ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ಕೊಡಗು ಮೂಲದ ವ್ಯಕ್ತಿಯನ್ನು ಕಾರಿನಲ್ಲಿ ಬಂದ ತಂಡ ಪಾಣೆಮಂಗಳೂರಿಗೆ ಬಿಡುವುದಾಗಿ ಹೇಳಿ ಕುಳ್ಳಿರಿಸಿ ಚಿನ್ನಾಭರಣ ಹಾಗೂ ನಗದು ಕಸಿದುಕೊಂಡ ಘಟನೆ ಆಗಸ್ಟ್ 9 ರಂದು ನಡೆದಿದ್ದು, ಈ ಬಗ್ಗೆ ಬುಧವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿ ಎಂ ಗಂಗಾಧರ (53) ಅವರು ಆಗಸ್ಟ್ 9 ರಂದು ತನ್ನ ಮನೆಯಿಂದ ಬಿ ಸಿ ರೋಡಿಗೆ ಬಂದಿದ್ದು, ಅಲ್ಲಿಂದ ನರಿಕೊಂಬುವಿನಲ್ಲಿರುವ ತನ್ನ ಅಣ್ಣನ ಮನೆಗೆ ಹೋಗಲು ಬಿ ಸಿ ರೋಡಿನಲ್ಲಿ ವಾಹನಕ್ಕಾಗಿ ಕಾಯುತ್ತಿರುವ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಅಪರಿಚಿತರು, ತಾವುಗಳು ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದು, ಬರುವಂತೆ ತಿಳಿಸಿರುತ್ತಾರೆ. ಅದರಂತೆ ಗಂಗಾಧರ ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ಕಾರು ಸ್ವಲ್ಪ ಮುಂದೆ ಚಲಿಸಿದಾಗ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಅಪರಿಚಿತರು ಗಂಗಾಧರ ಅವರಿಗೆ ಕಾರಿನೊಳಗೆ ಹಲ್ಲೆ ನಡೆಸಿ, ಅವರ ಬಳಿಯಿದ್ದ 80 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು 2 ಸಾವಿರ ರೂಪಾಯಿ ನಗದು ಹಣವನ್ನು ಕಸಿದುಕೊಂಡಿರುತ್ತಾರೆ. ಬಳಿಕ ಗಂಗಾಧರ ಅವರನ್ನು ಕಾರಿನಿಂದ ದೂಡಿ ಹಾಕಿ ತೆರಳಿರುತ್ತಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಗಂಗಾಧರ ಅವರು ತನ್ನ ಮನೆಯವರಿಗೆ ಹಾಗೂ ಅಣ್ಣನಿಗೆ ವಿಷಯ ತಿಳಿಸಿ ಬಳಿಕ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಆಗಸ್ಟ್ 14 ರಂದು ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 138/2024 ಕಲಂ 309 (4) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment