ಯೋಜನೆ ಮಂಜೂರಾತಿಗೆ ಶ್ರಮಿಸಿದ್ದ ಮಾಜಿ ಶಾಸಕರು, ಉದ್ಘಾಟಿಸಿದ್ದ ಹಾಲಿ ಶಾಸಕರು ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಪರಿಹಾರಕ್ಕೆ ಫಲಾನುಭವಿಗಳ ಆಗ್ರಹ
ಬಂಟ್ವಾಳ, ಅಕ್ಟೋಬರ್ 25, 2024 (ಕರಾವಳಿ ಟೈಮ್ಸ್) : ಸಿದ್ದರಾಮಯ್ಯ ಸರಕಾರದ ಬಡವರ ಪರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಗೆ ಬಂಟ್ವಾಳದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವ ಹಾಗೂ ಕ್ಯಾಂಟೀನ್ ಸಿಬ್ಬಂದಿಗಳ ಉತ್ತಮ ಸೇವೆಯ ಹೊರತಾಗಿಯೂ ಇಲ್ಲಿನ ಸ್ಥಳೀಯಾಡಳಿತ ಯೋಜನೆ ಬಗ್ಗೆ ತಾಳಿರುವ ತಾತ್ಸಾರ ಮನೋಭಾವದಿಂದಾಗಿ ಕ್ಯಾಂಟೀನಿನಲ್ಲಿ ಕಳೆದ ಕೆಲ ಸಮಯಗಳಿಂದ ಇರುವ ಕೆಲವೊಂದು ಸಮಸ್ಯೆಗಳು ಇನ್ನೂ ಪರಿಹಾರ ಆಗುತ್ತಿಲ್ಲ.
ಕ್ಯಾಂಟೀನಿನ ನಿರ್ವಹಣೆಯು ಪೂರ್ಣವಾಗಿ ಬಂಟ್ವಾಳ ಪುರಸಭೆಗೆ ವಹಿಸಿಕೊಡಲಾಗಿದ್ದು, ಕ್ಯಾಂಟೀನ್ ಆರಂಭಿಸುವ ಸಂದರ್ಭ ಇಲ್ಲಿಗೆ ಬರುವ ಬಡ ನಾಗರಿಕರಿಗಾಗಿ ಅತ್ಯುತ್ತಮ ರೀತಿಯ ಕುಡಿಯವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಿಸಿ, ತಣ್ಣನೆ ಹಾಗೂ ಸಾಧಾರಣ ನೀರಿನ ವ್ಯವಸ್ಥೆ ಒದಗಿಸುವ ಯಂತ್ರಗಳನ್ನು ಒದಗಿಸಲಾಗಿತ್ತು. ಅಲ್ಲದೆ ಕುಡಿಯಲು ಹಾಗೂ ಕೈ ತೊಳೆಯಲು ಪ್ರತ್ಯೇಕ ಜಾಗಗಳನ್ನು ಗೊತ್ತುಪಡಿಸಿ ಅಲ್ಲಿ ಪೈಪ್ ಲೈನ್ ಹಾಗೂ ಟ್ಯಾಪ್ ವ್ಯವಸ್ಥೆಗಳನ್ನೂ ಒದಗಿಸಲಾಗಿ ಎಲ್ಲವೂ ಸುಸಜ್ಜಿತವಾಗಿತ್ತು. ಆದರೆ ಇದೀಗ ಕಳೆದ ಕೆಲ ತಿಂಗಳುಗಳಿಂದ ಇಲ್ಲಿನ ಕುಡಿಯುವ ನೀರಿನ ಯಂತ್ರಗಳು ಹಾಳಾಗಿ ಹೋಗಿದ್ದು, ಕೈ ತೊಳೆಯುವ ಹಾಗೂ ಕುಡಿಯುವ ಜಾಗದಲ್ಲಿ ಟ್ಯಾಪ್ ಗಳು ಕೂಡಾ ಸುಸ್ಥಿತಿಯಲ್ಲಿಲ್ಲ. ಇದರಿಂದಾಗಿ ನೀರು ಪೋಲಾಗಿ ಪರಿಸರದ ಸ್ವಚ್ಛತೆಗೂ ಅಡ್ಡಿಯಾಗಿದೆ.
ಜೊತೆಗೆ ಇಲ್ಲಿನ ಆಹಾರ ವಸ್ತುಗಳ ತಯಾರಿಕೆಗೆ ತರಲಾಗುವ ಕಚ್ಚಾ ವಸ್ತುಗಳು ಕೆಡದಂತೆ ರಕ್ಷಿಸಲು ಒದಗಿಸಲಾಗಿರುವ ರೆಫ್ರಿಜರೇಟ್ ವ್ಯವಸ್ಥೆಯೂ ಹಾಳಾಗಿ ತಿಂಗಳುಗಳೇ ಕಳೆದಿವೆ. ಅಲ್ಲದೆ ಇಲ್ಲಿನ ಗ್ರೈಂಡರ್ ಕೂಡಾ ಕೆಟ್ಟು ಹೋಗಿವೆ. ಇದರಿಂದ ಇಲ್ಲಿನ ಸುಸಜ್ಜಿತ ವ್ಯವಸ್ಥೆಗೆ ತೀವ್ರ ತೊಡಕಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸ್ಥಳೀಯಾಡಳಿತಕ್ಕೆ ಮನವಿ ಮಾಡಲಾಗಿದ್ದರೂ ಉದಾಸೀನತೆ ತೋರಲಾಗುತ್ತಿದೆ ಎನ್ನಲಾಗಿದೆ. ಅಗತ್ಯವೇ ಇಲ್ಲದ ಕೆಲಸ-ಕಾರ್ಯಗಳಿಗೆ ಅದೆಷ್ಟೊ ಲಕ್ಷ ರೂಪಾಯಿಗಳನ್ನು ವ್ಯಯಿಸಿ ಅದ್ಯಾರನ್ನೋ ಮೆಚ್ಚಿಸಲು ಮುಂದಾಗುವ ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಇಂಜಿನಿಯರ್ ಗಳಿಗೆ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲು ಅದೇಕೋ ಒಂದಷ್ಟು ತಾತ್ಸಾರ ಮನೋಭಾವ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಸರಕಾರ ಕಳೆದ ಅವಧಿಯಲ್ಲಿ ಆರಂಭಿಸಿದ ಈ ಒಂದು ಬಡವರ ಪರ ಜನಪರ ಕಾರ್ಯಕ್ರಮವಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಂದು ಸಚಿವರಾಗಿದ್ದ ಬಿ ರಮಾನಾಥ ರೈ ಅವರು ಶಕ್ತಿ ಮೀರಿ ಪ್ರಯತ್ನಿಸಿದ ಹಿನ್ನಲೆಯಲ್ಲಿ ಬಂಟ್ವಾಳಕ್ಕೆ ಸುಸಜ್ಜಿತ ಇಂದಿರಾ ಕ್ಯಾಂಟೀನ್ ಮಂಜೂರುಗೊಂಡು ತಕ್ಷಣ ಜಾಗ ಗುರುತಿಸಿ, ಕಾಮಗಾರಿಯನ್ನೂ ಪೂರ್ಣಗೊಳಿಸಿ ಸುಸಜ್ಜಿತ ಇಂದಿರಾ ಕ್ಯಾಂಟೀನ್ ಜನರಿಗೆ ಅರ್ಪಣೆಯಾಗಿತ್ತು. ಕ್ಯಾಂಟೀನಿಗೆ ಶಂಕು ಸ್ಥಾಪನೆ ನೆರವೇರಿಸಿದ್ದ ರಮಾನಾಥ ರೈ ಅವರು ಅದು ಉದ್ಘಾಟನೆಗೊಳ್ಳುವ ಹೊತ್ತಿಗೆ ಮಾಜಿಯಾಗಿದ್ದ ಹಿನ್ನಲೆಯಲ್ಲಿ ಹಾಲಿ ಶಾಸಕ ಯು ರಾಜೇಶ್ ನಾಯಕರು ಅವರು ಈ ಮಹತ್ವದ ಯೋಜನೆಯನ್ನು ಮಾಜಿ ಸಚಿವರ ಉಪಸ್ಥಿತಿಯಲ್ಲೇ ಉದ್ಘಾಟಿಸಿದ್ದರು. ಇದೀಗ ಸ್ಥಳೀಯಾಡಳಿತದ ತಾತ್ಸರ ಮನೋಭಾವದಿಂದ ಕೆಟ್ಟು ಹೋಗಿರುವ ಇಲ್ಲಿನ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ಬಂಟ್ವಾಳಕ್ಕೆ ತರುವಲ್ಲಿ ಮುತುವರ್ಜಿ ವಹಿಸಿದ್ದ ಮಾಜಿ ಶಾಸಕರು ಹಾಗೂ ಉದ್ಘಾಟಿಸಿದ್ದ ಹಾಲಿ ಶಾಸಕರು ತಕ್ಷಣ ಜಂಟಿಯಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ಇಂದಿರಾ ಕ್ಯಾಂಟೀನ್ ಯೋಜನೆಯ ಫಲಾನುಭವಿ ಬಡ ನಾಗರಿಕರು ಆಗ್ರಹಿಸಿದ್ದಾರೆ.
0 comments:
Post a Comment