ಬಂಟ್ವಾಳ, ಫೆಬ್ರವರಿ 06, 2024 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸಿನ ಟೈರ್ ಸ್ಫೋಟಗೊಂಡು ರಸ್ತೆ ಬದಿ ನಿಂತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಬಳಿಕ ಚಂಡಿಗೆ ವಾಲಿಕೊಂಡು ನಿಂತ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಸಮೀಪದ ಎನ್ ಸಿ ರೋಡು ಎಂಬಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ನಡೆದಿದೆ.
ಘಟನೆಯಿಂದ ಬಸ್ಸಿನಲ್ಲಿದ್ದ ನಾಲ್ಕು ಮಂದಿ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದು, ಅಟೋ ರಿಕ್ಷಾ ಪ್ರಯಾಣಿಕರು ಸಮೀಪದ ಅಂಗಡಿಗೆ ತೆರಳಿದ್ದರಿಂದ ಸಂಭಾವ್ಯ ಅಪಾಯದಿಂದ ಪಾರಾಗಿದ್ದಲ್ಲದೆ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿಹೋಗಿದೆ.
ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮದನ್ ಎಂಬವರು ಚಲಾಯಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಕಾವಳಕಟ್ಟೆ ಸಮೀಪದ ಎನ್ ಸಿ ರೋಡ್ ತಲುಪುತ್ತಿದ್ದಂತೆ ಬಸ್ಸಿನ ಟೈರ್ ಏಕಾಏಕಿ ಸ್ಫೋಟಗೊಂಡಿದ್ದು, ಬಸ್ಸು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿ ನಿಂತಿದ್ದ ಕಾವಳಮೂಡೂರು ಗ್ರಾಮದ ನಿವಾಸಿ ಅಬ್ದುಲ್ ಗಫೂರ್ (42) ಎಂಬವರ ಅಟೋ ರಿಕ್ಷಾಕ್ಕೆ ಹೊಡೆದ ಬಳಿಕ ಚರಂಡಿಗೆ ವಾಲಿಕೊಂಡು ಬಸ್ಸು ನಿಂತಿದೆ. ಘಟನೆಯಿಂದ ಒಂದು ಕ್ಷಣ ಸ್ಥಳೀಯರಲ್ಲಿ ಏನಾಗುತ್ತಿದೆ ಎಂಬ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಿಂದ ಅಟೋ ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾ ಹಾಗೂ ಬಸ್ಸು ಜಖಂಗೊಂಡಿದೆ. ಬಳಿಕ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಗಾಯಗೊಂಡ ಬಸ್ ಪ್ರಯಾಣಿಕರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ಈ ಬಗ್ಗೆ ಅಟೋ ರಿಕ್ಷಾ ಚಾಲಕ ಗಫೂರ್ ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment