ಮಂಗಳೂರು, ಎಪ್ರಿಲ್ 30, 2025 (ಕರಾವಳಿ ಟೈಮ್ಸ್) : ಮಂಗಳೂರು ಹೊರವಲಯದ ಕುಡುಪು ಸಮೀಪ ಗುಂಪು ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದ್ದು, ಕೇರಳ ರಾಜ್ಯದ ವಯನಾಡು ಪುಳುಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಮಾಹಿತಿ ಅರಿತ ಕೂಡಲೇ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ವಯನಾಡು ಶಾಸಕ ಅಡ್ವಕೇಟ್ ಟಿ. ಸಿದ್ದೀಕ್ ಅವರನ್ನು ಸಂಪರ್ಕಿಸಿದ್ದು, ತಕ್ಷಣವೇ ರಾತ್ರಿ ಹೊತ್ತಿನಲ್ಲಿ ಮೃತನ ಸಹೋದರ ಅಬ್ದುಲ್ ಜಬ್ಬಾರ್ ಹಾಗೂ ಕುಟುಂಬಸ್ಥರು ಮಂಗಳೂರಿಗೆ ತಲುಪಿ ಮೃತ ದೇಹದ ಗುರುತು ಪತ್ತೆ ಹಚ್ಚಿದ್ದಾರೆ.
ಬಳಿಕ ಮೃತದೇಹವನ್ನು ಮಂಗಳೂರು ಬಂದರಿನ ಜೀನತ್ ಭಕ್ಷ್ ಜುಮಾ ಮಸೀದಿಯಲ್ಲಿ ಸ್ನಾನ ಮಾಡಿಸಿ, ಮಯ್ಯತ್ತ್ ನಮಾಜಿನ ವಿಧಿ ವಿಧಾನಗಳ ಪೂರ್ತಿಗೊಳಿಸಿ ಬುಧವಾರ ಮುಂಜಾನೆ 5 ಗಂಟೆಗೆ ಪೆÇಲೀಸ್ ಬೆಂಗಾಲಿನೊಂದಿಗೆ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲಾಯಿತು.
ಮೂಲತಃ ಮಲಪ್ಪುರಂ ಜಿಲ್ಲೆಯವರಾದ ಅಶ್ರಫ್ ಕುಟುಂಬ ಕೆಲವು ವರ್ಷಗಳ ಹಿಂದೆ ವಯನಾಡ್ ಜಿಲ್ಲೆಗೆ ಬಂದು ನೆಲೆಸಿದೆ. ಮೃತ ಅಶ್ರಫ್ ತಂದೆ, ತಾಯಿ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ನಿರ್ದಿಷ್ಟ ಉದ್ಯೋಗ ಇಲ್ಲದ ಅಶ್ರಫ್ ಊರೂರು ಸುತ್ತಿ ಸಿಕ್ಕಿದ ಉದ್ಯೋಗ ನಿರ್ವಹಿಸಿ ಜೀವಿಸುತ್ತಿದ್ದನಲ್ಲದೆ ಆಗಾಗ ಮನೆಗೆ ತೆರಳಿ ತಂದೆ-ತಾಯಿಯನ್ನು ನೋಡಿಕೊಂಡು ಬರುತ್ತಿದ್ದ ಎನ್ನಲಾಗುತ್ತಿದೆ.
ಸ್ಪೀಕರ್ ಯು. ಟಿ. ಖಾದರ್ ಅವರ ನಿರ್ದೇಶನದಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ ಕೆ ಶಾಹಲ್ ಹಮೀದ್, ಮಾಜಿ ಮೇಯರ್ ಕೆ ಅಶ್ರಫ್, ಪ್ರಮುಖರಾದ ಹರ್ಷದ್ ವರ್ಕಾಡಿ, ಸುಹೈಲ್ ಕಂದಕ್, ಸುನಿಲ್ ಬಜಲಕೇರಿ, ಲಾರೆನ್ಸ್ ಡಿ’ಸೋಜ, ವಾಹಿದ್ ಕುದ್ರೋಳಿ ಮೊದಲಾದವರು ಸ್ಥಳದಲ್ಲಿದ್ದು ಪ್ರಕ್ರಿಯೆಗಳಿಗೆ ಸಹಕರಿಸಿದ್ದಾರೆ.
0 comments:
Post a Comment