ಹಳೆಯ ವಾಹನಗಳಿಗೆ ಎಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕೊನೆ ದಿನಾಂಕ 3 ತಿಂಗಳು ವಿಸ್ತರಿಸಿ ಸಾರಿಗೆ ಇಲಾಖೆ ಅಧಿಕೃತ ಆದೇಶ - Karavali Times ಹಳೆಯ ವಾಹನಗಳಿಗೆ ಎಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕೊನೆ ದಿನಾಂಕ 3 ತಿಂಗಳು ವಿಸ್ತರಿಸಿ ಸಾರಿಗೆ ಇಲಾಖೆ ಅಧಿಕೃತ ಆದೇಶ - Karavali Times

728x90

18 November 2023

ಹಳೆಯ ವಾಹನಗಳಿಗೆ ಎಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕೊನೆ ದಿನಾಂಕ 3 ತಿಂಗಳು ವಿಸ್ತರಿಸಿ ಸಾರಿಗೆ ಇಲಾಖೆ ಅಧಿಕೃತ ಆದೇಶ

ಬೆಂಗಳೂರು, ನವೆಂಬರ್ 18, 2023 (ಕರಾವಳಿ ಟೈಮ್ಸ್) : ಹಳೆಯ ವಾಹನಗಳಿಗೆ ಎಚ್‍ಎಸ್‍ಆರ್‍ಪಿ ಭದ್ರತಾ ನೊಂದಣಿ ಫಲಕಗಳನ್ನು ಅಳವಡಿಸಲು ನೆವಂಬರ್ 17 ಇದ್ದ ಕೊನೆಯ ದಿನಾಂಕವನ್ನು ಸಾರಿಗೆ ಇಲಾಖೆ ಮೂರು ತಿಂಗಳುಗಳ ಕಾಲ ಅಂದರೆ 2024ರ ಫೆಬ್ರವರಿ 17ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ.

ಮೊನ್ನೆ ದೀಪಾವಳಿ ಸಂದರ್ಭದಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‍ಎಸ್‍ಆರ್‍ಪಿ) ಅಳವಡಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಇಲಾಖೆ ಅಧಿಕೃತವಾಗಿ ಈ ಬಗ್ಗೆ ಆದೇಶ ಹೊರಡಿಸಿದೆ. 2024ರ ಫೆಬ್ರವರಿ 17ರವರೆಗೆ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. 

ಕರ್ನಾಟಕ ರಾಜ್ಯದಲ್ಲಿ ದಿನಾಂಕ: 01-04-2019ಕ್ಕಿಂತ ಮೊದಲು ನೋಂದಾಯಿಸಲಾದ ಹಳೆಯ ವಾಹನಗಳಿಗೆ ನವೆಂಬರ್ 17, 2023 ರೊಳಗಾಗಿ ಹೆಚ್‍ಎಸ್‍ಆರ್.ಪಿ ಅಳವಡಿಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರವು ಅಧಿಸೂಚನೆ ಸಂಖ್ಯೆ, ಟಿಡಿ 193 ಟಿಡಿಒ 2021, ದಿನಾಂಕ:17-8-2023 ರಂದು ಆದೇಶ ಹೊರಡಿಸಿತ್ತು. ಇದೀಗ ಸರ್ಕಾರದ ಅಧಿಸೂಚನೆ ಸಂಖ್ಯೆ, ಟಿಡಿ 193 ಟಿಡಿಒ 2021 ನವೆಂಬರ್ 16, 2023ರಂದು, ನವೆಂಬರ್ 17, 2023ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಫೆಬ್ರವರಿ 17 2024ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿರುತ್ತದೆ ಎಂದು ಸಾರಿಗೆ ಇಲಾಖೆ ತನ್ನ ಅಧಿಕೃತ ಆದೇಶದಲ್ಲಿ ಹೇಳಿದೆ.

