ಮನೆ ಭಾಷೆ ಬ್ಯಾರಿಯಾದರೂ ತುಳುವರ ವಿಷಯ ಬಂದಾಗ ಸದನದಲ್ಲಿ ತುಳುವಿನ ಪರ ಗಟ್ಟಿ ಧ್ವನಿಯಾದ ಸ್ಪೀಕರ್ ಯು ಟಿ ಖಾದರ್ ಅವರಿಗೆ ವಿಶೇಷ ಅಭಿನಂದನೆ : ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು
ಬಂಟ್ವಾಳ, ಸೆಪ್ಟೆಂಬರ್ 11, 2024 (ಕರಾವಳಿ ಟೈಮ್ಸ್) : ಶ್ರೀ ಗಣೇಶ ನಿಜವಾದ ವಿಶ್ವಗುರು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಬಣ್ಣಿಸಿದರು.
ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ-ಜಕ್ರಿಬೆಟ್ಟುವಿನಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 5 ದಿನಗಲ ಕಾಲ ನಡೆಯುವ 21ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಪ್ರಯುಕ್ತ 4ನೇ ದಿನವಾದ ಮಂಗಳವಾರ ರಾತ್ರಿ ನಡೆದ ಕೊನೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೇ 98 ಮಂದಿ ಮುಸ್ಲಿಮರೇ ಇರುವ ದೇಶವಾಗಿರುವ ಇಂಡೋನೇಷಿಯಾದಂತಹ ದೇಶದ ಕರೆನ್ಸಿಯೊಂದರಲ್ಲಿ ಕೂಡಾ ಶ್ರಿ ಗಣೇಶ ದೇವಮ ಭಾವಚಿತ್ರ ಇದೆ. ಈ ಮೂಲಕ ಮುಸ್ಲಿಂ ದೇಶದ ಜನ ಕೂಡಾ ಅಲ್ಲಿ ಗಣೇಶ ದೇವನಿಗೆ ಮನ್ನಣೆ ನೀಡುವ ಮೂಲಕ ವಿಶ್ವ ಭ್ರಾತೃತ್ವಕ್ಕೆ ಬೆಲೆ ಕಲ್ಪಿಸುವ ಮೂಲಕ ಧಾರ್ಮಿಕ ಅಸ್ಮಿತೆ ಮೆರೆದಿದ್ದಾರೆ. ಈ ಮೂಲಕ ಶ್ರೀ ಗಣೇಶ ವಿಶ್ವದ ನಾನಾ ಕಡೆ ಗೌರವಿಸಲ್ಪಡುವುದರೊಂದಿಗೆ ನಿಜವಾದ ವಿಶ್ವಗುರು ಆಗಿ ಗುರುತಿಸಲ್ಪಟ್ಟಿದ್ದಾನೆ ಎಂದು ಕೊಂಡಾಡಿದರು.
ಆಶಿರ್ವಚನಗೈದು ಮಾತನಾಡಿದ ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರು ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಮಾನವೀಯ ಸಂಬಂಧಗಳ ನಡುವೆ ಅಂತರ ಬಂದಿದೆ. ಅದನ್ನು ತುಂಬಲು ಪ್ರೀತಿಯಿಂದ ಮಾತ್ರ ಸಾಧ್ಯ. ದ್ವೇಷದಿಂದ ಸಾಧ್ಯವಿಲ್ಲ. ಯುವಕರಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಲು ಗಣೇಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿದೆ. ಆಧ್ಯಾತ್ಮಕ ಜಾಗೃತಿಯಾದರೆ ಮಾನವೀಯ ಮೌಲ್ಯ ಉಳಿಯಲು ಸಾಧ್ಯ ಎಂದರಲ್ಲದೆ ತುಳು ಭಾಷೆಯ ಅಭಿವೃದ್ದಿಗೆ ಸದನದಲ್ಲಿ ಧ್ವನಿ ಎತ್ತುವ ಮೂಲಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರ ಮನೆ ಭಾಷೆ ಬ್ಯಾರಿಯಾದರೂ ತುಳುವಿನ ವಿಚಾರಕ್ಕೆ ಬರುವಾಗ ವ್ಯಾವಹಾರಿಕವಾಗಿ ಭಾಷೆಯಾಗಿರುವ ತುಳುವಿನ ಪರವಾಗಿ ಆಳವಾಗಿ ಧ್ವನಿ ಎತ್ತಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಇದಕ್ಕಾಗಿ ಅವರಿಗೆ ಈ ಸಂದರ್ಭದಲ್ಲಿ ವಿಶೇಷ ಅಭಿನಂದನೆ ಸಲ್ಲಿಸುವಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮಾತನಾಡಿ, ಅಮೇರಿಕಾದಂತಹ ಜಗತ್ತಿನ ಮುಂದುವರಿದ ದೇಶಗಳು ಟ್ಯಾಕ್ಸ್ ಹಾಗೂ ರೆವಿನ್ಯೂ ಸಂಗ್ರಹದಿಂದಲೇ ನಡೆದರೆ, ಭಾರತ ದೇಶ ಮಾನವೀಯತೆ ಹಾಗೂ ಸೌಹಾರ್ದತೆಯಿಂದಲೇ ನಡೆಯುತ್ತಿದೆ. ಈ ಕಾರಣಕ್ಕೆ ಭಾರತ ವಿಶ್ವದಲ್ಲೇ ಸರ್ವಶ್ರೇಷ್ಠವಾಗಿದೆ. ಭಾರತ ದೇಶದ ಸರ್ವಶ್ರೇಷ್ಠತೆ ಅರಿಯಬೇಕಾದರೆ ಭಾರತ ಬಿಟ್ಟು ಇತರ ದೇಶಗಳಿಗೆ ಹೋಗಿ ನೋಡಿದಾಗಲೇ ಅರಿವಿಗೆ ಬರುತ್ತದೆ ಎಂದರಲ್ಲದೆ, ಸಮಾಜದ ಎಲ್ಲ ಧರ್ಮೀಯರನ್ನು, ಅವರ ಆಚರಣೆಗಳನ್ನು ಗೌರವಿಸುವ ನನ್ನ ಗುಣ ನಾನು ಮಣ್ಣಾದಾಗ ಮಾತ್ರ ನನ್ನ ಜೊತೆ ಮಣ್ಣಾಗಬಹುದೇ ವಿನಃ ಯಾರ ಟೀಕೆ-ಟಿಪ್ಪಣಿ, ವಿಮರ್ಶೆಗಳಿಂದಲೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಭಾರತೀಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವುದೇ ಸಾಮಾಜಿಕ ಜಾಲತಾಣಗಳ ಪ್ರಭಾವಗಳಿಂದಾಗಲೀ, ಆಧುನಿಕ ತಂತ್ರಜ್ಞಾನಗಳಿಂದಾಗಲೀ ಒಂದಷ್ಟೂ ಹಿಂದುಳಿದಿಲ್ಲ ಎನ್ನುವುದೇ ಭಾರತೀಯರ ಧಾರ್ಮಿಕತೆ ಯಾವ ರೀತಿ ಗಟ್ಟಿಯಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಸ್ಪೀಕರ್ ಖಾದರ್ ಅಭಿಮಾನ ವ್ಯಕ್ತಪಡಿಸಿದರು.
ಬೆಳ್ತಂಗಡಿ ಸುದ್ದಿ ಸಮೂಹ ಸಂಸ್ಥೆಗಳ ಅಡಳಿತ ನಿರ್ದೇಶಕ ಡಾ ಯು ಪಿ ಶಿವಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೆ ಮಾಯಿಲಪ್ಪ ಸಾಲ್ಯಾನ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಸಂಪತ್ ಕುಮಾರ್ ಶೆಟ್ಟಿ, ಸುಧಾಕರ ಶೆಣೈ ಖಂಡಿಗ ಮೊದಲಾದವರು ಉಪಸ್ಥಿತರಿದ್ದರು.
ರಾಜೀವ್ ಶೆಟ್ಟಿ ಎಡ್ತೂರು ಸ್ವಾಗತಿಸಿ, ಬೇಬಿ ಕುಂದರ್ ವಂದಿಸಿದರು. ರಾಜೀವ ಕಕ್ಕೆಪದವು ವಿವಿಧ ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಎಚ್ ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment