ಬಂಟ್ವಾಳ, ಸೆಪ್ಟೆಂಬರ್ 11, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಸ್ತುತ ವರ್ಷದಲ್ಲಿ 94.75 ಕೋಟಿ ರೂಪಾಯಿ ವ್ಯವಹಾರ ಮಾಡಿ ಬ್ಯಾಂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ 1.05 ಕೋಟಿ ರೂಪಾಯಿ ಲಾಭ ಗಳಿಸಿ ತನ್ನ ಸದಸ್ಯರಿಗೆ ಸಾರ್ವಕಾಲಿಕ ದಾಖಲೆಯ ಶೇ 11 ರಷ್ಟು ಪಾಲು ಮುನಾಫೆ ಹಂಚಲು ನಿರ್ಧರಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ, ನೋಟರಿ-ನ್ಯಾಯವಾದಿ ಅರುಣ್ ರೋಶನ್ ಡಿ’ಸೋಜ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಬ್ಯಾಂಕು ನಬಾರ್ಡ್ ಹಾಗೂ ಸ್ವಂತ ಬಂಡವಾಳದಲ್ಲಿ 22.68 ಕೋಟಿ ಸಾಲ ಹೊರಬಾಕಿ ಹೊಂದಿದ್ದು, 19.75 ಕೋಟಿ ಠೇವಣಿ ಹೊಂದಿರುತ್ತದೆ. ನಬಾರ್ಡ್ ಸಾಲ ವಸೂಲಾತಿಯಲ್ಲಿ 2021-22ರಲ್ಲಿ ಶೇ 75.17, 2022-23ರಲ್ಲಿ ಶೇ 75.16, 2023-24ರಲ್ಲಿ ಶೇ 94 ವಸೂಲಾತಿ ಸಾಧನೆ ಮಾಡಿದ್ದು, ಜಿಲ್ಲಾ ಮಟ್ಟದಲ್ಲಿ 2022 ರಲ್ಲಿ ದ್ವಿತೀಯ ಸ್ಥಾನ, 2023 ಮತ್ತು 2024 ರಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ನಿರಂತರ 3 ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ವಸೂಲಾತಿ ಪ್ರಶಸ್ತಿ ಪಡೆಯಲು ಬ್ಯಾಂಕ್ ಆರ್ಹವಾಗಿದೆ ಎಂದರು.
ಬ್ಯಾಂಕು ಈಗಾಗಲೇ ಶೇ 3ರ ಬಡ್ಡಿ ದರದ ಎಲ್ಲಾ ರೀತಿಯ ಕೃಷಿ ಸಾಲಗಳು ಮತ್ತು ಕೋಳಿ, ಹೈನುಗಾರಿಕೆ, ಕುರಿ, ಹಂದಿ ಹಾಗೂ ಸ್ವಂತ ಬಂಡವಾಳದಿಂದ ಮನೆ, ಮನೆ ರಪೇರಿ ಇನ್ನಿತರ ಗೃಹ ಕೃತ್ಯ ಯೋಜನೆಯಲ್ಲಿ ಕೃಷಿಯೇತರ ಸಾಲಗಳನ್ನು ನೀಡುತ್ತಿದ್ದು ಅದರ ಪ್ರಯೋಜನ ಪಡೆದು ಗ್ರಾಹಕರು ಪ್ರಗತಿ ಹೊಂದುವ ಮೂಲಕ ಬ್ಯಾಂಕನ್ನು ಇನ್ನೂ ಪ್ರಗತಿ ಹೊಂದಲು ನಮ್ಮ ಜೊತೆ ಕೈಜೋಡಿಸುವಂತೆ ಅಧ್ಯಕ್ಷ ರೋಶನ್ ಡಿ ಸೋಜ ಇದೇ ವೇಳೆ ಮನವಿ ಮಾಡಿದರು.
ಎಲ್ಲಾ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಇರಿಸುವ ಮೂಲಕ ರೈತಾಪಿ ವರ್ಗದವರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ಇನ್ನಷ್ಟು ಅವಕಾಶ ಕಲ್ಪಿಸುವಂತೆ ಅವರು ಕೋರಿದರು.
0 comments:
Post a Comment