ರಾಜಧರ್ಮ ಪಾಲಿಸುವ ಶಾಸಕರು ಪಕ್ಷದ ಕಾರ್ಯಕರ್ತರ ಅಕ್ರಮಕ್ಕೆ ಬ್ರೇಕ್ ಹಾಕಬೇಕು ಎಂದ ಗ್ರಾಮಸ್ಥರು
ಬಂಟ್ವಾಳ, ಆಗಸ್ಟ್ 02, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೂ ಸ್ಮಶಾನ ಭೂಮಿಗೆ ಮೀಸಲಿಟ್ಟ ಜಮೀನನ್ನು ಬಿಜೆಪಿ ಬೆಂಬಲಿತ ಸದಸ್ಯನೇ ಅಕ್ರಮವಾಗಿ ಕಬಳಿಸಿಕೊಂಡು ಕೃಷಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿನ ಗ್ರಾಮಸಭೆಯಲ್ಲಿ ನಡೆದಿದೆ.
ಗ್ರಾ ಪಂ ಅಧ್ಯಕ್ಷೆ ಸಬೀನಾ ಹಮೀದ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು ಸಜಿಪಮುನ್ನೂರು ಗ್ರಾಮದ 6ನೇ ವಾರ್ಡಿನ ಆಲಾಡಿ-ಶಾರದಾ ನಗರದಲ್ಲಿ ಸರ್ವೆ ನಂಬ್ರ 29/1 ರ 0.50 ಎಕ್ರೆ ಜಮೀನನ್ನು 1994-95ರಲ್ಲೇ ಕಮಿಷನರ್ ಆದೇಶ ಸಂಖ್ಯೆ ಎಲ್ ಎನ್ ಡಿ ಸಿ ಆರ್ 153/94-95ರಂತೆ ಸಾರ್ವಜ£ಕ ಸ್ಮಶಾನಕ್ಕೆ ಮೀಸಲಾಗಿಡಲಾಗಿದೆ. ಸದ್ರಿ ಸ್ಮಶಾನ ಜಾಗದಲ್ಲಿ ಇನ್ನೂ ಸ್ಮಶಾನ £ರ್ಮಾಣ ಆಗಿಲ್ಲ ಮಾತ್ರವಲ್ಲ ಸದ್ರಿ ಮೀಸಲು ಜಮೀನನ್ನು ಪಂಚಾಯತಿನ ಬಿಜೆಪಿ ಬೆಂಬಲಿತ ಸದಸ್ಯ ಸುಂದರ ಪೂಜಾರಿ ಎಂಬವರು ಅಕ್ರಮವಾಗಿ ಕಬಳಿಸಿ ಕೃಷಿ-ಕೃತಾವಳಿ ಮಾಡಿಕೊಂಡು ಫಸಲಿನ ಲಾಭವನ್ನು ವೈಯುಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತೀವ್ರ ತರಾಟೆಗೆಳೆದರು.
