ಬಂಟ್ವಾಳ, ಜನವರಿ 11, 2024 (ಕರಾವಳಿ ಟೈಮ್ಸ್) : ಮನೆಯೊಂದಕ್ಕೆ ಮುಂಜಾನೆ ವೇಳೆ ಪ್ರವೇಶಿಸಿದ ನಾಲ್ಕು ಮಂದಿ ಅಪರಿಚಿತ ವ್ಯಕ್ತಿಗಳು ಚಾಕು ತೋರಿಸಿ ನಗ-ನಗದು ದರೋಡೆಗೈದರು ಪರಾರಿಯಾದ ಘಟನೆ ತಾಲೂಕಿನ ಕಾವಳಪಡೂರು ಗ್ರಾಮದ ಬಿ ಸಿ ರೋಡು-ಬೆಳ್ತಂಗಡಿ ರಾಜ್ಯ ಹೆದ್ದಾರಿ ರಸ್ತೆಯ ಸಾಲುಮರ ತಿಮ್ಮಕ್ಕ ಉದ್ಯಾನವನ ಸಮೀಪದ ಮೇನಾಡು ಎಂಬಲ್ಲಿ ಗುರುವಾರ ಮುಂಜಾನೆ ವೇಳೆ ನಡೆದಿದೆ.
ಇಲ್ಲಿನ ನಿವಾಸಿ ಮೆರಿಟಾ ಸಿಂಥಿಯಾ ಪಿಂಟೋ ಅವರ ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ಸಿಂಥಿಯಾ ಪಿಂಟೋ ಅವರು ತನ್ನ ಪ್ರಾಯಸ್ಥ ತಾಯಿಯ ಜೊತೆ ಮನೆಯಲ್ಲಿ ಇಬ್ಬರೇ ವಾಸ್ತವ್ಯ ಹೊಂದಿದ್ದು, ಗುರುವಾರ ಮುಂಜಾನೆ 4 ಮಂದಿ ಅಪರಿಚಿತ ವ್ಯಕ್ತಿಗಳು ಮನೆಯ ಕಾಲಿಂಗ್ ಬೆಲ್ ಒತ್ತಿದ್ದು, ಈ ವೇಳೆ ಸಿಂಥಿಯಾ ಅವರು ಬಾಗಿಲು ತೆರೆದಾಗ ಒಳಪ್ರವೇಶಿಸಿದ ನಾಲ್ಕೂ ಮಂದಿ ಸೇರಿ ಇಬ್ಬರು ಮಹಿಳೆಯರಿಗೂ ಚಾಕು ತೋರಿಸಿ ಬೆದರಿಸಿ ಮನೆಯಲ್ಲಿ ಜಾಲಾಡಿದ್ದಾರೆ. ಕಪಾಟಿನಲ್ಲಿದ್ದ 3.20 ಲಕ್ಷ ರೂಪಾಯಿ ಮೌಲ್ಯದ 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳು, 11 ಸಾವಿರ ರೂಪಾಯಿ ಮೌಲ್ಯದ 2 ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿರುವುದಲ್ಲದೆ ಮಹಳೆಯರಿಗೆ ಬೆದರಿಕೆ ಒಡ್ಡಿ 3೦ ಸಾವಿರ ರೂಪಾಯಿ ನಗದು ಹಣವನ್ನು ಪಡೆದು ಪರಾರಿಯಾಗಿರುತ್ತಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಹಾಗೂ ಎಡಿಶನಲ್ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮನೆ ಮಾಲಕಿ ಮೆರಿಟಾ ಸಿಂಥಿಯಾ ಪಿಂಟೋ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬಿ ಸಿ ರೋಡು ಹೃದಯ ಪಟ್ಟಣ ಕೇಂದ್ರೀಕರಿಸಿಕೊಂಡು ಕಳೆದ ಕೆಲವು ದಿನಗಳಿಂದ ನಿರಂತರ ಮನೆ, ಅಂಗಡಿ, ಹೋಟೆಲ್, ವಾಹನ ಮೊದಲಾದ ಕಳ್ಳತನಗಳು, ಪಿಕ್ ಪಾಕೆಟ್ ಪ್ರಕರಣಗಳು, ಚೈನ್ ಕಳವು ಪ್ರಕರಣಗಳು ನಡೆಯುತ್ತಿದ್ದು, ಪೊಲೀಸ್ ತನಿಖೆಗಳು ಮುಂದುವರಿದಿರುವಂತೆ ಇದೀಗ ಮತ್ತೆ ಕಳ್ಳರ, ದರೋಡೆಕೋರರ ಕೈಚಳಕ ಮುಂದುವರಿದಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗೆ ಚೈನ್ ಕಳವು ಹಾಗೂ ಕೈಕಂಬ ಜಂಕ್ಷನ್ನಿನ ಅಂಗಡಿ ಕಳವು ಪ್ರಕರಣಗಳನ್ನು ಪೊಲೀಸರು ಜಾಣ್ಮೆಯಿಂದ ಬೇಧಿಸಿದ್ದು, ಇದೀಗ ಮತ್ತೆ ಕಳ್ಳತನ ಪ್ರಕರಣ ನಡೆದಿರುವುದು ತಾಲೂಕಿನ ಜನರ ಆತಂಕಕ್ಕೆ ಕಾರಣವಾಗಿದೆ. ಕಳ್ಳರಿಗೆ ಪೊಲೀಸರ ಭಯವೇ ಇಲ್ಲದಂತೆ ಕೃತ್ಯಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಗುರುವಾರ ನಡೆದ ದರೋಡೆ ಪ್ರಕರಣ ವರದಿಯಾದ ತಕ್ಷಣ ಸ್ಥಳಕ್ಕೆ ಸ್ವತಃ ಜಿಲ್ಲಾ ಎಸ್ಪಿಯವರೇ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಕರಣ ಬೇಧಿಸುವ ಭರವಸೆ ನೀಡಿದ್ದು, ಆತಂಕಿತ ಜನರಿಗೆ ಧೈರ್ಯ ನೀಡಿದ್ದಾರೆ.
0 comments:
Post a Comment