ಪುತ್ತೂರು, ಜನವರಿ 23, 2024 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ತಿಗೆ ಗ್ರಾಮದ ಸಿದ್ದಮೂಲೆ ಷಣ್ಮುಖದೇವ ಪ್ರೌಢಶಾಲೆಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳು ಹಾಗೂ ನಗದು ಹಣವನ್ನು ಕದ್ದೊಯ್ದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಶಾಲಾ ಪ್ರಭಾರ ಮುಖ್ಯ ಶಿಕ್ಷರಾದ ಕೃಷ್ಣವೇಣಿ ಎಸ್ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಶನಿವಾರ ಸಂಜೆ ಶಾಲೆಗೆ ಬೀಗ ಹಾಕಿ ತೆರಳಿದ್ದು, ಭಾನುವಾರ ಹಾಗೂ ಸೋಮವಾರ ಶಾಲೆಗೆ ರಜೆ ಇತ್ತು. ಮಂಗಳವಾರ ಬೆಳಿಗ್ಗೆ ಶಿಕ್ಷಕರಾದ ಅನಿರುದ್ದ ಹಾಗೂ ವೀಣಾ ಕುಮಾರಿ ಶಾಲೆಗೆ ಬಂದಾಗ ಶಾಲಾ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದಿರುವುದು ಕಂಡು ಬಂದಿದೆ. ಈ ಬಗ್ಗೆ ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಿದಂತೆ ಅವರು ಬಂದು ಪರಿಶೀಲಿಸಿದ್ದಾಗ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಒಳಪ್ರವೇಶಿಸಿದ ಅಪರಿಚಿತ ಕಳ್ಳರು ಅಲ್ಲಿದ್ದ 46 ಸಾವಿರ ರೂಪಾಯಿ ಮೌಲ್ಯದ ಕಂಪ್ಯೂಟರ್ ಹಾಗೂ ಮಾನಿಟರ್, 2 ಕಪಾಟುಗಳಲ್ಲಿದ್ದ 14,500/- ರೂಪಾಯಿ ನಗದು ಹಣ, 1500/- ರೂಪಾಯಿ ಮೌಲ್ಯದ ಚಾರ್ಜರ್ ಲೈಟ್, 6 ಸಾವಿರ ರೂಪಾಯಿ ಮೌಲ್ಯದ 2 ಕಾರ್ಡ್ ಲೆಸ್ ಮೈಕ್, 5 ಸಾವಿರ ರೂಪಾಯಿ ಮೌಲ್ಯದ ಸ್ಪೀಕರ್ ಕಳವುಗೈಯ್ಯಲಾಗಿದೆ. ಕಳವಾಗಿರುವ ಒಟ್ಟು ಸೊತ್ತುಗಳ ಮೌಲ್ಯ 73 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಶಾಲಾ ವಿದ್ಯುತ್ ಏರಿಳಿತ ಕಾರಣಕ್ಕಾಗಿ ಶಾಲೆಗೆ ಬೀಗ ಹಾಕಿ ತೆರಳುವಾಗ ಶಿಕ್ಷಕರು ಸೀಸಿ ಕ್ಯಾಮೆರಾ ಆಫ್ ಮಾಡಿ ತೆರಳಿದ್ದರಿಂದ ಕಳ್ಳರ ಸೀಸಿ ಕ್ಯಾಮೆರಾ ಫೂಟೇಜ್ ಲಭ್ಯವಾಗಿಲ್ಲ. ಈ ಬಗ್ಗೆ ಮುಖ್ಯ ಶಿಕ್ಷಕರ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment