ಬಂಟ್ವಾಳ, ಸೆಪ್ಟೆಂಬರ್ 24, 2024 (ಕರಾವಳಿ ಟೈಮ್ಸ್) : ಮನೆ ಮಂದಿ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ಕಳವುಗೈದ ಘಟನೆ ಸಜಿಪಮುನ್ನೂರು ಗ್ರಾಮದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಜಯಲಕ್ಷ್ಮಿ (52) ಅವರು ಸೆ 9 ರಂದು ಮನೆಗೆ ಬೀಗ ಹಾಕಿ, ತಾಯಿ ಮನೆ ಪುತ್ತೂರು ತಾಲೂಕಿನ ಸಂಟ್ಯಾರ್ ಗ್ರಾಮದ ಕೈಕಾರ್ ಎಂಬಲ್ಲಿಗೆ ಹೋಗಿರುತ್ತಾರೆ. ಸೆ 23 ರಂದು ಸಂಜೆ ಮನೆಗೆ ಹಿಂತಿರುಗಿ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಕಿಟಕಿಯ ಸರಳನ್ನು ಬಗ್ಗಿಸಿ ಜಖಂ ಮಾಡಿ ಒಳ ಪ್ರವೇಶಿಸಿದ ಕಳ್ಳರು ಮನೆಯ ಹಿಂಬದಿ ಬಾಗಿಲು ತೆರೆದು ಮನೆಯಲ್ಲಿದ್ದ ಗೋಡ್ರೇಜ್ ಮತ್ತು ಬೇಡ್ ರೂಮಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಲ್ಲದೆ ಗೋಡ್ರೇಜಿನಲ್ಲಿದ್ದ ಸುಮಾರು ಎರಡೂವರೆ ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25 ಸಾವಿರ ರೂಪಾಯಿ ನಗದು ಕಳವುಗೈದಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1.25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment