ಆಲ್ ಇಂಡಿಯಾ ಸ್ಟೂಡೆಂಟ್ಸ್ ಎಸೋಸಿಯೇಶನ್ (ಎ.ಐ.ಎಸ್.ಎ) ನಡೆಸಿದ ರಾಜ್ಯ ಶಿಕ್ಷಣ ನೀತಿ ಕುರಿತು ರಾಜ್ಯ ಮಟ್ಟದ ಸಮಾವೇಶದಲ್ಲಿ ಒಕ್ಕೊರಳ ಆಗ್ರಹ
ಬೆಂಗಳೂರು, ಆಗಸ್ಟ್ 29, 2024 (ಕರಾವಳಿ ಟೈಮ್ಸ್) : ಇಡೀ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್ ಡೌನ್ ಸಮಯದಲ್ಲಿ ಕರ್ನಾಟಕವು ನೂತನ ಶಿಕ್ಷಣ ನೀತಿ (ಎನ್.ಇ.ಪಿ) 2020 ಜಾರಿಗೊಳಿಸಿದ ಪ್ರಥಮ ರಾಜ್ಯವಾಗಿತ್ತು. ಅದನ್ನು ಹಿಂಪಡೆದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಮಾಜಿ ಯುಜಿಸಿ ಅಧ್ಯಕ್ಷರಾದ ಸುಖಾದೇವ ಥೋರಾಟ್ ಅವರ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ತಯಾರಿಸಲು 2023 ರ ಆಗಸ್ಟ್ ತಿಂಗಳಲ್ಲಿ ಸಮಿತಿಯನ್ನು ರಚಿಸಿತು. ಕರ್ನಾಟಕದಲ್ಲಿ ಶಿಕ್ಷಣವನ್ನು ಉತ್ತಮಗೊಳಿಸಲು ವಿವಿಧ ಅಂಶಗಳನ್ನು ಪರಿಶೀಲಿಸಲು ಹಲವಾರು ಟಾಸ್ಕ್ ಫೆÇೀರ್ಸ್ ಗಳನ್ನು ರಚಿಸಿ ನೀತಿಯನ್ನು ತಯಾರಿಸಲಿದೆ.
ಈ ಕುರಿತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎ.ಐ.ಎಸ್.ಎ) ವತಿಯಿಂದ ಆಗಸ್ಟ್ 25 ರಂದು ಭಾನುವಾರ “ರಾಜ್ಯ ಶಿಕ್ಷಣ ನೀತಿ : ಉತ್ತಮ ಶಿಕ್ಷಣಕ್ಕಾಗಿ ರಾಜ್ಯ ಮಟ್ಟದ ಸಮಾವೇಶ” ವನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸೆಕ್ರೆಟೇರಿಯಟ್ ಕ್ಲಬ್ ಆವರಣದಲ್ಲಿ ಚರ್ಚಾ ಕಾರ್ಯಕ್ರಮ ನಡೆಯಿತು.
ಸಮಾವೇಶದಲ್ಲಿ ಭಾಗವಹಿಸಿದ ಎಸ್ ಇ ಪಿ ಆಯೋಗದ ಸದಸ್ಯ ಹಾಗೂ ಶಿಕ್ಷಣ ತಜ್ಞ ಪೆÇ್ರ ಡಾ ವಿ ಪಿ ನಿರಂಜನಾರಾಧ್ಯ ಅವರು ಮಾತನಾಡಿ, “ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ, ಸತತವಾಗಿ ಈ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ಶಾಲೆಗಳಿಗೆ ಬೀಗ ಬಿಗಿದಿರುವುದು, ಜಾತಿ, ಲಿಂಗ, ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯಗಳನ್ನು ತಡೆಗಟ್ಟುವಂತಹ ಶಿಕ್ಷಣ ನೀತಿ ರೂಪಿಸಬೇಕು. ಹಾಗೆಯೇ, ಮೂಲಭೂತ ಹಕ್ಕುಗಳನ್ನು ಆಧರಿಸಿ ಸಾರ್ವತ್ರಿಕ ಶಿಕ್ಷಣ ನೀಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು. ಎಲ್ಲರಿಗೂ ಶಿಕ್ಷಣ ನೀಡುವುದು ಪ್ರಭುತ್ವದ ಜವಾಬ್ದಾರಿಯಾಗಿರುತ್ತದೆ,” ಎಂದರು.
ತಮಿಳುನಾಡಿನ ಎಸ್ ಇ ಪಿ ಆಯೋಗದ ಸಂಚಾಲಕರಾಗಿ ಸಮಿತಿಗೆ ರಾಜೀನಾಮೆ ನೀಡಿದ ಹಾಗೂ ಜೆ ಎಸ್ ಎಸ್ ವಿಶ್ವವಿದ್ಯಾಲಯದ (ಮೈಸೂರು) ಮಾಜಿ ಕುಲಪತಿ ಎಲ್ ಜವಾಹರ್ ನೇಸನ್ ಅವರು ಮಾತನಾಡಿ, “ನಾನು ಜೆ ಎಸ್ ಎಸ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಎನ್ ಇ ಪಿ ವಿರುದ್ಧವಾಗಿ ಹಿಂದಿನ ಬಿಜೆಪಿ ಸರಕಾರದ ಜೊತೆ ಬಹಳಷ್ಟು ವಾಗ್ವಾದ ನಡೆದಿತ್ತು. ನನ್ನ ಆಕ್ಷೇಪಣೆಗಳನ್ನು ಸರಕಾರಕ್ಕೆ ತಿಳಿಸಿದ್ದು, ಅದು ಅವರಿಗೆ ಸಹಿಸಲಾಗಿರಲಿಲ್ಲ. ಎನ್ ಇ ಪಿ ಮೂಲಕ “ಭಾರತ ಕೇಂದ್ರಿತ ಶಿಕ್ಷಣ” ವನ್ನು ತರಲು ಹೊರಟಿದ್ದಾರೆ. ಆದರೆ ಇವರ ಭಾರತ ಎಲ್ಲರನ್ನೂ ಒಳಗೊಂಡ ಭಾರತವಲ್ಲ, ಜಾತಿ-ಧರ್ಮದ ಹೆಸರಿನಲ್ಲಿ ವಿಭಜಿಸುವ ಭಾರತವಾಗಿದೆ. ನಾವು ವೈಜ್ಞಾನಿಕ ಚಿಂತನೆ, ವಿವೇಚನೆಯುಕ್ತ ಶಿಕ್ಷಣವನ್ನು ಅಳವಡಿಸಬೇಕು,” ಎಂದರು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ, ಧರ್ಮ, ಲಿಂಗ, ತಾರತಮ್ಯಗಳನ್ನು ಪರಿಶೀಲಿಸುವ ಎಸ್ ಇ ಪಿ ಆಯೋಗದ ಉಪ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ, ಲಿಂಗ, ಲಿಂಗತ್ವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಕ್ಕಯ್ಯ ಪದ್ಮಶಾಲಿ ಅವರು ಮಾತನಾಡಿ, “ಎನ್ ಸಿ ಇ ಆರ್ ಟಿ ಪಠ್ಯಕ್ರಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಇದ್ದ ಉಲ್ಲೇಖವನ್ನು ಅಳಿಸಿ ಇದು “ವೆಸ್ಟೆರ್ನ್” ಕಾನ್ಸೆಪ್ಟ್ ಎಂದು ಹೇಳಿದರು. ಇಂತಹ ಮನೋಭಾವ ಉಳ್ಳವರು ಎಂತಹ ಶಿಕ್ಷಣ ನೀತಿಯನ್ನು ತಯಾರಿಸಬಲ್ಲರು? ಜಾತಿ, ಧರ್ಮ, ಲಿಂಗ ಎಂದು ಭೇದ ಭಾವ ಮಾಡದೇ, ಸಮಾನ ಶಿಕ್ಷಣ ನೀಡುತ್ತಾ ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸುವಂತಹ ಶಿಕ್ಷಣ ನೀತಿ ರೂಪಿಸುವುದು ಅಗತ್ಯ” ಎಂದರು.
ಎ ಐ ಎಸ್ ಎ ರಾಜ್ಯ ಸಂಚಾಲಕರಾದ ಲೇಖಾ ಅಡವಿ ಅವರು ಮಾತನಾಡಿ, “ಎನ್ ಇ ಪಿ ಅನ್ನು ತಿರಸ್ಕರಿಸಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತಿದೆ. ಶಿಕ್ಷಣದ ಕೇಂದ್ರೀಕರಣ, ಕಾಪೆರ್Çರೇಟೀಕರಣ ಹಾಗೂ ಕೇಸರೀಕರಣವನ್ನು ಸಂಪೂರ್ಣವಾಗಿ ತಿರಸ್ಕರಿಸಿದರೆ ಮಾತ್ರ, ಒಂದು ಸಮಗ್ರ ಶಿಕ್ಷಣ ನೀತಿಯನ್ನು ಕರ್ನಾಟಕ ಮಟ್ಟದಲ್ಲಿ ರೂಪಿಸಲು ಸಾಧ್ಯವಿದೆ. ಎನ್ ಇ ಪಿ ಮಾತ್ರವಲ್ಲದೆ ಎಚ್ ಇ ಎಫ್ ಎ, ಸಿಯುಇಟಿ, ಎನ್ ಟಿ ಎ ಅನ್ನು ಸಹ ತಿರಸ್ಕರಿಸಬೇಕಾಗಿದೆ. ಖಾಸಗೀ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದನ್ನು ಬಿಟ್ಟು, ರಾಜ್ಯದ ವಿಶ್ವವಿದ್ಯಾಲಯಗಳನ್ನು ಸಶಕ್ತಗೊಳಿಸಬೇಕು,” ಎಂದರು.
ರಾಜ್ಯ ಸಮಾವೇಶದಲ್ಲಿ ಪೆÇ್ರ ಡಾ ವಿ ಪಿ ನಿರಂಜನಾರಾಧ್ಯ ಅವರು ಬರೆದಿರುವ “ಶಿಕ್ಷಣ ನೀತಿ ನಿರೂಪಣೆಗೊಂದು ತಾತ್ವಿಕ ಹಾಗೂ ಪ್ರಮಾಣೀಕೃತ ಚೌಕಟ್ಟು : ವಿಸ್ತೃತ ಸಾರ್ವಜನಿಕ ಚರ್ಚೆಗಾಗಿ ಒಂದು ಟಿಪ್ಪಣಿ” ಎಂಬ ಕಿರು ಪುಸ್ತಕವನ್ನು ಎ ಐ ಎಸ್ ಎ ವತಿಯಿಂದ ಪ್ರಕಟಿಸಲಾಗಿದ್ದು, ಅದನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು. ಕೊಪ್ಪಳ, ರಾಯಚೂರು, ವಿಜಯನಗರ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು, ಮತ್ತು ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಈ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿದ್ದರು.
0 comments:
Post a Comment