ಅನ್ನಭಾಗ್ಯದಂತಹ ಬಡವರ ಪರ ಯೋಜನೆಗಳನ್ನು ವಿಮರ್ಶಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಿರಿ : ರಮಾನಾಥ ರೈ ಎಚ್ಚರಿಕೆ - Karavali Times ಅನ್ನಭಾಗ್ಯದಂತಹ ಬಡವರ ಪರ ಯೋಜನೆಗಳನ್ನು ವಿಮರ್ಶಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಿರಿ : ರಮಾನಾಥ ರೈ ಎಚ್ಚರಿಕೆ - Karavali Times

728x90

13 August 2023

ಅನ್ನಭಾಗ್ಯದಂತಹ ಬಡವರ ಪರ ಯೋಜನೆಗಳನ್ನು ವಿಮರ್ಶಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಿರಿ : ರಮಾನಾಥ ರೈ ಎಚ್ಚರಿಕೆ

ಬಂಟ್ವಾಳ, ಆಗಸ್ಟ್ 13, 2023 (ಕರಾವಳಿ ಟೈಮ್ಸ್) : ಅನ್ನಭಾಗ್ಯದಂತಹ ಬಡವರ ಪರವಾಗಿ ಕಾಂಗ್ರೆಸ್ ಜಾರಿ ಮಾಡಿರುವ ಅತ್ಯುತ್ತಮ ಕಾರ್ಯ ಯೋಜನೆಗಳ ಬಗ್ಗೆ ವಿಮರ್ಶೆ ಮಾಡುವವರ ಬಗ್ಗೆ ಜನ ಜಾಗರೂಕರಾಗಿರುವಂತೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಎಚ್ಚರಿಸಿದ್ದಾರೆ. 

ಬಂಟ್ವಾಳ ಬ್ಲಾಕ್‍ಯುವ ಕಾಂಗ್ರೆಸ್ ವತಿಯಿಂದ ಬಡಗ ಕಜೆಕಾರು ಮತ್ತು ತೆಂಕ ಕಜೆಕಾರು ಗ್ರಾಮಗಳ ವಲಯ ಸಮಿತಿ ಸಹಕಾರದಲ್ಲಿ  ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಸಮಿತಿ ಪುನರ್ ರಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಬಡವರ ಏಳಿಗೆ ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಸ್ವಾರ್ಥ ಸಾಧನೆಯ ಉದ್ದೇಶವಿಲ್ಲದೆ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಸ್ವತಃ ಪಡೆದುಕೊಂಡು ಒಟ್ಟಾರೆ ಯೋಜನೆಗಳ ಬಗ್ಗೆ ವಿಮರ್ಶೆ ಮಾಡುವ ಮಂದಿ ಸಮಾಜದಲ್ಲಿದ್ದು, ಇವರದು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಅಲ್ಲೋಲ ಕಲ್ಲೋಲ ಉಂಟು ಮಾಡುವುದೇ ಉದ್ದೇಶವಾಗಿದೆ. ಇಂತಹ ಜನರ ಬಗ್ಗೆ ಎಚ್ಚರ ಅಗತ್ಯ ಎಂದರು. ಕಾಂಗ್ರೆಸ್ ಪಕ್ಷ  ಬಡಜನತೆಯ ಪರವಾದ ಪಕ್ಷವಾಗಿದ್ದು,  ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ಏಕೈಕ ಪಕ್ಷವಾಗಿದೆ. ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಬದಲಾವಣೆ ಅಗತ್ಯ ಎಂದ ಅವರು ಭವಿಷ್ಯದ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದಾಗಿದೆ. ಯುವಕರು ದೇಶದ ಬಗ್ಗೆ ಚಿಂತನೆ ಬೆಳೆಸಿ ಎಲ್ಲ ಜಾತಿ, ಧರ್ಮದವರು ಸಾಮರಸ್ಯದ ಬದುಕು ನಡೆಸುವ ಸುಂದರ ಭಾರತದ ನಿರ್ಮಾಣಕ್ಕೆ ಶಕ್ತಿ ತುಂಬಬೇಕು ಎಂದು ರೈ ಇದೇ ವೇಳೆ ಕರೆ ನೀಡಿದರು. 

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು ಮಾತನಾಡಿ, ದ್ವೇಷದಿಂದ ಸುಳ್ಳಿನ ಮೂಲಕ ಅಪಪ್ರಚಾರ ಮಾಡಿ ರಮಾನಾಥ ರೈ ಅವರನ್ನು ಸೋಲಿಸಲಾಗಿದೆ. ಮುಂದಿನ ಚುನಾವಣೆಗಳಲ್ಲಿ ಇಂತಹ ಸುಳ್ಳಿನ ವಿರುದ್ಧ ಒಂದಾಗಿ ಹೋರಾಡಬೇಕಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮಿಸಿಬೇಕು ಎಂದು ಕರೆ ನೀಡಿದರು. 

ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ, ಪ್ರಮುಖರಾದ ಬಿ ಪದ್ಮಶೇಖರ್ ಜೈನ್, ಕೆ ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಸುಧಾಕರ ಶೆಣೈ ಖಂಡಿಗ, ಸತೀಶ್ಚಂದ್ರ ಕೆ ಎ ಹೊಸಮನೆ, ಜಯ ಬಂಗೇರ, ರಕ್ಷಿತಾ, ಮೋಹಿನಿ, ಜೋನ್ ಸಿಕ್ವೇರಾ, ವಾಸು ಪೂಜಾರಿ ಮಿತ್ತೋಟು, ಪುತ್ತುಮೋನು, ಬಿ ಆರ್ ಅಂಚನ್, ರಾಮಚಂದ್ರ ಕಂರ್ಬಡ್ಕ, ವಿಠಲ ಪೂಜಾರಿ, ಅಬೂಬಕ್ಕರ್, ಲತೀಫ್ ಪಾಂಡವರಕಲ್ಲು, ಯಾಕೂಬ್, ಅಬ್ದುಲ್ ಸಮದ್, ಅನ್ವರ್ ಸಾದಿಕ್, ಸಿದ್ದಿಕ್ ಕುತ್ತಾಡಿ, ನಿಶ್ಚಿತ್ ಆರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. 

ಇದೇ ವೇಳೆ ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಲಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ನಡೆಯಿತು.  

  • Blogger Comments
  • Facebook Comments

0 comments:

Post a Comment

Item Reviewed: ಅನ್ನಭಾಗ್ಯದಂತಹ ಬಡವರ ಪರ ಯೋಜನೆಗಳನ್ನು ವಿಮರ್ಶಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಿರಿ : ರಮಾನಾಥ ರೈ ಎಚ್ಚರಿಕೆ Rating: 5 Reviewed By: karavali Times
Scroll to Top