ಪ್ಲಾಸ್ಟಿಕ್ ಹೊದಿಕೆಗಳಿಂದ ಆವೃತಗೊಂಡು ಗೂಡಂಗಡಿಗಳಂತಾಗಿರುವ ಬ್ರಹ್ಮಕೂಟ್ಲು ಟೋಲ್ ಪ್ಲಾಝಾ : ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ - Karavali Times ಪ್ಲಾಸ್ಟಿಕ್ ಹೊದಿಕೆಗಳಿಂದ ಆವೃತಗೊಂಡು ಗೂಡಂಗಡಿಗಳಂತಾಗಿರುವ ಬ್ರಹ್ಮಕೂಟ್ಲು ಟೋಲ್ ಪ್ಲಾಝಾ : ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ - Karavali Times

728x90

2 June 2024

ಪ್ಲಾಸ್ಟಿಕ್ ಹೊದಿಕೆಗಳಿಂದ ಆವೃತಗೊಂಡು ಗೂಡಂಗಡಿಗಳಂತಾಗಿರುವ ಬ್ರಹ್ಮಕೂಟ್ಲು ಟೋಲ್ ಪ್ಲಾಝಾ : ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ

ಬಂಟ್ವಾಳ, ಜೂನ್ 02, 2024 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಅವ್ಯವಸ್ಥೆಯ ಆಗರವಾಗಿದ್ದು, ರಸ್ತೆ ಬದಿಯ ಗೂಡಂಗಡಿಳಂತೆ ಟರ್ಪಾಲಿನಿಂದ ಮುಚ್ಚಿಕೊಂಡು ಸುಂಕ ವಸೂಲಿ ನಡೆಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ನಿಜಕ್ಕೂ ನೋಡಲು ಕೂಡಾ ಒಂದು ರೀತಿಯಲ್ಲಿ ನಾಚಿಕೆಯಾಗುವಂತಹ ಪರಿಸ್ಥಿತಿ ಇದೆ. ಇದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಲ್ಲದೆ ಇನ್ನೇನೂ ಅಲ್ಲ ಎಂದು ಜನರಾಡಿಕೊಳ್ಳುವಂತಾಗಿದೆ. 

ಬ್ರಹ್ಮರಕೂಟ್ಲು ಎಂಬಲ್ಲಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಸುಂಕ ವಸೂಲಾತಿ ಕೇಂದ್ರದ ನಾಲ್ಕು ಬೂತ್ ಗಳು ಟರ್ಪಾಲಿನಲ್ಲಿ ಮುಚ್ಚಿಕೊಂಡ ಸ್ಥಿತಿಯಲ್ಲಿದೆ. ಟರ್ಪಾಲಿನೊಳಗಡೆ ಕಬ್ಬಿಣದ ತುಕ್ಕು ಹಿಡಿದ ಮೆಶ್ ನಿಂದ ನಿರ್ಮಾಣ ಮಾಡಿದ ಪುಟ್ಟ ಕೊಠಡಿ, ಅದರ ಸುತ್ತಲೂ ಕಬ್ಬಿಣದ ಶೀಟುಗಳ ರಾಶಿ, ಮತ್ತೊಂದು ಕಡೆ ತುಕ್ಕು ಹಿಡಿದಿರುವ ಕಬ್ಬಿಣದ ಪೈಪುಗಳ ರಾಶಿ. ಈ ಎಲ್ಲ ಅವ್ಯವಸ್ಥೆಗಳ ಮಧ್ಯೆ ಯಾವುದೇ ರಕ್ಷಣೆ, ಭದ್ರತೆ ಇಲ್ಲದೆ ಇಲ್ಲಿನ ಸಿಬ್ಬಂದಿಗಳು ದೈನಂದಿನ ಲಕ್ಷಾಂತರ ರೂಪಾಯಿ ಸುಂಕ ವಸೂಲಿ ಮಾಡಿ ಹೆದ್ದಾರಿ ಪ್ರಾಧಿಕಾರದ ಹೊಟ್ಟೆ ತುಂಬಿಸುತ್ತಿದ್ದಾರೆ. 

ಇಲ್ಲಿನ ಸುಂಕ ವಸೂಲಾತಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ ಎಂದು ಹಲವು ಬಾರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲೀ ಎಚ್ಚೆತ್ತುಕೊಳ್ಳಲೇ ಇಲ್ಲ. ಸಮರ್ಪಕ ಸರ್ವಿಸ್ ರಸ್ತೆಯಿಲ್ಲ. ಎಮರ್ಜೆನ್ಸಿ ರೋಡ್ ಇಲ್ಲ, ಶೌಚಾಲಯ ಸಹಿತ ಅಗತ್ಯ ಮೂಲಭೂತ ಸೌಲಭ್ಯಗಳೂ ಸಮರ್ಪಕವಾಗಿಲ್ಲ. ಹೀಗೆ ಒಟ್ಟು ಇಲ್ಲಗಳ ಆಗರವಾಗಿರುವ ಇಲ್ಲಿನ ಟೋಲ್ ಬೂತ್ ಇದೀಗ ಗೂಡಂಗಡಿಯಂತೆ ಟರ್ಪಾಲಿನ ಹೊದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಜಿಲ್ಲೆಗೇ ಒಂದು ರೀತಿಯ ಮುಜುಗರ ಉಂಟುಮಾಡುವಂತಿದೆ. ಮಳೆ ಬಿಸಿಲೆನ್ನದೇ, ರಾತ್ರಿ-ಹಗಲೆನ್ನದೆ ವಾಹನ ಸವಾರರಿಂದ ನಿಂದನೆ-ಬೈಗುಳಗಳನ್ನೂ ಎದುರಿಸುವ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಯಾವುದೇ ರಕ್ಷಣೆಯೂ ಇಲ್ಲ ಎನ್ನುತ್ತಿದ್ದಾರೆ ಸ್ಥಳೀಯರು. 

ಇತ್ತೀಚೆಗೆ ಟೋಲ್ ಪ್ಲಾಜಾದ ಮೇಲ್ಚಾವಣಿಗೆ ಹೊಸ ಶೀಟುಗಳನ್ನು ಅಳವಡಿಸಲಾಗಿದ್ದು, ಇಲ್ಲಿನ ಹಳೆಯ ತುಕ್ಕು ಹಿಡಿದಿರುವ ಕಬ್ಬಿಣದ ಕಂಬಗಳು, ಕಬ್ಬಿಣದ ಶೀಟುಗಳು ಸುಂಕ ವಸೂಲಿ ಕೇಂದ್ರದ ಹತ್ತಿರವೇ ರಾಶಿಯಾಗಿ ಬಿದ್ದಿದ್ದು ಅಸಹ್ಯ ಹುಟ್ಟಿಸುವಂತಿದೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತ ರೀತಿಯಲ್ಲಿ ಈ ಟೋಲ್ ಪ್ಲಾಜಾ ನಿರ್ಮಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪ್ಲಾಸ್ಟಿಕ್ ಹೊದಿಕೆಗಳಿಂದ ಆವೃತಗೊಂಡು ಗೂಡಂಗಡಿಗಳಂತಾಗಿರುವ ಬ್ರಹ್ಮಕೂಟ್ಲು ಟೋಲ್ ಪ್ಲಾಝಾ : ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ Rating: 5 Reviewed By: karavali Times
Scroll to Top