ಸಮರ್ಥ ಆಡಳಿತ ನೀಡುವ, ಸುದೃಢ ನಾಯಕರನ್ನು ಚುನಾಯಿಸುವ ಬಗ್ಗೆ ನಮ್ಮಲ್ಲಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು : ಚುನಾವಣಾ ತರಬೇತುದಾರ ಅಬ್ದುಲ್ ರಝಾಕ್ - Karavali Times ಸಮರ್ಥ ಆಡಳಿತ ನೀಡುವ, ಸುದೃಢ ನಾಯಕರನ್ನು ಚುನಾಯಿಸುವ ಬಗ್ಗೆ ನಮ್ಮಲ್ಲಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು : ಚುನಾವಣಾ ತರಬೇತುದಾರ ಅಬ್ದುಲ್ ರಝಾಕ್ - Karavali Times

728x90

5 April 2024

ಸಮರ್ಥ ಆಡಳಿತ ನೀಡುವ, ಸುದೃಢ ನಾಯಕರನ್ನು ಚುನಾಯಿಸುವ ಬಗ್ಗೆ ನಮ್ಮಲ್ಲಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು : ಚುನಾವಣಾ ತರಬೇತುದಾರ ಅಬ್ದುಲ್ ರಝಾಕ್

ಬಂಟ್ವಾಳ, ಎಪ್ರಿಲ್ 05, 2024 (ಕರಾವಳಿ ಟೈಮ್ಸ್) : ಪ್ರತಿಯೊಬ್ಬ ಅರ್ಹ ನಾಗರಿಕನು ಮತದಾನ ಮಾಡುವುದರ ಮೂಲಕ ದೇಶದ ಹಿತ ಕಾಪಾಡಬೇಕು. ಎಲ್ಲರೂ ಸಮಾನವಾಗಿ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವ ಮೂಲಕ ದೇಶಕ್ಕೆ ಸಮರ್ಥ ಆಡಳಿತ ನೀಡುವ ಸದೃಢ ನಾಯಕರನ್ನು ಚುನಾಯಿಸುವ ಅಧಿಕಾರ ನಮ್ಮಲ್ಲೇ ಇರುವುದರಿಂದ ಏನೇ ಕೆಲಸಗಳಿದ್ದರೂ ಎಲ್ಲವನ್ನೂ ಬದಿಗೊತ್ತಿ ಮತದಾನಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಮಾಸ್ಟರ್ ತರಬೇತುದಾರ ಅಬ್ದುಲ್ ರಜಾಕ್ ಅನಂತಾಡಿ ಹೇಳಿದರು. 

ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಇ ಎಲ್ ಸಿ ಘಟಕ, ಎನ್ ಎಸ್ ಎಸ್ ಘಟಕ, ಸ್ವೀಪ್ ತಂಡ ಹಾಗೂ ತಾ ಪಂ ಬಂಟ್ವಾಳ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸಗೈದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಸುಯೋಗ ವರ್ಧನ್ ಡಿ ಎಂ ಮಾತನಾಡಿ, ಪ್ರತಿಯೊಂದು ಮತವೂ ಯೋಗ್ಯ ಅಭ್ಯರ್ಥಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆ ಪ್ರತಿಯೊಬ್ಬ ಅರ್ಹ ಮತದಾರನು ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಬಲ ತುಂಬಲು ಸಾಧ್ಯ ಎಂದರು. 

ಬಂಟ್ವಾಳ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಸುರೇಖಾ ಯಲವಾರ್ ಮಾತನಾಡಿ, ನಮ್ಮದೇ ಆಡಳಿತಗಾರರನ್ನು ನಾವೇ ಆಯ್ಕೆಮಾಡಿಕೊಳ್ಳುವ ಅವಕಾಶ ಮತದಾನದ ಮೂಲಕ ನಮಗೆ ದೊರಕಿದೆ. ಇದನ್ನು ಪರಿಣಾಮಕಾರಿಯಾಗಿ ಎಲ್ಲರೂ ಬಳಸಿಕೊಳ್ಳಬೇಕು ಹಾಗೂ ಇತರರನ್ನೂ ಮತದಾನಕ್ಕೆ ಪ್ರೇರೇಪಿಸಬೇಕು ಎಂದರು. 

ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಕಾಂಬ್ಳೆ ಮಾತನಾಡಿ, ಎಲ್ಲಾ ಯುವ ಮತದಾರರೂ ಮುಂಬರುವ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶದ ಪ್ರಗತಿಗೆ ಕೈಜೋಡಿಸಬೇಕು. ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಘೋಷವಾಕ್ಯದಂತೆ ಮತದಾನ ಮಾಡುವ ಹೆಮ್ಮೆ ನಮಗಿರಬೇಕು ಎಂದರು. 

ತಾ ಪಂ ಸಹಾಯಕ ನಿರ್ದೇಶಕ ವಿಶ್ವನಾಥ ಡಿ ಮಾತನಾಡಿ, ಮತದಾನವು ಪವಿತ್ರವಾದ ಕೆಲಸ. ಪ್ರತಿಯೊಬ್ಬರೂ ನಿರ್ಭೀತಿಯಿಂದ ಹಾಗೂ ಯಾವುದೇ ಆಮಿಷಗಳಿಗೆ ಗುರಿಯಾಗದೇ ಮತಚಲಾಯಿಸಬೇಕು. ಯುವ ಮತದಾರರು ವಿಚಾರ ಮಾಡಿ ಮತ ಚಲಾಯಿಸಲು ಮುಂದೆ ಬರಬೇಕು ಎಂದರು. 

ತಾ ಪಂ ಮ್ಯಾನೇಜರ್ ಶಾಂಭವಿ ಎಸ್ ರಾವ್, ಕಾರ್ಯದರ್ಶಿಗಳಾದ ಅಶೋಕ್ ಕುಮಾರ್, ಪ್ರಕಾಶ್ ಪಿ, ಸೆಕ್ಟರ್ ಅಧಿಕಾರಿಗಳಾದ ಸುಪ್ರೀತ್ ಕಡಕೋಳ್ ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಸ್ವಾಗತಿಸಿ, ಇ ಎಲ್ ಸಿ ಸಂಚಾಲಕ ಡಾ ವಿನಾಯಕ ಕೆ ಎಸ್ ವಂದಿಸಿದರು. ಉಪನ್ಯಾಸಕರಾದ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು. ಹೇಮಲತಾ ಹಾಗೂ ಶ್ರದ್ಧಾ ಪ್ರಾರ್ಥಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸಮರ್ಥ ಆಡಳಿತ ನೀಡುವ, ಸುದೃಢ ನಾಯಕರನ್ನು ಚುನಾಯಿಸುವ ಬಗ್ಗೆ ನಮ್ಮಲ್ಲಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು : ಚುನಾವಣಾ ತರಬೇತುದಾರ ಅಬ್ದುಲ್ ರಝಾಕ್ Rating: 5 Reviewed By: karavali Times
Scroll to Top