ಚುನಾವಣೆಯಲ್ಲಿ ಸೋಲುವುದು ಖಚಿತಗೊಂಡು ಎಂದಿನಂತೆ ಅಪಪ್ರಚಾರ, ಆಣೆ-ಪ್ರಮಾಣಗಳಿಗೆ ಮಾರು ಹೋದ ಬಿಜೆಪಿಗರು, ಮತದಾರರು ಜಾಗರೂಕರಾಗಿರಿ : ಕೈ ಅಭ್ಯರ್ಥಿ ಪದ್ಮರಾಜ್ ಕರೆ - Karavali Times ಚುನಾವಣೆಯಲ್ಲಿ ಸೋಲುವುದು ಖಚಿತಗೊಂಡು ಎಂದಿನಂತೆ ಅಪಪ್ರಚಾರ, ಆಣೆ-ಪ್ರಮಾಣಗಳಿಗೆ ಮಾರು ಹೋದ ಬಿಜೆಪಿಗರು, ಮತದಾರರು ಜಾಗರೂಕರಾಗಿರಿ : ಕೈ ಅಭ್ಯರ್ಥಿ ಪದ್ಮರಾಜ್ ಕರೆ - Karavali Times

728x90

22 April 2024

ಚುನಾವಣೆಯಲ್ಲಿ ಸೋಲುವುದು ಖಚಿತಗೊಂಡು ಎಂದಿನಂತೆ ಅಪಪ್ರಚಾರ, ಆಣೆ-ಪ್ರಮಾಣಗಳಿಗೆ ಮಾರು ಹೋದ ಬಿಜೆಪಿಗರು, ಮತದಾರರು ಜಾಗರೂಕರಾಗಿರಿ : ಕೈ ಅಭ್ಯರ್ಥಿ ಪದ್ಮರಾಜ್ ಕರೆ

ಬಂಟ್ವಾಳ, ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ಚುನಾವಣೆಯನ್ನು ಅಭಿವೃದ್ದಿ ವಿಚಾರದಲ್ಲಿ ಎದುರಿಸಿ ಗೊತ್ತೇ ಇಲ್ಲದ ಬಿಜೆಪಿಗರು ಈ ಬಾರಿ ಸೋಲು ಖಚಿತ ಎಂದು ಮನವರಿಕೆಯಾದ ಬಳಿಕ ಇದೀಗ ಎಂದಿನಂತೆ ತಮ್ಮ ನೀಚ ಕೃತ್ಯಗಳಾದ ಅಪಪ್ರಚಾರ, ಆಣೆ-ಪ್ರಮಾಣಗಳಿಗೆ ಮಾರು ಹೋಗಿದ್ದಾರೆ. ಇನ್ನುಳಿದ ಎರಡು-ಮೂರು ದಿನಗಳ ಕಾಲ ಮತದಾರರು ಬಹಳಷ್ಟು ಜಾಗರೂಕರಾಗಿರಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಕರೆ ನೀಡಿದರು. 

ಚುನಾವಣಾ ಉಸ್ತುವಾರಿ, ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ವ್ಯಾಪ್ತಿಯಲ್ಲಿ ಸೋಮವಾರ ಮತಯಾಚನೆ ರ್ಯಾಲಿ ನಡೆಸಿ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ-ಎನ್ ಸಿ ರೋಡ್ ಜಂಕ್ಷನ್ನಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರ ಮಾಂಗಲ್ಯ ಹಾಗೂ ಧರ್ಮಗ್ರಂಥಗಳನ್ನು ಹಿಡಿದು ಆಣೆ-ಪ್ರಮಾಣ ನಡೆಸಿ ಆ ಮೂಲಕ ರಾಜಕೀಯ ನಡೆಸುವ ನೀಚ ಮಟ್ಟಕ್ಕೆ ಬಿಜೆಪಿಗರು ಕೊನೆ ಕ್ಷಣದಲ್ಲಿ ಇಳಿದಿರುವ ಬಗ್ಗೆ ಮಾಹಿತಿ ಬರುತ್ತಿದೆ. ಇದು ಬಿಜೆಪಿಗರ ಹತಾಶೆಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳು ಈಗಾಗಲೇ ರಾಜ್ಯದ ಪ್ರತಿಯೊಂದು ಮನೆ-ಮಗಳಿಗೂ ತಲುಪಿ ಆಗಿದ್ದು, ಇದರಿಂದ ಬಿಜೆಪಿಗರು ಅಭಿವೃದ್ದಿ ಹಾಗೂ ಜನಪರ ಕಾರ್ಯಕ್ರಮಗಳ ವಿಚಾರದಲ್ಲಿ ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಿ ಹೋದರೂ ಬಿಜೆಪಿಗರು ಜನರಿಂದ ಮಂಗಳಾರತಿಯನ್ನೇ ಎದುರಿಸುವಂತಾಗಿದೆ. ಕಾಂಗ್ರೆಸ್ ನೀಡಿದ ಭರವಸೆಗಳು ಕೆಲವೇ ದಿನಗಳಲ್ಲಿ ಈಡೇರಿದೆ. ನಮ್ಮ ಬದುಕು ಹಸನಾಗಿದೆ. ಆದರೆ ಮೋದಿ ಸರಕಾರ ಅಧಿಕಾರಕ್ಕೇರುವ ಮುಂಚೆ ನೀಡಿದ ಭರವಸೆಗಳಾದ 15 ಲಕ್ಷ ಹಣ, ಕಪ್ಪು ಹಣ ವಾಪಸಾತಿ, ಭ್ರಷ್ಟಾಚಾರ ನಿರ್ಮೂಲನ, 2 ಕೋಟಿ ಉದ್ಯೋಗ ಇವೆಲ್ಲವೂ ಎಲ್ಲಿದೆ? ಯಾವುದೇ ಭರವಸೆ ಈಡೇರಿಸಲು ಕಳೆದ 10 ವರ್ಷಗಳಿಂದಲೂ ಸಾಧ್ಯವಾಗಿಲ್ಲ ಎಂಬ ಬಗ್ಗೆ ಜನರ ಪ್ರಶ್ನೆಗಳ ಸರಮಾಲೆ ಎದುರಿಸಲು ಸಾಧ್ಯವಾಗದೆ ಈಗಾಗಲೇ ಸೋಲೊಪ್ಪಿಕೊಂಡಿರುವ ಬಿಜೆಪಿಗರು ಇದೀಗ ಅಪಪ್ರಚಾರವನ್ನೇ ಮತ್ತೆ ನೆಚ್ಚಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. 

ಚುನಾವಣಾ ಪ್ರಚಾರ ಸಮಿತಿಯ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಚುನಾವಣಾ ವಾರ್ ರೂಂ ಮುಖ್ಯಸ್ಥ ಎಂ ಅಶ್ವನಿ ಕುಮಾರ್ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಪ್ರಮುಖರಾದ ಪದ್ಮಶೇಖರ್ ಜೈನ್, ಕೆ ಪದ್ಮನಾಭ ರೈ, ಹಾಜಿ ಬಿ ಎಚ್ ಖಾದರ್, ಜಯಂತಿ ವಿ ಪೂಜಾರಿ, ವಿಲ್ಮಾ ಮೊರಾಸ್, ಶಬೀರ್ ಸಿದ್ದಕಟ್ಟೆ, ಸಿದ್ದೀಕ್ ಸರವು, ಚಂದ್ರಶೇಖರ್ ಕರ್ಣ, ಅಲ್ತಾಫ್ ಸಿದ್ದಕಟ್ಟೆ, ರಾಜೇಶ್ ರೋಡ್ರಿಗಸ್, ಮುಹಮ್ಮದ್ ನಂದಾವರ, ಪ್ರವೀಣ್ ರೋಡ್ರಿಗಸ್, ಶರೀಫ್ ಭೂಯಾ ಮೊದಲಾದವರು ಭಾಗವಹಿಸಿದ್ದರು. 

ಚುನಾವಣಾ ಪ್ರಚಾರ ಜಾಥಾವು ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಬಡಗಕಜೆಕಾರು-ಪಾಂಡವರಕಲ್ಲುನಿಂದ ಪ್ರಾರಂಭಗೊಂಡು, ಉಳಿ-ಕಕ್ಕೆಪದವು, ಮಣಿನಾಲ್ಕೂರು-ಮಾವಿನಕಟ್ಟೆ, ಸರಪಾಡಿ, ಅಲ್ಲಿಪಾದೆ, ನಾವೂರು, ಅಮ್ಟಾಡಿ, ಅರಳ, ಮೂಲರಪಟ್ಣ, ಕರ್ಪೆ, ಸಂಗಬೆಟ್ಟು, ಸಿದ್ದಕಟ್ಟೆ, ರಾಯಿ, ಪಂಜಿಕಲ್ಲು, ಆಚಾರಿಪಲ್ಕೆ, ಕುಕ್ಕಿಪ್ಪಾಡಿ-ಮಾವಿನಕಟ್ಟೆ, ಚೆನ್ನೈತ್ತೋಡಿ, ಬಸ್ತಿಕೋಡಿ, ಇರ್ವತ್ತೂರು, ಕಾವಳಮೂಡೂರು-ಎನ್ ಸಿ ರೋಡ್ ಜಂಕ್ಷನ್ ಮೂಲಕ ಸಾಗಿ ಬಂದು ಕಾವಳಪಡೂರು-ಕಾರಿಂಜ ಜಂಕ್ಷನ್ನಿನಲ್ಲಿ ಸಮಾಪ್ತಿಗೊಂಡಿತು. 

  • Blogger Comments
  • Facebook Comments

0 comments:

Post a Comment

Item Reviewed: ಚುನಾವಣೆಯಲ್ಲಿ ಸೋಲುವುದು ಖಚಿತಗೊಂಡು ಎಂದಿನಂತೆ ಅಪಪ್ರಚಾರ, ಆಣೆ-ಪ್ರಮಾಣಗಳಿಗೆ ಮಾರು ಹೋದ ಬಿಜೆಪಿಗರು, ಮತದಾರರು ಜಾಗರೂಕರಾಗಿರಿ : ಕೈ ಅಭ್ಯರ್ಥಿ ಪದ್ಮರಾಜ್ ಕರೆ Rating: 5 Reviewed By: karavali Times
Scroll to Top