ಮೈಸೂರು, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ಕಾಶ್ಮೀರದ ಪಹಲ್ಗಾಮ್ ಘಟನೆ ದುಷ್ಕøತ್ಯ ನಡೆಸಿದ ವ್ಯಕ್ತಿಗಳು ಪವಿತ್ರ ಇಸ್ಲಾಮಿನ ಹೆಸರು ಬಳಸಿ ಕೃತ್ಯ ಎಸಗಿದ್ದು ಸಾಬೀತಾದರೆ ಅಂತಹ ವ್ಯಕ್ತಿಗಳನ್ನು ಯಾವುದೇ ವಿಚಾರಣೆಗೆ ಒಳಪಡಿಸದೆ ನಿರ್ದಾಕ್ಷಿಣ್ಯವಾಗಿ ಗಲ್ಲಿಗೇರಿಸಿ ಎಂದು ಮೈಸೂರು ಅತಾಯೆ ರಸೂಲ್ ಮೂವ್ ಮೆಂಟ್ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮಿನಲ್ಲಿ ನಡೆದಿರುವುದು ಅಕ್ಷರಶಃ ಪೈಶಾಚಿಕ ಕೃತ್ಯವಾಗಿದ್ದು, ಮನುಷ್ಯ ಜೀವವನ್ನು ಕೈಯಾರೆ ಕೊಲ್ಲಲು ಪವಿತ್ರ ಇಸ್ಲಾಮಿನಲ್ಲಿ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಯಾವುದೇ ಧರ್ಮೀಯನಾಗಿದ್ದರೂ ಮನುಷ್ಯ ಜೀವವನ್ನು ಕೊಲ್ಲುವುದು ಇಡೀ ಮಾನವ ಸಮೂಹವನ್ನೇ ಕೊಂದಂತೆ ಎಂದು ಪವಿತ್ರ ಇಸ್ಲಾಂ ಸಾರಿದ್ದು, ಇಂತಹ ಕೃತ್ಯಗಳಿಗೆ ಇಸ್ಲಾಮ್ ಧರ್ಮದಲ್ಲಿ ಯಾವುದೇ ಕ್ಷಮೆ ಇಲ್ಲ. ಧರ್ಮದ ಹೆಸರಿನಲ್ಲಿ ಅಂತಹ ಕೃತ್ಯ ಎಸಗಿರುವುದು ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ನೇಣುಗಂಬಕ್ಕೇರಿಸಲು ಯಾವುದೇ ಸರಕಾರವೂ ಹಿಂದೆ ಮುಂದೆ ನೋಡಬಾರದು. ಇಸ್ಲಾಮಿನ ಸರ್ವ ಅನುಯಾಯಿಗಳು ಕೂಡಾ ಬಯಸುವುದು ಇದನ್ನೇ ಆಗಿದೆ.
ಕೃತ್ಯದಲ್ಲಿ ಮಡಿದವರಿಗೆ ಹಾಗೂ ಗಾಯಗೊಂಡವರಿಗೆ ಸರಕಾರ ಸಕಲ ವ್ಯವಸ್ಥೆಗಳನ್ನು, ಪರಿಹಾರಗಳನ್ನೂ ಒದಗಿಸಬೇಕು. ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರ ಸರಕಾರ ಹದ್ದಿನ ಕಣ್ಣಿಟ್ಟು ಅಲ್ಲಿನ ನಾಗರಿಕರು ಹಾಗೂ ಪ್ರವಾಸಿಗರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಸೇನಾಪಡೆಗಳಿಗೂ ದೇಶದ ನಾಗರಿಕರ ರಕ್ಷಣೆಗೆ ಬೇಕಾದ ಸಕಲ ವ್ಯವಸ್ಥೆಗಳನ್ನೂ ಸರಕಾರ ಒದಗಿಸಬೇಕು. ಮೃತರ ಕುಟುಂಬಕ್ಕೆ ಸರ್ವಶಕ್ತನಾದ ಅಲ್ಲಾಹನು ದುಃಖವನ್ನು ಸಹಿಸುವ ಶಕ್ತಿಯನ್ನು ನೀಡುವುದರ ಜೊತೆಗೆ ಗಾಯಾಳುಗಳು ಶೀಘ್ರ ಚೇತರಿಸಲಿ ಎಂದವರು ತಮ್ಮ ಸಂತಾಪ ಹಾಗೂ ಖಂಡನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment