ಬಂಟ್ವಾಳ, ಆಗಸ್ಟ್ 13, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಪೇಟೆಯಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ತಿಂಗಳುಗಳಿಂದ ನೀರು ಪೋಲಾಗುತ್ತಿರುವ ಬಗ್ಗೆ ಸೋಮವಾರ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಸ್ಪಂದಿಸಿದ ಪುರಸಭಾ ಪ್ಲಂಬರ್ ಇಬ್ರಾಹಿಂ ಪಲ್ಲಮಜಲು ಅವರು ತಮ್ಮ ಸಿಬ್ಬಂದಿಗಳೊಂದಿಗೆ ಮಂಗಳವಾರವೇ ರಿಪೇರಿ ಮಾಡಿದ್ದಾರೆ.
ಇಲ್ಲಿನ ಗಣೇಶ್ ಮೆಡಿಕಲ್ ಎದುರು ಭಾಗದಲ್ಲಿ ಕೆಲ ತಿಂಗಳ ಹಿಂದೆ ಯಾರಿಗೋ ಪೈಪ್ ಲೈನ್ ಸಂಪರ್ಕ ಕಲ್ಪಿಸುವ ವೇಳೆ ಇಲ್ಲಿನ ಪೈಪ್ ಡ್ಯಾಮೇಜ್ ಆಗಿ ಕುಡಿಯುವ ನೀರು ಪೋಲಾಗಲು ಆರಂಭಗೊಂಡು ತಿಂಗಳುಗಳೇ ಕಳೆದಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸೋಮವಾರ ಈ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿತ್ತು.
ಕಳೆದೆರಡು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಇಲ್ಲಿನ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಇದೀಗ ಮಳೆ ನಿಂತು ಬಿಸಿಲು ಬಂದು ನೆಲ-ರಸ್ತೆ ಎಲ್ಲವೂ ಒಣಗಿದ್ದು, ಪರಿಣಾಮ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿರುವ ದೃಶ್ಯ ಕಂಡು ಬರುತ್ತಿದ್ದು, ಸಾರ್ವಜನಿಕ ರಸ್ತೆಯಲ್ಲೇ ಈ ಪೋಲಾಗುತ್ತಿರುವ ನೀರು ಹರಿಯುತ್ತಿತ್ತು.
ಆದರೆ ಇಲ್ಲಿನ ಒಂದು ಭಾಗದ ಒಡೆದಿರುವ ಪೈಪ್ ಮಾತ್ರ ಸದ್ಯ ರಿಪೇರಿ ಮಾಡಲಾಗಿದ್ದು, ಇನ್ನೊಂದು ಪೈಪ್ ರಿಪೇರಿ ಮಾಡದೆ ಹಾಗೇ ಬಿಡಲಾಗಿದೆ ಎಂದು ಸ್ಥಳೀಯರು ಮತ್ತೆ ಆರೋಪಿಸಿದ್ದಾರೆ.
0 comments:
Post a Comment