ನಮ್ಮ ಎಲ್ಲ ಕಾರ್ಯಕ್ರಮಗಳೂ ಸಾಮಾಜಿಕ ಸಾಮರಸ್ಯವನ್ನು ಸಾರುವ ಉದ್ದೇಶದಿಂದಲೇ ನಡೆಯುತ್ತದೆ : ರಮಾನಾಥ ರೈ - Karavali Times ನಮ್ಮ ಎಲ್ಲ ಕಾರ್ಯಕ್ರಮಗಳೂ ಸಾಮಾಜಿಕ ಸಾಮರಸ್ಯವನ್ನು ಸಾರುವ ಉದ್ದೇಶದಿಂದಲೇ ನಡೆಯುತ್ತದೆ : ರಮಾನಾಥ ರೈ - Karavali Times

728x90

27 February 2024

ನಮ್ಮ ಎಲ್ಲ ಕಾರ್ಯಕ್ರಮಗಳೂ ಸಾಮಾಜಿಕ ಸಾಮರಸ್ಯವನ್ನು ಸಾರುವ ಉದ್ದೇಶದಿಂದಲೇ ನಡೆಯುತ್ತದೆ : ರಮಾನಾಥ ರೈ

ಬಂಟ್ವಾಳ ಕಂಬಳ ಸರ್ವ ಜನಾಂಗದ ಜನರ ಉತ್ಸವವಾಗಿ ನಡೆಯುತ್ತಿದೆ : ಮಾರ್ಚ್ 2 ರಂದು ಕೂಡಿಬೈಲಿನಲ್ಲಿ 13ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳ” 



ಬಂಟ್ವಾಳ, ಫೆಬ್ರವರಿ 27, 2024 (ಕರಾವಳಿ ಟೈಮ್ಸ್) : ನಮ್ಮ ನೇತೃತ್ವದಲ್ಲಿ ನಡೆಯುವ ಎಲ್ಲಾ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡಾ ಸಾಮಾಜಿಕ ಸಾಮರಸ್ಯ ಸಾರುವ ನಿಟ್ಟಿನಲ್ಲಿ ಸಮಾಜದ ಎಲ್ಲ ವರ್ಗಗಳ ಜನರ ಒಗ್ಗೂಡುವಿಕೆಯಿಂದಲೇ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು. 

ಮಾರ್ಚ್ 2 ರಂದು ನಾವೂರು ಗ್ರಾಮದ ಕೂಡಿಬೈಲಿನಲ್ಲಿ ನಡೆಯುವ 13ನೇ ವರ್ಷದ ಹೊನಲು ಬೆಳಕಿನ ಮೂಡೂರು-ಪಡೂರು “ಬಂಟ್ವಾಳ ಕಂಬಳ” ಪ್ರಯುಕ್ತ ಮಂಗಳವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗಣೇಶೋತ್ಸವ, ನಾಗಮಂಡಲ, ದೀಪಾವಳಿ, ಕ್ರಿಸ್ಮಸ್, ಈದ್ ಮಿಲಾದ್ ಮೊದಲಾದ ಕಾರ್ಯಕ್ರಮಗಳನ್ನು ಸಮಾಜದ ಸರ್ವ ಜನಾಂಗದ ಜನರನ್ನು ಒಗ್ಗೂಡಿಸಿಕೊಂಡೇ ಪ್ರತಿ ವರ್ಷವೂ ನಡೆಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳನ್ನೂ ಕೂಡಾ ನಿರ್ದಿಷ್ಟ ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಸಾರ್ವಜನಿಕ ನೆಲೆಯಲ್ಲಿ ಹಮ್ಮಿಕೊಂಡು ಬರಲಾಗುತ್ತಿದೆ. ಇದು ಸೌಹಾರ್ದ ಸಮಾಜ ನಿರ್ಮಾಣಕ್ಕೆ ಹಾಗೂ ಸಮಾಜದ ಜನರ ಐಕ್ಯಮತಕ್ಕೆ ಬಹಳಷ್ಟು ಸಹಕಾರಿಯಾಗಿದೆ ಎಂದರು. 

ಬಂಟ್ವಾಳ ಕಂಬಳ ಇತರ ಕಂಬಳಗಳಿಗೆ ಹೋಲಿಸಿದರೆ ಇದೊಂದು ಅತ್ಯಂತ ಭಿನ್ನವಾದ ಹಾಗೂ ವಿಶೇಷವಾದ ಕಂಬಳವಾಗಿ ಗುರುತಿಸಿಕೊಂಡಿದೆ. ಹೊಸತನದ ಹಾಗೂ ವಿಶಿಷ್ಟ ರೀತಿಯ ಕಂಬಳವಾಗಿ ಗುರುತಿಸಿಕೊಂಡಿರುವ ಬಂಟ್ವಾಳ ಕಂಬಳವು ಕೋಣಗಳ ಯಜಮಾನರಿಗೂ ಕೂಡಾ ವಿಶೇಷ ಆಸಕ್ತಿ ಇರುವ ಕಂಬಳವಾಗಿ ಗುರುತಿಸಿಕೊಂಡಿದ್ದು,  ಬಾರಿಯ ಕಂಬಳಕ್ಕೆ ಸಂಬಂಧಿಸಿದಂತೆ ಕರೆಗಳ ಕಾರ್ಯ, ರಸ್ತೆ ಅಗಲೀಕರಣ ಕಾಮಗಾರಿ ಸಹಿತ ಸುಸಜ್ಜಿತ ವ್ಯವಸ್ಥೆಗಾಗಿ ಬೇಕಾಗಿರುವ ಎಲ್ಲ ಕೆಲಸ-ಕಾರ್ಯಗಳೂ ಭರದಿಂದ ಸಾಗಿ ಬರುತ್ತಿದೆ. ಈ ಬಾರಿ ಗಣ್ಯಾತಿಗಣ್ಯರು ಇಡೀ ದಿನ ಕುಳಿತು ಕಂಬಳ ವೀಕ್ಷಿಸಲು ಅನುವಾಗುವಂತೆ “ವಿಐಪಿ” ವೇದಿಕೆ ಎಂಬ ವಿಶಿಷ್ಟ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಈ ಬಾರಿ ಹಿರಿಯ ವಿಭಾಗದ ಕೋಣಗಳ ಪ್ರಥಮ ಬಹುಮಾನವನ್ನು 2 ಪವನ್ ಆಗಿ ಏರಿಸಲಾಗಿದ್ದು, ಕೋಣಗಳ ವಿಶ್ರಾಂತಿ ಕೊಠಡಿಗಳಿಗೂ ಫ್ಯಾನ್ ವ್ಯವಸ್ಥೆ ಅವಳವಡಿಸಿ ಕಂಬಳ ಕೋಣಗಳ ಹಿತದೃಷ್ಟಿಯನ್ನು ಪೂರ್ಣಪ್ರಮಾಣದಲ್ಲಿ ಕಾಪಾಡಲಾಗುವುದು ಎಂದರು. 

ಸೋಲೂರು ಕರ್ನಾಟಕ ಆರ್ಯ-ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಆಳದಂಗಡಿ ಅರಮನೆ ಅರಸ ತಿಮ್ಮಣ್ಣರಸ ಡಾ ಪದ್ಮಪ್ರಸಾದ್ ಅಜಿಲ, ಅಲ್ಲಿಪಾದೆ ಸಂತ ಅಂಥೋನಿ ಧರ್ಮ ಕೇಂದ್ರದ ವಂದನೀಯ ಫೆಡ್ರಿಕ್ ಮೊಂತೆರೋ ಅವರು ಕಂಬಳ ಕೂಟವನ್ನು ಜಂಟಿಯಾಗಿ ಉದ್ಘಾಟಿಸುವರು. 

ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಫರ್ಲಾ ವೆಲಂಕಣಿ ಧರ್ಮ ಕೇಂದ್ರದ ಜೋನ್ ಪ್ರಕಾಶ್ ಡಿ’ಸೋಜ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ನಮ್ಮ ಕುಡ್ಲ ವಾಹಿನಿಯ ಮುಖ್ಯಸ್ಥ ಲೀಲಾಕ್ಷ ಕರ್ಕೇರಾ, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಉದ್ಯಮಿ ರಘುನಾಥ ಸೋಮಯಾಜಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಧಕರಾದ ಉಮೇಶ್ ಶೆಟ್ಟಿ ಮಾಣಿ ಸಾಗು, ಲಿಯೋ ಫೆರ್ನಾಂಡಿಸ್ ಸರಪಾಡಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು. 

ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ, ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಇಂಧನ ಸಚಿವ ಕೆ ಜೆ ಜಾರ್ಜ್, ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ಸಹಕಾರ ಸಚಿವ ಕೆ ಎನ್ ರಾಜಣ್ಣ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ಎಸ್ ವೈದ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಸಹಿತ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ರಮಾನಾಥ ರೈ ವಿವರಿಸಿದರು. 

ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಸಂಚಾಲಕ ಬಿ ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ಉಪಾಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಎಂ ಎಸ್ ಮುಹಮ್ಮದ್, ಪ್ರಮುಖರಾದ ಉಮೇಶ್ ಕುಲಾಲ್, ಶಬೀರ್ ಸಿದ್ದಕಟ್ಟೆ, ರಾಜೇಶ್ ರೋಡ್ರಿಗಸ್, ಸುಭಾಶ್ಚಂದ್ರ ಶೆಟ್ಟಿ, ಸಂದೇಶ ಶೆಟ್ಟಿ, ಪ್ರವೀಣ್ ರೋಡ್ರಿಗಸ್, ಪ್ರಕಾಶ್ ಆಳ್ವ, ಲೆಸ್ಟರ್ ರೋಡ್ರಿಗಸ್, ಜನಾರ್ದನ ಚೆಂಡ್ತಿಮಾರ್, ಮಂಜುಳಾ ಕುಶಲ, ವೆಂಕಪ್ಪ ಪೂಜಾರಿ ಮೊದಲಾದವರು ಈ ಸಂದರ್ಭ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ನಮ್ಮ ಎಲ್ಲ ಕಾರ್ಯಕ್ರಮಗಳೂ ಸಾಮಾಜಿಕ ಸಾಮರಸ್ಯವನ್ನು ಸಾರುವ ಉದ್ದೇಶದಿಂದಲೇ ನಡೆಯುತ್ತದೆ : ರಮಾನಾಥ ರೈ Rating: 5 Reviewed By: karavali Times
Scroll to Top