ಎಪ್ರಿಲ್ 1, 2019ಕ್ಕಿಂತ ಮೊದಲು ನೋಂದಾಯಿಸಲಾದ ಹಳೆಯ ವಾಹನಗಳ ಮಾಲೀಕರು ಫೆಬ್ರವರಿ 17, 2024ರೊಳಗಾಗಿ ತಮ್ಮ ವಾಹನಗಳಿಗೆ ಎಚ್.ಎಸ್.ಆರ್.ಪಿ. ಅಳವಡಿಕೆ ಮಾಡಿಕೊಳ್ಳುವಂತೆ ಈ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ತಿಳಿಸಲಾಗಿದೆ. ನಿಗದಿತ ದಿನಾಂಕದೊಳಗೆ ಎಚ್.ಎಸ್.ಆರ್.ಪಿ. ಯನ್ನು ಅಳವಡಿಸದಿದ್ದಲ್ಲಿ ಸರಕಾರಿ ಅಧಿಸೂಚನೆ ಸಂಖ್ಯೆ : ಟಿಡಿ 250 ಟಿಡಿಒ 2019, ಬೆಂಗಳೂರು ಪ್ರಕಾರ ಹಾಗೂ ಕಾಲ ಕಾಲಕ್ಕೆ ಹೊರಡಿಸಲಾಗುವ ಸರಕಾರದ ಆದೇಶಗಳನ್ವಯ ದಂಡ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಈ ಬಗ್ಗೆ ಪ್ರತಿಕ್ರಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ರಾಜ್ಯದ ಒಟ್ಟಾರೆ ಜನಸಂಖ್ಯೆಯ ಪೈಕಿ ಕೇವಲ ಶೇ.3 ರಷ್ಟು ಜನರು ಮಾತ್ರ ನಂಬರ್ ಪ್ಲೇಟ್ ಬದಲಾಯಿಸಿಕೊಂಡಿದ್ದಾರೆ. ಕೇಂದ್ರ ಸರಕಾರ ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ನಂಬರ್ ಪ್ಲೇಟ್ ಬದಲಿಸುವಂತೆ ನಾವೂ ಜನರ ಮೇಲೆ ಒತ್ತಡ ಹೇರಬೇಕಾಗಿದೆ. ರಾಜ್ಯವನ್ನು ಹೊರತುಪಡಿಸಿ ದೇಶದಾದ್ಯಂತ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ನೋಂದಣಿ ಪ್ಲೇಟ್ ತಯಾರಕರ ಸಂಘದ ಕಾರ್ಯಕಾರಿ ಸದಸ್ಯ ಮತ್ತು ವಕ್ತಾರ ಸುಧೀರ್ ಗೋಯಲ್ ಪ್ರತಿಕ್ರಯಿಸಿ, ರಾಜ್ಯದ 2 ಕೋಟಿಗೂ ಹೆಚ್ಚು ವಾಹನ ಮಾಲೀಕರ ಪೈಕಿ ಕೇವಲ 2.5 ಲಕ್ಷ ಜನರು ತಮ್ಮ ನಂಬರ್ ಪ್ಲೇಟ್ ಬದಲಾಯಿಸಿದ್ದಾರೆ, ರಾಜ್ಯ ಸರಕಾರ ಮತ್ತು ಸಾರಿಗೆಯ ಜಾಗೃತಿ ಕೊರತೆ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಒಡಿಶಾದ ಉದಾಹರಣೆ ನೀಡಿದ ಅವರು, ಅಲ್ಲಿ ಪರಿಣಾಮಕಾರಿ ಜಾಗೃತಿ ಅಭಿಯಾನದಿಂದಾಗಿ ಆರು ತಿಂಗಳಲ್ಲಿ 58 ಲಕ್ಷ ಜನರು ತಮ್ಮ ನಂಬರ್ ಪ್ಲೇಟ್‍ಗಳನ್ನು ಬದಲಾಯಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದಾರೆ. ಇದೀಗ ನಮ್ಮ ರಾಜ್ಯದ ಅಧಿಕಾರಿಗಳು ಕೂಡ ಜಾಗೃತಿ ಮೂಡಿಸುವ ವಿಶ್ವಾಸವಿದ್ದು, ನೋಂದಣಿ ಸಂಖ್ಯೆ ಶೀಘ್ರದಲ್ಲೇ ಹೆಚ್ಚಾಗುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹಳೆಯ ವಾಹನಗಳಿಗೆ ಎಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕೊನೆ ದಿನಾಂಕ 3 ತಿಂಗಳು ವಿಸ್ತರಿಸಿ ಸಾರಿಗೆ ಇಲಾಖೆ ಅಧಿಕೃತ ಆದೇಶ Rating: 5 Reviewed By: karavali Times
Scroll to Top