ಈ ಸಂದರ್ಭ ಈ ಬಗ್ಗೆ ತಿಳುವಳಿಕೆ ಪತ್ರ ನೀಡಿ ಪ್ರಕ್ರಿಯೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ಪಿಡಿಒ ಲಕ್ಷ್ಮಣ್ ಹಾಗೂ ನೋಡಲ್ ಅಧಿಕಾರಿ ದಿನೇಶ್ ಅವರು ಸ್ಪಷ್ಟನೆ ನೀಡಲು ಪ್ರಯತ್ನಿಸಿದರು. ಈ ಸಂದರ್ಭ ಮತ್ತಷ್ಟು ಕೆರಳಿದ ಗ್ರಾಮಸ್ಥರು ಸರಕಾರ ಸ್ಮಶಾನಕ್ಕೆ ಮೀಸಲಿಟ್ಟ ಜಮೀನನ್ನು ಇಷ್ಟು ವರ್ಷಗಳ ಕಾಲ ಅತಿಕ್ರಮಿಸಿ ಅಕ್ರಮ ಕೃಷಿ ಮಾಡಿಕೊಂಡು ಸ್ವತಃ ಲಾಭಗಿಟ್ಟಿಸಿಕೊಳ್ಳುತ್ತಿದ್ದರೂ ಮೌನವಾಗಿರುವ ಅಧಿಕಾರಿಗಳಿಗೆ ಇನ್ನೂ ಪ್ರಕ್ರಿಯೆ ಮುಗಿಯಲಿಕ್ಕಿಲ್ವಾ ಎಂದು ಪ್ರಶ್ನಿಸಿದರಲ್ಲದೆ ರಾಜಧರ್ಮದ ಬಗ್ಗೆ ಮಾತನಾಡುವ ಶಾಸಕರ ಪಕ್ಷದ ಪಂಚಾಯತ್ ಸದಸ್ಯರು ಈ ರೀತಿ ಮಾಡುವುದು ಸರಿಯಲ್ಲ. ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಜಮೀನನ್ನು ಪಂಚಾಯತ್ ಸುಪರ್ದಿಗೆ ಪಡೆದು ಸ್ಮಶಾನಕ್ಕೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಸುಬ್ರಹ್ಮಣ್ಯ ಭಟ್ ಹಾಗೂ ಯೂಸುಫ್ ಕರಂದಾಡಿ ಆಗ್ರಹಿಸಿದರು.
ಈ ಸಂದರ್ಭ ಪ್ರತಿಕ್ರಯಿಸಿದ ನೋಡಲ್ ಅಧಿಕಾರಿ ದಿನೇಶ್ ಅವರು ಸಜಿಪಮುನ್ನೂರು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲದೆ ಇರುವುದರಿಂದ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಚರ್ಚೆಗೆ ಮುಕ್ತಾಯ ಹಾಡುವ ಪ್ರಯತ್ನ ನಡೆಸಿದರಾದರೂ ಸುಮ್ಮನಾಗದ ಗ್ರಾಮಸ್ಥರು ಮತ್ತೆ ಆಕ್ರೋಶ ವ್ಯಕ್ತಪಡಿಸಿದಾಗ ಚರ್ಚೆ ಮತ್ತೆ ಕಾವೇರುವ ಹಂತದಲ್ಲಿ ಸ್ಮಶಾನ ಜಮೀನು ಅತಿಕ್ರಮಣ ಆರೋಪ ಎದುರಿಸುತ್ತಿರುವ ಸದಸ್ಯ ಸುಂದರ ಪೂಜಾರಿ ಅವರು ಗ್ರಾಮಸಭೆಯಿಂದ ಕಾಲ್ಕಿತ್ತ ಘಟನೆಗೂ ಸಭೆ ಸಾಕ್ಷಿಯಾಯಿತು.
ಇತ್ತೀಚೆಗೆ ನಂದಾವರ-ಗುಂಪುಮನೆ ಎಂಬಲ್ಲಿ ಗುಡ್ಡ ಕುಸಿದು ಮಹಿಳೆ ಮೃತಪಟ್ಟ ಸ್ಥಳಕ್ಕೆ ಇನ್ನೂ ಸ್ಥಳೀಯ ಶಾಸಕರು ಭೇಟಿ ನೀಡದೆ ಇರುವುದು ಮನಸ್ಸಿಗೆ ಬಹಳ ನೋವಾಗಿದೆ ಎಂದು ವಿಷಯ ಪ್ರಸ್ತಾಪಿಸಿದ ಮಾಜಿ ಸದಸ್ಯ ಮುಸ್ತಫಾ ಅವರು ಕ್ಷೇತ್ರದ ಎಲ್ಲ ವರ್ಗದ ಜನರ ಜನಪ್ರತಿನಿಧಿಯಾಗಿರುವ ಶಾಸಕರು ಒಂದು ವರ್ಗಕ್ಕೆ ಸೀಮಿತಗೊಂಡಂತೆ ನಡೆದುಕೊಂಡಿರುವ ಬಗ್ಗೆ ಬೇಸರವಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಅನ್ಸಾರ್ ಅವರು ನಮ್ಮ ಶಾಸಕರು ನಂದಾವರದಲ್ಲಿ ಒಂದು ವರ್ಗಕ್ಕೆ ಸೀಮಿತವಾಗಿ ಮಾತ್ರ ರಸ್ತೆ ಮೊದಲಾದ ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತಿದ್ದು, ನಿರ್ದಿಷ್ಟ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ ಎಂದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಮಾಜಿ ಸದಸ್ಯ ಇದ್ದಿನಬ್ಬ ಅವರು ನಮ್ಮ ಶಾಸಕರು ಸಜಿಪಮುನ್ನೂರು ಗ್ರಾಮಕ್ಕೆ ಈಗಾಗಲೇ 20 ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ. ತಾರತಮ್ಯ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಬಾಲಕಿಯ ಆರೋಗ್ಯ ವಿಚಾರಿಸಿದ್ದಾರಲ್ಲದೆ ವೈಯುಕ್ತಿಕವಾಗಿ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ ಎಂದು ತೇಪೆ ಹಚ್ಚುವ ಪ್ರಯತ್ನ ನಡೆಸಿದರು. ಈ ಸಂದರ್ಭ ಮಾತಿಗಿಳಿದ ಯೂಸುಫ್ ಕರಂದಾಡಿ ಅವರು ಇದೆಲ್ಲಾ ಗ್ರಾಮಸಭೆಯಲ್ಲಿ ಚರ್ಚಿಸುವ ವಿಷಯ ಅಲ್ಲವಾಗಿದ್ದು, ಆದರೂ ಆಲಾಡಿ, ಮಲಾಯಿಬೆಟ್ಟು ಮುದಲ್‍ಮುಟ್ಟಿ ದೇವಸ್ಥಾನ ಮೊದಲಾದ ಏರಿಯಾಗಳಿಗೆ ಶಾಸಕರ ನಿಧಿಯಿಂದ ದೇವಸ್ಥಾನಗಳಿಗೆ ರಸ್ತೆ ಅಭಿವೃದ್ದಿ ನಡೆದಿದ್ದರೂ ಅದೇ ಪರಿಸರದಲ್ಲಿರುವ ನಾಲ್ಕು ಮುಸ್ಲಿಂ ಮನೆಗಳನ್ನು ನಿರ್ಲಕ್ಷಿಸಿದ್ದಾರೆ ಇದು ರಾಜಧರ್ಮಕ್ಕೆ ಹೇಳಿಸಿದ್ದಲ್ಲ ಎಂದು ಚರ್ಚೆಗೆ ತೆರೆ ಎಳೆದರು. ಮಾಜಿ ಅಧ್ಯಕ್ಷ ಶರೀಫ್ ನಂದಾವರ, ಮಾಜಿ ಸದಸ್ಯ ಕಬೀರ್ ಆಲಾಡಿ ಚರ್ಚೆಗಳಿಗೆ ಧ್ವನಿಗೂಡಿಸಿದರು. ನಂದಾವರ-ಗುಂಪುಮನೆ ಎಂಬಲ್ಲಿನ ಗುಡ್ಡಕುಸಿತಕ್ಕೆ ಪರಿಹಾರವಾಗಿ ಶಾಶ್ವತ ತಡೆಗೋಡೆ ನಿರ್ಮಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಸಭೆ ನಿರ್ಣಯಿಸಿತು. ಪಂಚಾಯತ್ ವ್ಯಾಪ್ತಿಯ ಕಸ-ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರವಾಗದ ಬಗ್ಗೆಯೂ ಗ್ರಾಮಸ್ಥರು ಗಂಭೀರ ಚರ್ಚೆ ನಡೆಸಿ ಅಧಿಕಾರಿಗಳನ್ನು ಪ್ರಶ್ನಿಸಿದರು.
0 comments:
Post a Comment