ಬಂಟ್ವಾಳ, ಅಕ್ಟೋಬರ್ 05, 2024 (ಕರಾವಳಿ ಟೈಮ್ಸ್) : ನಿವೃತ್ತ ಸೈನಿಕನ ಕೈಯಿಂದ ಲಕ್ಷಾಂತರ ರೂಪಾಯಿ ಹಣವಿದ್ದ ಹ್ಯಾಂಡ್ ಬ್ಯಾಗನ್ನು ಬ್ಯಾಂಕಿನಿಂದಲೇ ಎಗರಿಸಿದ ಪ್ರಕರಣವನ್ನು ತಿಂಗಳೊಳಗೆ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ನಗದು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ (32) ಎಂದು ಗುರುತಿಸಲಾಗಿದೆ. ಈತನನ್ನು ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿಂದ ಪೊಲೀಸರು ಬಂಧಿಸಿದ್ದು, ಆರೋಪಿ ಕೈಯಿಂದ 80 ಸಾವಿರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ನಿವಾಸಿ ಅಂಬ್ರೋಸ್ ಡಿ’ಸೋಜ (72) ಎಂಬವರು ಸೆ 4 ರಂದು ಬೆಳಿಗ್ಗೆ 50 ಸಾವಿರ ರೂಪಾಯಿ ನಗದು ಹಣವಿದ್ದ ತನ್ನ ಪರ್ಸನ್ನು ಹ್ಯಾಂಡ್ ಬ್ಯಾಗಿನಲ್ಲಿರಿಸಿ ಮನೆಯಿಂದ ಹೊರಟು ಬಿ ಸಿ ರೋಡಿನಲ್ಲಿ ತನ್ನ ಖಾತೆ ಹೊಂದಿರುವ ಎಸ್ ಬಿ ಐ ಬ್ಯಾಂಕಿಗೆ ತೆರಳಿ, ಬ್ಯಾಂಕಿನಿಂದ ಮತ್ತೆ 80 ಸಾವಿರ ರೂಪಾಯಿ ಹಣವನ್ನು ಡ್ರಾ ಮಾಡಿ, ಅದೇ ಹ್ಯಾಂಡ್ ಬ್ಯಾಗಿನಲ್ಲಿ ಇರಿಸಿರುತ್ತಾರೆ. ಬಳಿಕ ಹ್ಯಾಂಡ್ ಬ್ಯಾಗನ್ನು ಬ್ಯಾಂಕಿನ ಟೇಬಲ್ ಮೇಲಿರಿಸಿ, ಪಾಸ್ ಬುಕ್ ಎಂಟ್ರಿ ಮಾಡಿಸಿ ಮರಳಿ ಹ್ಯಾಂಡ್ ಬ್ಯಾಗ್ ತೆಗೆದುಕೊಳ್ಳಲು ಬಂದಾಗ, ಇರಿಸಿದ್ದ ಸ್ಥಳದಲ್ಲಿ ಹ್ಯಾಂಡ್ ಬ್ಯಾಗ್ ಕಾಣದಾಗಿದೆ. ಬ್ಯಾಂಕ್ ಒಳಗಡೆ ಹುಡುಕಾಡಿ ವಿಚಾರಿಸಿದರೂ ಬ್ಯಾಗ್ ಸಿಕ್ಕಿರಲಿಲ್ಲ.
ಬಳಿಕ ಹ್ಯಾಂಡ್ ಬ್ಯಾಗ್ ಬಿ ಸಿ ರೋಡು-ಕೈಕುಂಜೆ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಆದರೆ ಅದರಲ್ಲಿದ್ದ ನಗದು ಹಣ ನಾಪತ್ತೆಯಾಗಿತ್ತು. ನಿವೃತ್ತ ಸೈನಿಕನ ಹ್ಯಾಂಡ್ ಬ್ಯಾಗಿನಲ್ಲಿದ್ದ ಒಟ್ಟು 1.30 ಲಕ್ಷ ರೂಪಾಯಿ ನಗದು ಹಣವನ್ನು ಆರೋಪಿ ಎಗರಿಸಿ ಪರಾರಿಯಾಗಿದ್ದ.
ಸದ್ರಿ ಪ್ರಕರಣದ ಪತ್ತೆಗಾಗಿ ಜಿಲ್ಲಾ ಎಸ್ಪಿ ಯತೀಶ್ ಎನ್ ಹಾಗೂ ಎಡಿಶನಲ್ ಎಸ್ಪಿ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಡಿವೈಎಸ್ಪಿ ಎಸ್ ವಿಜಯಪ್ರಸಾದ್ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪಿಎಸೈ ಹರೀಶ್ ಎಂ ಆರ್ ಅವರ ಉಸ್ತುವಾರಿಯಲ್ಲಿ ಸಿಬ್ಬಂದಿಗಳಾದ ಹರಿಶ್ಚಂದ್ರ, ರಾಧಾಕೃಷ್ಣ, ಬಸವರಾಜ ಎಚ್ ಕೆ, ಕುಮಾರ್ ಎಚ್ ಕೆ, ಅಶೋಕ್ ಹಾಗೂ ರಂಜಾನ್ ಅವರನ್ನೊಳಗೊಂಡ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು. ಇದೀಗ ಕಾರ್ಯಾಚರಣೆ ನಡೆಸಿದ ಈ ವಿಶೇಷ ಪೊಲೀಸ್ ತಂಡ ಘಟನೆ ನಡೆದು ತಿಂಗಳೊಳಗೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
0 comments:
Post a Comment