಂಗ್, ಉದ್ಯಾನವನ, ಉತ್ತಮ ರಸ್ತೆ ವ್ಯವಸ್ಥೆ, ವಿದ್ಯುದೀಪಗಳು, ಶೌಚಾಲಯಗಳು, ಎಸ್ಕಲೇಟರ್ ಹಾಗೂ ಲಿಫ್ಟ್ ಈ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡು ಅಭಿವೃದ್ದಿ ಮಾಡಲಾಗುವುದು ಎಂದರು.
ಇದೇ ವೇಳೆ ಬಿ ಸಿ ರೋಡು-ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಕಲ್ಲಡ್ಕ ಹಾಗೂ ಮೆಲ್ಕಾರ್ ಪೇಟೆಗೆ ಎದುರಾಗಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕಲ್ಲಡ್ಕ ಹಾಗೂ ಮೆಲ್ಕಾರ್ ಪರಿಸರದ ನಾಗರಿಕರು ಸಂಸದರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಸಂಸದ ನಳಿನ್ ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಕೊಟ್ಟು ಆಲಿಸಿಕೊಂಡು ಯಾರಿಗೂ ಸಮಸ್ಯೆಯಾಗದ ರೀತಿಯಲ್ಲಿ ಕಾಮಗಾರಿ ಮುಂದುವರಿಸುವಂತೆ ಸ್ಥಳದಲ್ಲಿದ್ದ ಹೆದ್ದಾರಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನ ಜಿ ಕೆ ಭಟ್, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ರೈಲ್ವೆ ಇಲಾಖಾಧಿಕಾರಿಗಳು, ಹೆದ್ದಾರಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment