ಬಂಟ್ವಾಳ, ಮಾರ್ಚ್ 31, 2024 (ಕರಾವಳಿ ಟೈಮ್ಸ್) : ಸಾಮಾಜಿಕ ಹೋರಾಟಗಾರ ಹಾಗೂ ಆರ್ ಟಿ ಐ ಕಾರ್ಯಕರ್ತ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷನಾಗಿ ಸಕ್ರಿಯವಾಗಿದ್ದ ಅವಿವಾಹಿತ ಯುವಕನೋರ್ವನ ಮೃತದೇಹ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಂಕಾಸ್ಪದವಾಗಿ ಪತ್ತೆಯಾದ ಘಟನೆ ವಾಮಪದವು ಸಮೀಪದ ಚೆನ್ನೈತ್ತೋಡಿ ಗ್ರಾಮದ ತಿಮರಡ್ಡ ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಸ್ಥಳೀಯ ಟಿiವಾಸಿ ದಿವಂಗತ ಕೃಷ್ಣ ಸಾಮಂತ್ ಅವರ ಪುತ್ರ, ಕ್ಯಾಟರಿಂಗ್ ಉದ್ಯಮಿ ಪದ್ಮನಾಭ ಸಾಮಂತ್ (34) ಎಂದು ಗುರುತಿಸಲಾಗಿದೆ. ಕಳೆದ ಗುರುವಾರ ಸಂಜೆ ಬಂಟ್ವಾಳ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಪದ್ಮನಾಭ ಸಾಮಂತ್ ಅವರು ಬಳಿಕ ಸಂಜೆ 6.30ರ ವೇಳೆಗೆ ವಾಮಪದವು-ಬಸ್ತಿಕೋಡಿ ಜಂಕ್ಷನ್ನಿನಲ್ಲಿ ಸಾರ್ವಜನಿಕರಿಗೆ ಕಂಡು ಬಂದಿದ್ದ ಎನ್ನುವ ಸ್ಥಳೀಯರು ಆ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಆತನ ಸಹೋದರರು ಮನೆ ಸಮೀಪದ ತೋಟದ ಅಡಿಕೆ ಗಿಡಕ್ಕೆ ನೀರು ಹಾಯಿಸಲು ತೆರಳಿದ ವೇಳೆ ವಾಸನೆ ಬಂದ ಹಿನ್ನಲೆಯಲ್ಲಿ ಮೇಲಿನ ಗುಡ್ಡಕ್ಕೆ ತೆರಳಿದ್ದು ಅಲ್ಲಿನ ಮರವೊಂದರ ಕೊಂಬೆಗೆ ಚೂಡಿದಾರ್ ಶಾಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ.
ತಕ್ಷಣ ಅವರು ಪೂಂಜಾಲಕಟ್ಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ತಲೆ ಹಾಗೂ ಹಣೆಯ ಭಾಗಗಳು ಜಜ್ಜಿದ ಸ್ಥಿತಿಯಲ್ಲಿದ್ದು, ಕೈಗಳು ಬೆಂಡ್ ಆದ ಸ್ಥಿತಿಯಲ್ಲಿತ್ತು. ಬಟ್ಟೆಯಲ್ಲಿ ಮಣ್ಣು ಮೆತ್ತಿಕೊಂಡ ಸ್ಥಿತಿಯಲ್ಲಿದ್ದು, ಇದೊಂದು ವ್ಯವಸ್ಥಿತವಾದ ಕೊಲೆಯೋ ಎಂಬ ಅನುಮಾನ ಕಾಡುತ್ತಿದೆ ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಪದ್ಮನಾಭ ಸಾಮಂತ್ ಬಂಟ್ವಾಳ ಅಕ್ರಮ ಸಕ್ರಮ ಸಮಿತಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಆಗಿರುವ ಅಕ್ರಮಗಳ, ಭ್ರಷ್ಟಾಚಾರಗಳ ಬಗ್ಗೆ ಇಲಾಖೆಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಲ್ಲದೆ, ಆರ್ ಟಿ ಐ ಮೂಲಕ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೂ ದೂರು ನೀಡಿದ್ದರು. ಇದೂ ಅಲ್ಲದೆ ರಸ್ತೆ ಡಾಮರೀಕರಣ, ಸೇತುವೆ-ಡ್ಯಾಂ ಕಾಮಗಾರಿಗಳಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆಯೂ ಹೋರಾಟ ನಡೆಸಿದ್ದ ಎನ್ನಲಾಗಿದೆ. ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿದ್ದ ಈತನಿಗೆ ಹಲವು ವ್ಯಕ್ತಿಗಳಿಂದ ಜೀವಬೆದರಿಕೆಗಳೂ ಈ ಹಿಂದೆ ಬಂದಿದ್ದವು. ಈ ಮಧ್ಯೆ ಕಳೆದ ಎರಡು-ಮೂರು ದಿನಗಳ ಹಿಂದೆ ಯುವಕನೋರ್ವನಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿ 2 ಲಕ್ಷಕ್ಕೆ ಡೀಲ್ ಕುದುರಿಸಿ ಬಳಿಕ ಯುವಕನಿಂದ 1.50 ಲಕ್ಷ ಪಡೆದು ಬಳಿಕ ವಂಚಿಸಿದ್ದ ಎಂಬ ಆರೋಪ ಹೊರಿಸಿ ಪದ್ಮನಾಭ ಸಾಮಂತ್ ವಿರುದ್ದ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಕರೆ ಮಾಡಿದಾಗ ಬರುತ್ತೇನೆ ಎಂದು ಹೇಳಿದವ ಬಂದಿರಲಿಲ್ಲ. ಬಳಿಕ ಗುರುವಾರ ಸಂಜೆಯಿಂದ ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ. ಈ ಎಲ್ಲ ಹಿನ್ನಲೆಗಳಿಂದ ಈತನ ಸಾವಿನ ಬಗ್ಗೆ ಸಾರ್ವಜನಿಕವಾಗಿ ಹಲವು ಸಂಶಯಗಳು ವ್ಯಕ್ತವಾಗುತ್ತಿದೆ. ಎಲ್ಲದ್ದಕ್ಕೂ ಮರಣೋತ್ತರ ಪರೀಕ್ಷಾ ವರದಿ ಹಾಗೂ ಪೊಲೀಸ್ ತ£ಖೆ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ.
ಫೋರೆನ್ಸಿಕ್ ತಜ್ಞರನ್ನು ಸ್ಥಳಕ್ಕೆ ಕರೆಸಿ ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಿಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಪ್ರತ್ರಿಕ್ರಯಿಸಿದ ಮೃತ ಪದ್ಮನಾಭ ಸಾವಂತರ ಸಹೋದರರು ಹೋರಾಟದ ಮನೋಭಾವ ಮೈಗೂಡಿಸಿಕೊಂಡಿದ್ದ ಪದ್ಮನಾಭ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕೀಳುಮಟ್ಟದ ಮನಸ್ಥಿತಿಯವನಲ್ಲ. ಆತನ ಮರಣ ಶಂಕಾಸ್ಪದವಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯಾಂಶ ಬಯಲೆಗೆಳೆಯಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಪದ್ಮನಾಭ ಮೃತದೇಹದ ದೇಹಸ್ಥಿತಿ ಕಾಣುವಾಗ ಅದು ಸಹಜ ಆತ್ಮಹತ್ಯೆ ಪ್ರಕರಣವಾಗಿ ಕಂಡು ಬರುವುದಿಲ್ಲ. ಮೃತದೇಹದ ಮೇಲೆ ಗಾಯಗಳಿದ್ದು, ರಕ್ತ ಹೆಪ್ಪುಗಟ್ಟಿದಂತಹ ಕೆಲವೊಂದು ಸಂಶಯಾಸ್ಪದ ಕುರುಹುಗಳಿದ್ದು, ಈ ಕಾರಣಕ್ಕಾಗಿ ಈ ಸಾವಿನ ಹಿಂದಿನ ಸಂಶಯ ಕಂಡು ಬರುತ್ತಿದೆ. ಅಲ್ಲದೆ ಪದ್ಮನಾಭನ ಹೋರಾಟದ ಕಾರಣಕ್ಕಾಗಿ ಈ ಹಿಂದೆ ಹಲವು ಬೆದರಿಕೆಗಳೂ ಇದ್ದುದರಿಂದ ಎಲ್ಲಾ ರೀತಿಯಲ್ಲಿ ತನಿಖೆ ಕೈಗೊಂಡು ಸಾವಿನ ನಿಜಾಂಶ ಬಯಲು ಮಾಡಬೇಕು ಎಂದು ಆಗ್ರಹಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪ್ರತಿಕ್ರಯಿಸಿ, ಪದ್ಮನಾಭ ಸಾಮಂತ ಓರ್ವ ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕರ್ತನಾಗಿದ್ದು, ಸಾಮಾಜಿಕ ಹಾಗೂ ಆರ್ ಟಿ ಐ ಕಾರ್ಯಕರ್ತನಾಗಿಯೂ ಕೆಲಸ ಮಾಡಿ ಭ್ರಷ್ಟಾಚಾರದ ವಿರುದ್ದ ನಿರಂತರ ಹೋರಾಟ ಮಾಡುತ್ತಿದ್ದ. ಕಾಂಗ್ರೆಸ್ ಪಕ್ಷ ಓರ್ವ ನೈಜ ಹಾಗೂ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದೆ. ಆತನ ಸಾವಿನಲ್ಲಿ ಸಾಕಷ್ಟು ಸಂಶಯಗಳಿದ್ದು, ಪೂರ್ವಯೋಜಿತ ಕೊಲೆಯ ವಾಸನೆ ಬರುತ್ತಿದೆ. ಆತನ ಹೋರಾಟದ ಹಿನ್ನಲೆಯಿಂದ ಬರುತ್ತಿದ್ದ ಬೆದರಿಕೆ ಕರೆಗಳ ಜಾಡನ್ನು ಬೇಧಿಸಿದರೆ ಸಾವಿನ ನೈಜ ಕಾರಣವೂ ಬಯಲಾಗಬಹುದು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸು ಕೂಡಾ ಆತನದ್ದಲ್ಲ. ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡರೂ ಅದಕ್ಕಿರುವ ಪ್ರೇರಣಾ ಶಕ್ತಿ ಯಾವುದು ಎಂಬುದೂ ಬಯಲಾಗಬೇಕಿದೆ. ಈ ನಿಟ್ಟಿನಲ್ಲಿ ಪದ್ಮನಾಭನ ಸಾವಿನ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಹಾಗೂ ಕೂಲಂಕುಷ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
































0 comments:
Post a Comment