ಮಂಗಳೂರು, ಅಕ್ಟೋಬರ್ 27, 2023 (ಕರಾವಳಿ ಟೈಮ್ಸ್) : ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಕನಾಡಿ ನಗರದ ಜಂಕ್ಷನ್ನಿನಲ್ಲಿ ನಿತ್ಯ ಜನ ಓಡಾಡುವ ಫುಟ್ ಪಾತ್ ವೊಂದು ಯಾವುದೇ ಸುರಕ್ಷಾ ಕ್ರಮವಿಲ್ಲದೆ ಅಪಾಯ ಆಹ್ವಾನಿಸುತ್ತಿದ್ದು, ಸಾರ್ವಜನಿಕರು ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಕನಾಡಿ ನಗರದ ಜಂಕ್ಷನ್ನಿನಲ್ಲಿ ಈ ಅಸುರಕ್ಷಿತ ಫುಟ್ ಪಾತ್ ಇದ್ದು, ನಿತ್ಯ ಸಹಸ್ರಾರು ಸಂಖ್ಯೆಯ ಪಾದಚಾರಿಗಳು ಈ ಫುಟ್ ಪಾತ್ ಮೇಲೆ ಸಂಚರಿಸುತ್ತಿದ್ದಾರೆ. ಫುಟ್ ಪಾತ್ ನಲ್ಲಿ ಸಂಚರಿಸುವ ವೇಳೆ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಿದೆ ಇಲ್ಲಿನ ಪರಿಸ್ಥಿತಿ. ಫುಟ್ ಪಾತಿನ ಕೆಳಗೆ ಪಾತಾಳದಂತಿದ್ದು, ಫುಟ್ ಪಾತಿನ ಬದಿಗೆ ಯಾವುದೇ ಸುರಕ್ಷಾ ಗೇಟು ಅಳವಡಿಸಲಾಗಿಲ್ಲ. ಈ ಹಿಂದೆ ಇಲ್ಲಿನ ಗೇಡರ್ ರೀತಿಯ ಸುರಕ್ಷಾ ಗೇಟ್ ಇತ್ತು. ಇತ್ತೀಚೆಗೆ ರಸ್ತೆ ಅಭಿವೃದ್ದಿ ವೇಳೆ ಇದನ್ನು ತೆರವುಗೊಳಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು. ಫುಟ್ ಪಾತಿನ ಕೆಳಗಡೆ ವಾಣಿಜ್ಯ ಕಟ್ಟಡದ ಅಂಡರ್ ಗ್ರೌಂಡಿನಲ್ಲಿರುವ ಅಂಗಡಿ ಮಾಲಕರು ಮುಖ್ಯ ರಸ್ತೆಗೆ ಅಂಗಡಿ ದರ್ಶನ ಆಗುತ್ತಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಸುರಕ್ಷಾ ಗೇಟ್ ಅಳವಡಿಕೆಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ.
ಫುಟ್ ಪಾತ್ ಹೇಗೂ ಅಸುರಕ್ಷತೆಯಿಂದ ಕೂಡಿದ್ದು, ಇನ್ನು ಇಲ್ಲಿನ ಜನ ನಡೆದಾಡುವ ಸ್ಥಳದಲ್ಲೇ ಯಾವುದೋ ವಾಣಿಜ್ಯ ಉದ್ದೇಶದ ಬೋರ್ಡ್ ಇಟ್ಟು ಹೋಗಿ ದಿನಗಳು ಹಲವು ಕಳೆದರೂ ಇನ್ನೂ ಅದನ್ನು ತೆರವುಗೊಳಿಸಲಾಗಿಲ್ಲ. ಸಮೀಪದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೂಡಾ ಕೂಡಾ ಇದೆ. ಅಲ್ಲದೆ ಅದೇ ಜಾಗದಲ್ಲಿ ದ್ವಿಚಕ್ರ ವಾಹನ ಸವಾರರೂ ಕೂಡಾ ಅಲ್ಲೆ ನಿಲ್ಲಿಸಿ ಹೋಗುತ್ತಿರುವುದರಿಂದ ಪಾದಚಾರಿಗಳು ನಡೆದಾಡಲೂ ದುಸ್ತರವಾಗುತ್ತಿದೆಯಲ್ಲದೆ ಅಪಾಯಕ್ಕೂ ಆಹ್ವಾನ ನೀಡಿದಂತಾಗುತ್ತಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಇಲ್ಲಿನ ಅಸುರಕ್ಷತೆ ಹಾಗೂ ಅವ್ಯವಸ್ಥೆ ಬಗ್ಗೆ ತಕ್ಷಣ ಗಮನ ಹರಿಸಿ ಜೀವ ಹಾನಿ ಅಥವಾ ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಮಹಾನಗರದ ಜನ ಆಗ್ರಹಿಸಿದ್ದಾರೆ.
0 comments:
Post a Comment