ಬಂಟ್ವಾಳ, ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ನಾಡಿನ ಜನರ ಕಷ್ಟ-ಕಾರ್ಪಣ್ಯಗಳಿಗೆ ಪೂರಕವಾಗಿ ಉಪಯೋಗಕ್ಕೆ ಬಂದಿದೆಯಲ್ಲದೆ ಈ ಬಗ್ಗೆ ಜನ ಸಂಪೂರ್ಣ ತೃಪ್ತರಾಗಿದ್ದಾರೆ ಎಂಬುದಕ್ಕೆ ಈ ಬಾರಿ ನಾವು ಕ್ಷೇತ್ರ ಪರ್ಯಟನೆ ಮಾಡುವ ವೇಳೆ ಜನ ನೀಡುತ್ತಿರುವ ಧನ್ಯತಾ ಭಾವನೆಯೇ ಸಾಕ್ಷಿ ಎಂದು ದ ಕ ಲೋಕಸಭಾ ಚುನಾವಣಾ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಮಂಗಳವಾರ ಅಪರಾಹ್ನ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಗ್ಯಾರಂಟಿ ಕಾರ್ಡ್ ನೀಡುವ ಸಂದರ್ಭ ನಿರ್ಲಕ್ಷ್ಯ ಭಾವನೆ ತೋರಿದವರು ಕೂಡಾ ಈ ಬಾರಿ ಕೇಂದ್ರದ ಗ್ಯಾರಂಟಿ ಕಾರ್ಡುಗಳನ್ನು ಕೇಳಿ ಪಡೆಯುತ್ತಿದ್ದಾರೆ. ಅಲ್ಲದೆ ಕಳೆದ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಕಳೆದ ಬಾರಿ ಕೈ ತಪ್ಪಿ ಹೋಗಿರುವ ಮತಗಳು ಈ ಬಾರಿ ಕಾಂಗ್ರೆಸ್ ಪರವಾಗಿ ಪರಿವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಅಲ್ಪಪ್ರಮಾಣದಲ್ಲಿ ಹಿನ್ನಡೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳಿಂದ ಜನ ಸಂತೃಪ್ತಿ ಹೊಂದಿ ಸ್ವತಃ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಲಿದ್ದು, ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭೂತಪೂರ್ವ ಮುನ್ನಡೆ ಕಾಯ್ದುಕೊಳ್ಳಲಿದೆ ಎಂದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಎಂಪಿಗಳಿದ್ದ ವೇಳೆ ನಡೆದ ಅಭಿವೃದ್ದಿ ಕಾರ್ಯಗಳನ್ನು ಬಿಟ್ಟರೆ ಬಳಿಕ ಅಭಿವೃದ್ದಿ ಕಾರ್ಯ ಶೂನ್ಯವಾಗಿದೆ. ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಕೂಡಾ ಆಸ್ಕರ್ ಫೆರ್ನಾಂಡಿಸ್ ಭೂಸಾರಿಗೆ ಮಂತ್ರಿ ಆಗಿದ್ದ ವೇಳೆ ಆರಂಭವಾಗಿರುವ ಕಾಮಗಾರಿಯಾಗಿದೆ. ಇದರಲ್ಲಿಯೂ ಬಿಜೆಪಿ ಎಂಪಿಗಳ ಸಾಧನೆ ಏನೂ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಯೋಜಕ ಹಾಗೂ ವೀಕ್ಷಕ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬೀರ್ ಎಸ್, ಬಂಟ್ವಾಳ ಬ್ಲಾಕ್ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್ ಜೊತೆಗಿದ್ದರು.
0 comments:
Post a Comment