ಪುತ್ತೂರು ಅಕ್ಟೋಬರ್ 17, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಅಕ್ರಮ ದನ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಪುತ್ತೂರು ನಗರ ಪೊಲೀಸರು ಜಾನುವಾರು ಸಹಿತ ಆರೋಪಿ ಚಾಲಕನನ್ನು ಬಂಧಿಸಿದ ಘಟನೆ ಪುತ್ತೂರು ಕಸಬಾ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಬುಧವಾರ ನಡೆದಿದೆ.
ಬಂಧಿತ ಆರೋಪಿಯನ್ನು ಅಟೋ ಚಾಲಕ ಇಬ್ರಾಹಿಂ (59) ಎಂದು ಹೆಸರಿಸಲಾಗಿದೆ. ಪುತ್ತೂರು ಬೈಪಾಸ್ ರಸ್ತೆಯಲ್ಲಿ ಮುಂಡೂರು ಕಡೆಯಿಂದ ಬನ್ನೂರು ಕಡೆಗೆ ಕೆಎ21 ಸಿ3670 ನೋಂದಣಿ ಸಂಖ್ಯೆಯ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ, ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪುತ್ತೂರು ನಗರ ಪೊಲೀಸರು ಅಟೋ ರಿಕ್ಷಾವನ್ನು ಪುತ್ತೂರು ಬೈಪಾಸ್ ರಸ್ತೆಯ ಶ್ರೀಮಾತಾ ಸರ್ವಿಸ್ ಸ್ಟೇಷನ್ ಬಳಿ ತಡೆದು ಪರಿಶೀಲಿಸಿದಾಗ ಅಕ್ರಮ ದನ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಅಟೋ ರಿಕ್ಷಾದಲ್ಲಿ ಒಂದು ದನವನ್ನು ಹಿಂಸಾತ್ಮಕವಾಗಿ ಮಲಗಿಸಿ ಕಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಅಟೋ ಚಾಲಕ ಇಬ್ರಾಹಿಂ ಅವರಲ್ಲಿ ವಿಚಾರಿಸಿದಾಗ ಮುಂಡೂರಿನಿಂದ ಬನ್ನೂರಿಗೆ ಅಟೋ ರಿಕ್ಷಾದಲ್ಲಿ ಕರುವನ್ನು ತುಂಬಿಸಿಕೊಂಡು ಹೋಗುತ್ತಿದ್ದು, ಸಾಗಾಟ ಮಾಡಲು ಸಹಾಯಕ್ಕಾಗಿ ತನ್ನ ಹೆಂಡತಿ ಮತ್ತು ತನ್ನ ಸಹೋದರನ ಹೆಂಡತಿಯನ್ನು ಕರೆತಂದಿರುವುದಾಗಿ ತಿಳಿಸಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment