ಲೋಕ ಸಮರ : ದಕ್ಷಿಣ ಕನ್ನಡಕ್ಕೆ ಚೌಟ, ಉಡುಪಿಗೆ ಕೋಟ ಅಧಿಪತ್ಯ, ಕೈ ಪಾಳಯ ಧೂಳೀಪಟ - Karavali Times ಲೋಕ ಸಮರ : ದಕ್ಷಿಣ ಕನ್ನಡಕ್ಕೆ ಚೌಟ, ಉಡುಪಿಗೆ ಕೋಟ ಅಧಿಪತ್ಯ, ಕೈ ಪಾಳಯ ಧೂಳೀಪಟ - Karavali Times

728x90

4 June 2024

ಲೋಕ ಸಮರ : ದಕ್ಷಿಣ ಕನ್ನಡಕ್ಕೆ ಚೌಟ, ಉಡುಪಿಗೆ ಕೋಟ ಅಧಿಪತ್ಯ, ಕೈ ಪಾಳಯ ಧೂಳೀಪಟ

ಮಂಗಳೂರು, ಜೂನ್ 04, 2024 (ಕರಾವಳಿ ಟೈಮ್ಸ್) : ಬಿಜೆಪಿಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಅವು ಯಾವುದೇ ಹಂತದಲ್ಲೂ ಚೌಟ ಅವರಿಗೆ ಪ್ರತಿಸ್ಪರ್ಧೆ ನೀಡದೆ ಹೀನಾಯ ಸೋಲು ಅನುಭವಿಸಿದ್ದಾರೆ. ಆರಂಭದಿಂದಲೂ ಗಣನೀಯ ಮುನ್ನಡೆ ಕಾಯ್ದುಕೊಳ್ಳುತ್ತಾ ಬಂದ ಕ್ಯಾಪ್ಟನ್ ಅಂತಿಮವಾಗಿ 1,49,208 ಮತಗಳ ಅಂತರ ಭಾರೀ ಜಯಭೇರಿ ಭಾರಿಸಿದ್ದಾರೆ. 

ಕಳೆದ 3 ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಎರಡೂ ಪಕ್ಷಗಳಿಂದಲೂ ಹೊಸ ಮುಖಗಳಿಗೆ ಮಣೆ ಹಾಕಿದ್ದ ಪರಿಣಾಮ ಮತ್ತೆ ಗಮನ ಸೆಳೆದಿತ್ತು. ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟ ಕಾರಣ ತೀವ್ರ ಕುತೂಹಲ ಕೆರಳಿಸಿತ್ತು. ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬದಲಾವಣೆ ತರುತ್ತೋ ಎಂಬ ಕುತೂಹಲ ಇತ್ತಾದರೂ ಜಿಲ್ಲೆಯ ಜನ ಮತ್ತೆ ಬಿಜೆಪಿಗೆ ಜೈ ಎಂದಿದ್ದಾರೆ. 

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿ  ಮಿಥುನ್ ಎಂ ರೈ ವಿರುದ್ಧ 2,74,621 ಭಾರೀ ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿನ ಅಂತರ ಒಂದಷ್ಟು ಕುಗ್ಗಿರುವುದು ಬಿಟ್ಟರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಯು ಟಿ ಖಾದರ್ ಸಾರಥ್ಯದ ಮಂಗಳೂರು ಕ್ಷೇತ್ರ ಬಿಟ್ಟರೆ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿ ತೀವ್ರ ಹಿನ್ನಡೆಯನ್ನೇ ಅನುಭವಿಸಿದ್ದಾರೆ. 

ಯು ಟಿ ಖಾದರ್ ಅವರ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ 33.063 ಮತಗಳ ಮುನ್ನಡೆ ಕಾಯ್ದುಕೊಂಡದ್ದು ಬಿಟ್ಟರೆ ಉಳಿದೆಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೇ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿರುವ ಇನ್ನೊಂದು ಕ್ಷೇತ್ರವಾಗಿರುವ ಪುತ್ತೂರಿನಲ್ಲೂ ಈ ಬಾರಿ ಬಿಜೆಪಿ ಅಭ್ಯರ್ಥಿ 28,690 ಮತಗಳ ಲೀಡ್ ಪಡೆದಿರುವುದು ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ. ಉಳಿದಂತೆ ಮಂಗಳೂರು ದಕ್ಷಿಣದಲ್ಲಿ 24,344 ಮತಗಳು, ಮಂಗಳೂರು ಉತ್ತರದಲ್ಲಿ 31,421 ಮತಗಳು, ಮೂಡಬಿದ್ರೆಯಲ್ಲಿ 28,188 ಮತಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕ್ಷೇತ್ರವಾಗಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 23,307 ಮತಗಳ ಹಿನ್ನಡೆ ಅನುಭವಿಸಿದೆ. ಬಂಟ್ವಾಳ ಕ್ಷೇತ್ರದಲ್ಲಿ 5,993 ಮತಗಳು, ಸುಳ್ಯದಲ್ಲಿ 39,147 ಮತಗಳ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡು ಬಂದಿದೆ. ಉಳ್ಳಾಲ ಕ್ಷೇತ್ರ ಬಿಟ್ಟರೆ ಬಂಟ್ವಾಳ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಬಿಜೆಪಿ ಒಂದಷ್ಟು ಪ್ರಬಲ ಪೈಪೋಟಿ ನೀಡಿದೆ. 

ಇನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಅನುಭವಿ ಕಾಂಗ್ರೆಸ್ ಅಭ್ಯರ್ಥಿ ಜಯಪಕಾಶ್ ಹೆಗ್ಡೆ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆರಂಭದಿಂದಲೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಸತತವಾಗಿ ಮುನ್ನಡೆ ಸಾಧಿಸಿದ್ದರು. ಅಂತಿಮವಾಗಿ  ಕೋಟ ಶ್ರೀನಿವಾಸ್ ಪೂಜಾರಿ ಅವರು 2,57,178 ಮತಗಳ ಮುನ್ನಡೆ ಸಾಧಿದ್ದಾರೆ. 

2019ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮಣೆ ಹಾಕಿತ್ತು. ಇದೀಗ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೂಡಾ ಗೆಲುವು ಸಾಧಿಸುವ ಮೂಲಕ ಬಿಜೆಪಿ ಧ್ವಜ ಹಾರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಈ ಬಾರಿಯೂ ಬಿಜೆಪಿ ಪಾಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಲೋಕ ಸಮರ : ದಕ್ಷಿಣ ಕನ್ನಡಕ್ಕೆ ಚೌಟ, ಉಡುಪಿಗೆ ಕೋಟ ಅಧಿಪತ್ಯ, ಕೈ ಪಾಳಯ ಧೂಳೀಪಟ Rating: 5 Reviewed By: karavali Times
Scroll to Top