ಕಾಂಗ್ರೆಸ್ ಬೆಂಬಲಿತ ನೂತನ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರಿಗೆ ಬ್ಲಾಕ್ ಘಟಕದಿಂದ ಸನ್ಮಾನ
ಬಂಟ್ವಾಳ, ಸೆಪ್ಟೆಂಬರ್ 03, 2023 (ಕರಾವಳಿ ಟೈಮ್ಸ್) : ಸ್ಥಳೀಯಾಡಳಿತವಾಗಿರುವ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರುಗಳು ಸ್ವಾರ್ಥ ಹಿತಚಿಂತನೆಗಳನ್ನು ಬದಿಗಿಟ್ಟು, ಜನಪರ ಕೆಲಸಗಳನ್ನು ಮಾಡುವ ಮೂಲಕ ವೈಯುಕ್ತಿಕವಾಗಿಯೂ ಜನರ ವಿಶ್ವಾಸಗಳಿಸಿಕೊಳ್ಳುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಉಳಿಸಿಕೊಂಡು ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಗೌರವಯುತವಾಗಿ ಆಡಳಿತ ನಡೆಸಿಕೊಂಡು ಬನ್ನಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಸಲಹೆ ನೀಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರಾಗಿ 2ನೇ ಅವಧಿಗೆ ಆಯ್ಕೆಯಾದವರಿಗೆ ಬಿ ಸಿ ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾಜಿ ಪ್ರದಾನಿ ರಾಜೀವ್ ಗಾಂಧಿ ಅವರ ಕನಸಿನ ಕೂಸಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿದ ಖ್ಯಾತಿ ಕಾಂಗ್ರೆಸ್ ಪಕ್ಷ ಹಾಗೂ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. ಈ ಹಿಂದೆ ಜಿಲ್ಲಾ ಪರಿಷತ್, ಜಿಲ್ಲಾ ಪಂಚಾಯತಿಗೆ ಅನುದಾನಗಳು ಬರುತ್ತಿತ್ತು. 2012ರಲ್ಲಿ ಕಾಂಗ್ರೆಸ್ ಸರಕಾರವು ನೇರ ವರ್ಗಾವಣೆ ಕಾನ್ಸೆಪ್ಟ್ ಜಾರಿ ಮಾಡಿದ್ದರಿಂದ ಎಲ್ಲಾ ಗ್ರಾಮ ಪಂಚಾಯತ್‍ಗಳು ಆಡಳಿದಲ್ಲಿ ಚುರುಕು ಮುಟ್ಟಿಸುವ ಕೆಲಸಗಳು ಆರಂಭವಾದವು. ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಗಮನಾರ್ಹವಾದುದು ಎಂದವರು ಬಣ್ಣಿಸಿದರು.
ಇದೇ ವೇಳೆ ಮಾತನಾಡಿದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯಲ್ಲಿ ಕಳೆದ ಬಾರಿ 9 ಗ್ರಾಮ ಪಂಚಾಯತ್ ಆಡಳಿತ ಕಾಂಗ್ರೆಸ್ ಬೆಂಬಲಿತರದಿತ್ತು. ಈ ಬಾರಿ 4 ಪಂಚಾಯತ್ ಹೆಚ್ಚುವರಿಯಾಗಿ ಕೈ ತೆಕ್ಕೆಗೆ ಬಂದು ಒಟ್ಟು 13 ಗ್ರಾಮ ಪಂಚಾಯತ್ ಆಡಳಿತ ಕಾಂಗ್ರೆಸ್ ಬೆಂಬಲಿತ ತೆಕ್ಕೆಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಸರಕಾರಗಳು ಮಾಡಿದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಆಡಳಿತಗಳು ಕೂಡ ಬದಲಾಗಿದೆ. ಮುಂದಿನ ಲೋಕಸಭಾ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪಕ್ಷದ ಯಾರೇ ಅಭ್ಯರ್ಥಿಯಾದರು ಒಗ್ಗಟ್ಟಿನಿಂದ ದುಡಿದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಮಾರಂಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಕೆ ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಂಪತ್ ಕುಮಾರ್ ಶೆಟ್ಟಿ, ಇಬ್ರಾಹಿಂ ನವಾಝ್ ಬಡಕಬೈಲು, ಮಲ್ಲಿಕಾ ಪಕ್ಕಳ, ಸುರೇಶ್ ಜೋರಾ ಮೊದಲಾದವರಿದ್ದರು.
0 comments:
Post a Comment