2024 ರ ಜುಲೈ ವೇಳೆಗೆ ಸೇತುವೆ ಜನರಿಗೆ ಅರ್ಪಿಸುವ ಭರವಸೆ ನೀಡಿದ ಅಧಿಕಾರಿಗಳು
ಬಂಟ್ವಾಳ, ಡಿಸೆಂಬರ್ 22, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಹಾಗೂ ಕಡೇಶಿವಾಲಯ ಗ್ರಾಮಗಳ ಮಧ್ಯೆ ಕಡೇಶ್ವಾಲ್ಯ ಹಾಗೂ ಅಜಿಲಮೊಗರು ಪುಣ್ಯ ಕ್ಷೇತ್ರಗಳನ್ನು ಸಂಪರ್ಕಿಸುವ ಸಂಪರ್ಕ ಕೊಂಡಿಯಾಗಿ ಸೌಹಾರ್ದ ಸೇತುವೆ ನಿರ್ಮಿಸುವ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿಗೆ ತರಲು 2014 ರಲ್ಲಿ ಕೆ ಆರ್ ಡಿ ಸಿ ಎಲ್ ಇಲಾಖೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸ್ವತಃ ಮುಖ್ಯಮಂತ್ರಗಳೇ ಶಿಲಾನ್ಯಾಸ ನೆರವೇರಿಸಿದ್ದರು. ಬಳಿಕ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಲ್ಲಿ ಸೇತುವೆ ಕಾಮಗಾರಿಯೂ ಆರಂಭಗೊಂಡಿತ್ತು.
ಆದರೆ ಆ ಬಳಿಕ ಬದಲಾದ ರಾಜಕೀಯ ಸ್ಥಿತ್ಯಂತರದ ಕಾರಣದಿಂದ ನಂತರ ಬಂದ ಆಡಳಿತದ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಕಳೆದ ಬೇಸಗೆಯ ಬಳಿಕ ಭರದಿಂದ ಸಾಗುತ್ತಿದ್ದ ಕಡೇಶಿವಾಲಯ ಹಾಗೂ ಅಜಿಲಮೊಗರು ಈ ಎರಡು ಪುಣ್ಯ ಕ್ಷೇತ್ರಗಳ ನಡುವೆ ಸಂಪರ್ಕಿಸುವ “ಸೌಹಾರ್ದ ಸೇತುವೆ” ಕಾಮಗಾರಿಯು ಸದ್ಯ ಸ್ಥಗಿತಗೊಂಡಿದ್ದು, ಇದು ಈ ಭಾಗದ ಸಾರ್ವಜನಿಕರ ತೀವ್ರ ನಿರಾಸೆಗೆ ಕಾರಣವಾಗಿತ್ತು. ಈ ಬಗ್ಗೆ ಜನ ಮಾಜಿ ಸಚಿವ ಬಿ ರಮಾನಾಥ ರೈ ಅವರಲ್ಲಿ ತಮ್ಮ ಮನಸ್ಸಿನ ಬೇಗುದಿಯನ್ನು ತೋರಿಸಿಕೊಂಡಿದ್ದರು.
ಇದೀಗ ಮತ್ತೆ ಸರಕಾರ ಬದಲಾಗಿದ್ದು, ಮತ್ತೊಮ್ಮೆ ಸಿದ್ದರಾಮ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ತಮ್ಮದೇ ಸರಕಾರ ಶಿಲಾನ್ಯಾಸ ನೆರವೇರಿಸಿದ ಸೌಹಾರ್ದ ಸೇತುವೆ ಎಂಬ ಮಹತ್ವದ ಯೋಜನೆಗೆ ಮತ್ತೆ ವೇಗ ನೀಡಲು ಮಾಜಿ ಸಚಿವ ಬಿ ರಮಾನಾಥ ರೈ ಅವರು ಉತ್ಸುಕತೆ ತೋರಿದ್ದಾರೆ.
ಈ ಬಗ್ಗೆ ಕಾಮಗಾರಿ ಪುನರ್ ಆರಂಭಿಸಲು ಮಾಜಿ ಸಚಿವ ಬಿ ರಮಾನಾಥ ರೈ ಅವರು ಗುರುವಾರ ಕೆ ಆರ್ ಡಿ ಸಿ ಎಲ್ ಇಲಾಖಾ ಮುಖ್ಯ ಅಧಿಕಾರಿಗಳ ತಂಡದ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಶೀಘ್ರದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ರೈ ಸೂಚನೆಗೆ ಪ್ರತಿಕ್ರಯಿಸಿದ ಅಧಿಕಾರಿಗಳು ಮುಂದಿನ ವರ್ಷದ ಅಂದರೆ 2024ರ ಜುಲೈ ತಿಂಗಳಿನಲ್ಲಿ ಸೌಹಾರ್ದ ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅರ್ಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸ್ಥಳೀಯ ಪಂಚಾಯತ್ ಅಧ್ಯಕ್ಷೆ ವಿಮಲಾ, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಸಂಪತ್ ಕುಮಾರ್ ಶೆಟ್ಟಿ, ಶಿವಪ್ಪ ಪೂಜಾರಿ, ಕಾಂಚಲಾಕ್ಷಿ, ಖಾದರ್ ಇಖ್ರಾ, ಅಬ್ದುಲ್ ಹಮೀದ್ ಯಾನೆ ಚೆರಿಯಮೋನು, ಸುರೇಶ್ ಪೂಜಾರಿ, ದಾವೂದ್, ಈಶ್ವರ ಪೂಜಾರಿ, ಹರಿಶ್ಚಂದ್ರ ಕಾಡಬೆಟ್ಟು, ಸಂಜೀವ ಕಡೇಶಿವಾಲಯ, ಸಂಜೀವ ಪೂಜಾರಿ ದಾಸಕೋಡಿ, ಫಾರೂಕ್, ಗೀತಾ, ಸಂಜೀವ ಪೂಜಾರಿ ಕಟ್ಟಡದೆ, ದಿನೇಶ್ ಭಟ್, ಪೂವಪ್ಪ ಪೂಜಾರಿ ಆಗಚರಕೋಡಿ, ವಿಜಯ ಕುಮಾರ್ ಎಸ್, ಶೀನಾ ನಾಯ್ಕ, ನಳಿನಾಕ್ಷಿ, ರತ್ನಕಾರ ನಾಯ್ಕ, ಪುರುಷೋತ್ತಮ ಶೆಟ್ಟಿ, ಸಲೀಂ ಕಜೆ, ಪೂವಪ್ಪ ಮುಂಡು ಮೊದಲಾದವರು ಜೊತೆಗಿದ್ದರು.
0 comments:
Post a Comment