ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಂ ಯೆಚೂರಿ ಇನ್ನಿಲ್ಲ : ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ - Karavali Times ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಂ ಯೆಚೂರಿ ಇನ್ನಿಲ್ಲ : ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ - Karavali Times

728x90

12 September 2024

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಂ ಯೆಚೂರಿ ಇನ್ನಿಲ್ಲ : ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ

ನವದೆಹಲಿ, ಸೆಪ್ಟೆಂಬರ್ 12, 2024 (ಕರಾವಳಿ ಟೈಮ್ಸ್) : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಂ ಯೆಚೂರಿ (72) ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ನಿಧನರಾದರು. 

ಸೀತಾರಾಂ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದ ಏಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾಗಿದ್ದಾರೆ ಎಂದು ಪಕ್ಷ ಮತ್ತು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ ಎಫ್ ಐ) ಸದಸ್ಯರಾದ ಒಂದು ವರ್ಷದ ನಂತರ 1975ರಲ್ಲಿ ಸೀತಾರಾಮ್ ಯೆಚೂರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‍ವಾದಿ) ಗೆ ಸೇರಿದರು. 2015ರಲ್ಲಿ ಪ್ರಕಾಶ್ ಕಾರಟ್ ಅವರ ನಂತರ ಯೆಚೂರಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್‍ಯು) ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಗಿತ್ತು. 1977 ಮತ್ತು 1988 ರ ನಡುವೆ ಮೂರು ಬಾರಿ ಜೆಎನ್‍ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ ಯುಪಿಎ ಸರಕಾರವನ್ನು ರಚಿಸುವಲ್ಲಿ ಸೀತಾರಾಂ ಯೆಚೂರಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ

ಸೀತಾರಾಮ್ ಯಚೂರಿ ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಎಡ ಸಿದ್ದಾಂತದ ಪ್ರಖರ ಚಿಂತಕರಾಗಿದ್ದ ಯಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯೂ ಆಗಿದ್ದರು. ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಯಚೂರಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು. ಆ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರಚನೆಯಲ್ಲಿಯೂ ಅವರದ್ದೇ ಪ್ರಧಾನ ಪಾತ್ರ ಇತ್ತು. ಕಳೆದ ವರ್ಷ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿ, ಶುಭ ಹಾರೈಸಿದ್ದರು. ಈಗಿನ ‘ಇಂಡಿಯಾ’ ಒಕ್ಕೂಟ ಸ್ಥಾಪನೆಯಲ್ಲಿಯೂ ಅವರ ಕೊಡುಗೆ ಇದೆ. ಸೀತಾರಾಮ್ ಯಚೂರಿ ಅವರ ನಿಧನದಿಂದ ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ಯಚೂರಿ ಅವರ ಕುಟುಂಬ ಮತ್ತು ಸಂಗಾತಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಂ ಯೆಚೂರಿ ಇನ್ನಿಲ್ಲ : ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ Rating: 5 Reviewed By: karavali Times
Scroll to Top