ಮಂಗಳೂರು, ಎಪ್ರಿಲ್ 29, 2024 (ಕರಾವಳಿ ಟೈಮ್ಸ್) : ಹಾಸನ ಸಂಸದ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್ ಡಿ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಲು ರಾಜ್ಯ ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಿಕೊಡಬೇಕೆಂದು ಸಿಪಿಐ (ಎಂಎಲ್) ಲಿಬರೇಶನ್ ಆಗ್ರಹಿಸಿದೆ.
ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾದವಾಗುತ್ತದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ಮಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸುವುದು ಅತ್ಯಂತ ಹೀನ ಕೃತ್ಯವಾಗಿದೆ.
ರಾಜಕೀಯ ಅಧಿಕಾರ, ಆಸ್ತಿ ಮತ್ತು ಜಾತಿಯ ಮದದಿಂದ ಮೆರೆಯುತ್ತಿರುವ ಹಾಸನ ಜಿಲ್ಲೆಯ ಪ್ರಭಾವಿ ಕುಟುಂಬದ ಪ್ರಜ್ವಲ್ ರೇವಣ್ಣ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡಿದ್ದಾನೆ. ಅಲ್ಲದೆ ಆ ದೃಶ್ಯಗಳನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಮಹಿಳೆಯರನ್ನು ಈ ಕುಕೃತ್ಯಕ್ಕೆ ಬಳಸಿಕೊಳ್ಳಲು ಅವನು ತನಗಿರುವ ರಾಜಕೀಯ ಅಧಿಕಾರವನ್ನು ಬಳಸಿಕೊಂಡಿದ್ದಾನೆ ಎನ್ನುವುದೂ ಸ್ಪಷ್ಟವಾಗಿದೆ. ಅವನು ತನ್ನ ಕಾಮತೃಷೆಗಾಗಿ ನೂರಾರು ಮಹಿಳೆಯರನ್ನು ಬಳಸಿಕೊಂಡು ಸಾವಿರಾರು ವೀಡಿಯೋಗಳನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.
ಈ ದೃಶ್ಯಗಳಲ್ಲಿ ಅವನದೇ ಪಕ್ಷದ ಮಹಿಳಾ ಮುಖಂಡರು, ಮಹಿಳಾ ಕಾರ್ಯಕರ್ತೆಯರು, ಖಾಸಗಿ ಮತ್ತು ಸರಕಾರಿ ಮಹಿಳಾ ನೌಕರರು ಹಾಗೂ ಅಧಿಕಾರಿಗಳು ಜೊತೆಗೆ ಮಹಿಳಾ ಪೆÇೀಲೀಸು ಅಧಿಕಾರಿಗಳೊಂದಿಗೆ ನಡೆಸಿರುವ ಲೈಂಗಿಕ ಚಟುವಟಿಕೆಗಳೂ ಇವೆ ಎನ್ನಲಾಗುತ್ತಿದೆ. ಅವನ ಮನೆಯ ಕೆಲಸದ ಹೆಂಗಸಿನ ಮೇಲೂ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿ ಆ ದೃಶ್ಯಗಳನ್ನೂ ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಇಂತಹ ವಿಕೃತ ಮತ್ತು ವಿಕ್ಷಿಪ್ತ ಮನಸ್ಸಿನ ವ್ಯಕ್ತಿ ಜನಪ್ರತಿನಿಧಿಯಾಗಿ ಇರುವುದಿರಲಿ ನಾಗರಿಕ ಸಮಾಜದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವುದು ಬಹಳ ಅಪಾಯಕಾರಿಯಾದ ಮತ್ತು ಆತಂಕಕಾರಿಯಾದ ಸಂಗತಿಯಾಗಿದೆ. ಈತನ ಈ ಕುಕೃತ್ಯದಿಂದಾಗಿ ಹಲವಾರು ಮಹಿಳೆಯರ ಬದುಕು ಛಿದ್ರಗೊಳ್ಳುತ್ತಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿರುವ ಸಿಪಿಐಎಂಎಲ್ ಲಿಬರೇಶನ್ ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಲೈಂಗಿಕ ಕಿರುಕುಳ, ದೌರ್ಜನ್ಯ, ಮರ್ಯಾದಾ ಹತ್ಯೆಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿವೆ. ಈ ಹಿನ್ನಲೆಯಲ್ಲಿ ಮಹಿಳೆಯರ ಸಮಸ್ಯೆಗಳು ಅವರ ಘನತೆ, ಗೌರವದಿಂದ ಬಾಳುವ ಪ್ರಶ್ನೆಗಳಾಗಿದ್ದು, ದೌರ್ಜನ್ಯಗಳು ತಡೆಗಟ್ಟಲು ವಿಶೇಷ ಕಾನೂನು ರೂಪಿಸಿ, ಮಹಿಳೆಯರಿಗೆ ರಕ್ಷಣೆ ಮುಂದಾಗಬೇಕು ಸರಕಾರವನ್ನು ಒತ್ತಾಯಿಸಿದೆ.
0 comments:
Post a Comment